Advertisement

ಕೃಷಿಯಂತ್ರಗಳು ರೈತರಿಗೆ ವರದಾನ

04:56 PM Apr 28, 2019 | Naveen |

ಶೃಂಗೇರಿ: ಕಾರ್ಮಿಕರ ಕೊರತೆ ಇರುವ ಸಂದರ್ಭದಲ್ಲಿ ಯಂತ್ರಗಳು ರೈತರಿಗೆ ವರದಾನವಾಗಿದೆ ಎಂದು ಪ್ರಗತಿಪರ ಕೃಷಿಕ ಅಗಲಿ ನಾಗೇಶರಾವ್‌ ಹೇಳಿದರು

Advertisement

ಬೇಗಾರ್‌ ಗ್ರಾಪಂನ ಕೃತಿಕ್‌ ಅವರ ತೋಟದಲ್ಲಿ ಶುಕ್ರವಾರ ಏರ್ಪಡಿಸಿದ್ದ ಅಡಕೆ ಮರವೇರಿ ಔಷಧ‌ ಸಿಂಪಡಿಸುವ ನೂತನ ಯಂತ್ರದ ಪ್ರಾತ್ಯಕ್ಷಿಕೆ ಸಂದರ್ಭದಲ್ಲಿ ಮಾತನಾಡಿದರು. ಮಲೆನಾಡಿನ ಅಡಕೆ ತೋಟದಲ್ಲಿ ಸಕಾಲಕ್ಕೆ ಕೊಳೆ ರೋಗದ ಔಷ ಧ ಸಿಂಪಡಿಸುವುದು ರೈತರಿಗೆ ಸವಾಲಾಗಿದ್ದು, ನುರಿತ ಕಾರ್ಮಿಕರ ಕೊರತೆ ಇರುವ ಸಂದರ್ಭದಲ್ಲಿ ಯಾಂತ್ರಿಕೃತ ತಂತ್ರಜ್ಞಾನ ಅಗತ್ಯ. ಕಳೆದ ಸಾಲಿನಲ್ಲಿ ಸುರಿದ ಭಾರಿ ಮಳೆಯಿಂದ ಬಹುತೇಕ ರೈತರು ಅಡಕೆ ಬೆಳೆಯನ್ನೇ ಕಳೆದುಕೊಳ್ಳಬೇಕಾಯಿತು. ಮಳೆಗಾಲದ ಎರಡು ತಿಂಗಳು ಮಳೆ ಬಿಟ್ಟ ಅವಧಿಯೇ ಕಡಿಮೆಯಾಗಿದ್ದು, ಈ ಸಂದರ್ಭದಲ್ಲಿ ಕೊನೆಗಾರರ ಕೊರತೆಯಿಂದ ಎಲ್ಲಾ ತೋಟದಲ್ಲಿ ಔಷಧ ಹೊಡೆಯಲು ಸಾಧ್ಯವಾಗಿಲ್ಲ. ಆದರೆ ಇದಕ್ಕೆ ಸೂಕ್ತವಾದ ಯಂತ್ರವಿದ್ದರೆ, ಔಷಧ ಸಿಂಪಡಣೆ ಮಾಡಬಹುದಾಗಿದೆ. ಗಟಾರ್‌ ಮಿಷನ್‌ ಮೂಕಲ ಔಷಧ ಸಿಂಪಡಿಸುವ ವಿಧಾನದಿಂದ ಪವರ್‌ ಸ್ಪ್ರೇಯರ್‌ ಬಂದಾಗ ರೈತರಿಗೆ ಅನುಕೂಲ ಆಗುತ್ತಿತ್ತು. ಆದರೆ ಕಾರ್ಮಿಕರು ಮರವೇರುವುದು ಅನಿವಾರ್ಯವಾಗಿದ್ದು, ಇದೀಗ ಇಂತಹ ಯಂತ್ರಗಳ ಸಂಶೋಧನೆ ಆಗುತ್ತಿರುವುದು ರೈತರಿಗೆ ಆಶಾದಾಯಕ ಬೆಳವಣಿಗೆಯಾಗಿದೆ ಎಂದರು.

ಕೃಷಿಕ ಬೇಗಾರ್‌ ಗೋಪಾಲರಾವ್‌ ಮಾತನಾಡಿ, ಈಗಾಗಲೇ ಸಾಕಷ್ಟು ಯಂತ್ರೋಪಕರಣ ರೈತರು ಬಳಕೆ ಮಾಡುತ್ತಿದ್ದರೂ, ಅಡಕೆ ಮರಕ್ಕೆ ಔಷಧ ಸಿಂಪಡಣೆಗೆ ಮಾತ್ರ ಸೂಕ್ತ ಯಂತ್ರ ಆವಿಷ್ಕಾರವಾಗಿರಲಿಲ್ಲ. ಇದೀಗ ಅಂತ‌ಹ ಯಂತ್ರ ತಯಾರಿಸಿ, ಅಡಕೆ ಮರವನ್ನು ಏರಿ ಔಷಧ ಸಿಂಪಡಿಸುವ ಯಂತ್ರ ರೈತರಿಗೆ ಹೆಚ್ಚು ಅನುಕೂಲವಾಗಲಿದೆ. ಮಳೆ ಕಡಿಮೆಯಾದಾಗ ನಮ್ಮಲ್ಲಿ ಯಂತ್ರವು ಇದ್ದರೆ ಸಕಾಲಕ್ಕೆ ಔಷಧ ಸಿಂಪಡಿಸಿ, ಬೆಳೆಯನ್ನು ಉಳಿಸಿಕೊಳ್ಳಬಹುದಾಗಿದೆ ಎಂದರು.

ವಿಶ್ವಾಸ್‌ ಯಂತ್ರದ ಚಟುವಟಿಕೆ ಬಗ್ಗೆ ಮಾಹಿತಿ ನೀಡಿ,ಯಂತ್ರವು ಮರವೆನ್ನೇರಿ ಸುತ್ತಲಿನ ಮರಕ್ಕೆ ಔಷಧ ಸಿಂಪಡಿಸುವಂತೆ ವಿನ್ಯಾಸ ಮಾಡಲಾಗಿದೆ. ಕೇವಲ ಇಬ್ಬರು ನಿರ್ವಹಣೆ ಮಾಡಬಹುದಾದ ಯಂತ್ರವಾಗಿದೆ ಎಂದರು.

ಶ್ರೀಕಂಠ ಗೌಡ, ಅಣ್ಕುಳಿ ಲಕ್ಷ್ಮೀಶ, ಹೂವಪ್ಪ ಗೌಡ, ಬೇಗಾರ್‌ ಸತ್ಯನಾರಾಯಣ, ನಾರಾಯಣ, ರಾಧಾಕೃಷ್ಣ ಮತ್ತಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next