ಶೃಂಗೇರಿ: ಗಣಪತಿ ಹಬ್ಬ ಹಾಗೂ ಮೊಹರಂ ಒಟ್ಟಾಗಿ ಬರುತ್ತಿದ್ದು, ಯಾವುದೇ ಗಲಭೆ, ಗೊಂದಲಕ್ಕೆ ಅವಕಾಶವಿಲ್ಲದಂತೆ ಮುಂಜಾಗೃತಾ ಕ್ರಮ ವಹಿಸಬೇಕೆಂದು ವೃತ್ತ ನಿರೀಕ್ಷಕ ಬಿ.ಎಂ.ಸಿದ್ಧರಾಮಯ್ಯ ಹೇಳಿದರು.
ಪೊಲೀಸ್ ಠಾಣೆಯಲ್ಲಿ ಗಣಪತಿ ಹಾಗೂ ಮೊಹರಂ ಅಂಗವಾಗಿ ನಡೆದ ಶಾಂತಿ ಸಭೆಯಲ್ಲಿ ಮಾತನಾಡಿದರು.
ಸಾರ್ವಜನಿಕ ಗಣೇಶೋತ್ಸವದ ಗಣಪತಿಯ ವಿಸರ್ಜನೆ ಹಗಲು ವೇಳೆ ಮಾಡುವುದು ಸೂಕ್ತ. ತಾಲೂಕಿನ ಸಾರ್ವಜನಿಕ ಗಣಪತಿ ಉತ್ಸವ ಸಮಿತಿಯವರು ರಾತ್ರಿ 10ರ ನಂತರ ಧ್ವನಿವರ್ಧಕ ಬಳಸಬಾರದು. ಧ್ವನಿವರ್ಧಕಕ್ಕೆ ಅಗತ್ಯ ಪರವಾನಗಿ ಪಡೆಯಬೇಕು ಎಂದು ಸೂಚಿಸಿದರು.
ತಾಲೂಕಿನ 39 ಕಡೆ ಸಾರ್ವಜನಿಕ ಹಾಗೂ ಶಾಲಾ ಆವರಣಗಳಲ್ಲಿ ಗಣಪತಿ ಪ್ರತಿಷ್ಠಾಪಿಸಲಾಗುತ್ತಿದೆ. ಗಣಪತಿ ವಿಸರ್ಜಿಸುವಾಗ ಕರ್ಕಶ ಸಂಗೀತ ಹಾಕಿ ಸಾರ್ವಜನಿಕರ ಭಾವನೆಗೆ ಧಕ್ಕೆ ತರಬಾರದು ಮತ್ತು ಮದ‌್ಯ ಸಂಗ್ರಹಿಸಿಡಬಾರದು. ವಿಸರ್ಜನೆಯ ಸಂದರ್ಭದಲ್ಲಿ ನದಿ, ಕೆರೆಗಳಿಗೆ ಇಳಿಯುವಾಗ ಜಾಗರೂಕತೆ ಅಗತ್ಯ. ಗಣಪತಿ ಸೇವಾ ಸಮಿತಿ ಪದಾಧಿಕಾರಿಗಳ ವಿವರ, ಮೊಬೈಲ್ ನಂಬರ್ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು, ವಿಸರ್ಜನಾ ಕಾರ್ಯಕ್ರಮದ ಬಗ್ಗೆ ಮುಂಚಿತವಾಗಿಯೇ ಠಾಣೆಗೆ ಮಾಹಿತಿ ನೀಡಬೇಕು. ಶಾಂತಿ, ಸುವ್ಯವಸ್ಥೆ ಕಾಪಾಡಬೇಕು. ಕೋಮು ಸೌಹಾರ್ದತೆಯಿಂದ ಶಾಂತಿ ಯುತವಾಗಿರಲು ಸಹಕರಿಸಬೇಕು. ಯಾವುದೇ ಸಂದರ್ಭದಲ್ಲಿ ಇಲಾಖೆಯ ಸಹಕಾರ ಬೇಕಾದಲ್ಲಿ ಕೂಡಲೇ ತಿಳಿಸಬೇಕು ಎಂದರು.
ಎಎಸ್‌ಐ ಪರ್ವತೇಗೌಡ ಮಾತ ನಾಡಿ, ಶಾಂತಿಯುತವಾಗಿ ಹಬ್ಬ ಆಚರಿಸಲು ಪೊಲೀಸ್ ಇಲಾಖೆ ಯೊಂದಿಗೆ ಸಂಘಟಕರು ಸಹಕರಿಸ ಬೇಕು. ಯಾವುದೇ ಸಂದರ್ಭ ಸಮಸ್ಯೆ, ವ್ಯಾಜ್ಯ, ಕಾನೂನು ಬಾಹಿರ ಚಟುವಟಿಕೆ ಕಂಡು ಬಂದಲ್ಲಿ ಠಾಣೆಗೆ ಮಾಹಿತಿ ನೀಡಬೇಕೆಂದು ತಿಳಿಸಿದರು. ಸಭೆಯಲ್ಲಿ ಎಎಸ್‌ಐ ಸುಧೀರ್, ಸಾರ್ವಜನಿಕ ಮಹಾಗಣಪತಿ ಸೇವಾ ಸಮಿತಿ ಅಧ್ಯಕ್ಷ ಬಿ.ಶಿವಶಂಕರ್, ಜಾಮೀಯ ಮಸೀದಿಯ ಅನ್ವರ್, ಶಾಹಬುದ್ದೀನ್, ನಿಸಾರ್, ಆಲ್ ಬದ್ರಿಯಾ ಜುಮ್ಮ ಮಸೀದಿಯ ಲತೀಫ್, ಮಹಮ್ಮದ್ ಮತ್ತಿತರರು ಇದ್ದರು.