Advertisement

ಮಲೆನಾಡು ಜಾನಪದ ಕಲೆಗಳ ಸಂಗಮ

04:40 PM Dec 04, 2019 | Naveen |

ಶೃಂಗೇರಿ: ಮಲೆನಾಡು ಜಾನಪದ ಮತ್ತು ವಿಶಿಷ್ಟ ಕಲೆಗಳ ಅತ್ಯುತ್ತಮ ಸಮಾಗಮದ ಪ್ರದೇಶವಾಗಿದೆ ಎಂದು ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯ ಎಚ್‌.ಎಂ.ನಾಗರಾಜ ರಾವ್‌ ಹೇಳಿದರು.

Advertisement

ಮೆಣಸೆಯ ರಾಜೀವ ಗಾಂಧಿ ಕಾಲೇಜು ಆವರಣದಲ್ಲಿ ಶ್ರೀ ಭಾರತೀತೀರ್ಥ ಸಾಂಸ್ಕೃತಿ ಕೇಂದ್ರ ಟ್ರಸ್ಟ್‌ ಮತ್ತು ಕಾಳಿಂಗನಾವಡ ಪ್ರತಿಷ್ಠಾನ ಜಂಟಿಯಾಗಿ ಆಯೋಜಿಸಿದ್ದ ರಂಗಕಾರ್ತಿಕ ನಾಟಕೋತ್ಸವದಲ್ಲಿ ಮಾತನಾಡಿದರು.

ಈ ಭಾಗದಲ್ಲಿ ರಂಗಭೂಮಿಯನ್ನು ಜೀವಂತವಾಗಿಟ್ಟಿರುವ ರಮೇಶ್‌ ಬೇಗಾರ್‌ ಗರಡಿಯನ್ನು ಸೇರಿದ್ದರಿಂದ ನಟನಾಗಿ ಮತ್ತು ಸಂಘಟನೆಯಲ್ಲಿ ನನ್ನನ್ನು ತೊಡಗಿಸಿಕೊಳ್ಳಲು ಸಾಧ್ಯವಾಯಿತು. ಜಿಲ್ಲೆಯ ಒಟ್ಟಾರೆ ನಾಟಕ ಚಟುವಟಿಕೆಯಲ್ಲಿ ಮುಂಚೂಣಿಯಲ್ಲಿರುವ ಶೃಂಗೇರಿಯಲ್ಲಿ ಅಕಾಡೆಮಿ ಮೂಲಕ ಒಂದಷ್ಟು ಪ್ರಾಯೋಗಿಕ ಕೆಲಸ ಮಾಡಲು ಉದ್ದೇಶಿಸಿದೆ ಎಂದು ತಿಳಿಸಿದರು.

ಕೊಪ್ಪದ ಡಾ| ಉದಯ ಶಂಕರ್‌ ಮಾತನಾಡಿ, ರಂಗಕಲೆ ಒಂದು ಜೀವಂತ ಮತ್ತು ಸಮಷ್ಟಿ ಕಲೆಯಾಗಿದೆ. ನಾಟಕ ಹೊಸ ತಲೆಮಾರನ್ನು ತಲುಪಬೇಕಾಗಿದೆ. ಇಂದಿನ ಯುವ ಜನಾಂಗವನ್ನು ತೊಡಗಿಸಬೇಕು ಎಂದು ಹೇಳಿದರು.

ಪತ್ರಕರ್ತ ಎಚ್‌.ಜಿ. ರಾಘವೇಂದ್ರ ಮಾತನಾಡಿ, ಶೃಂಗೇರಿಯ ಭಾರತೀತೀರ್ಥ ಸಂಸ್ಥೆಯಿಂದಾಗಿ ಅಪರಿಚಿತವಾದ ಕಲಾ ಪ್ರಕಾರವನ್ನು ಅತೀ ಹೆಚ್ಚು ನೋಡಿದ ಭಾಗ್ಯ ಈ ಭಾಗದ ಕಲಾಭಿಮಾನಿಗಳದ್ದಾಗಿದೆ ಎಂದರು. ಪುಷ್ಪಾ ಲಕ್ಷ್ಮೀ ನಾರಾಯಣ್‌ ಮಾತನಾಡಿ, ಸಾಂಸ್ಕೃತಿಕ ಕ್ಷೇತ್ರದಲ್ಲಿ ದುಡಿಯುತ್ತಿರುವ ಮಲೆನಾಡ ಮಹನೀಯರ ದಾಖಲೀಕರಣ ಮಾಡಬೇಕಾಗಿದೆ.

Advertisement

ಇದರಿಂದ ಇತರರಿಗೆ ಸ್ಫೂರ್ತಿ ತುಂಬಬೇಕಾಗಿದೆ ಎಂದು ಹೇಳಿದರು. ಪಪಂ ಮಾಜಿ ಸದಸ್ಯೆ ಶೋಭಾ ಅನಂತಯ್ಯ ಮಾತನಾಡಿ, ಮನುಷ್ಯ ಸಂಬಂಧಗಳ ಸಂವಹನೆಯ ಸಂವೇದನೆಯಿಂದ ಆಧುನಿಕ ಜಗತ್ತು ದೂರ ಸರಿಯುತ್ತ ಭಾವನೆಗಳ ಬರಡುತನವನ್ನು ಅನುಭವಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ನಂತರ ನಡೆದ ದೀಪನಾಟಕ ಕರ್ಣಭಾರ ಸ್ಥಳೀಯ ಕಲಾವಿದರಿಂದ ಭಾಸ ಮಹಾಕವಿ ಬರೆದ, ಎಲ್‌.ಗುಂಡಣ್ಣ ಕನ್ನಡಕ್ಕೆ ಅನುವಾದಿಸಿದ ಕರ್ಣಭಾರ ಎಂಬ ಏಕಾಂಕ ನಾಟಕ ನೊಡುಗರ ಮನಸೂರೆಗೊಂಡಿತು. ಕುರುಕ್ಷೇತ್ರ ಯುದ್ಧಕ್ಕೆ ಶಲ್ಯ ಸಾರಥ್ಯದಲ್ಲಿ ಪ್ರವೇಶಿಸುವ ಕರ್ಣ ತನ್ನ ಅಸ್ತ್ರ ವೃತ್ತಾಂತವನ್ನು ನೆನಪಿಸಿಕೊಳ್ಳುವುದು, ದೇವೆಂದ್ರ ಬ್ರಾಹ್ಮಣ ರೂಪದಲ್ಲಿ ಆಗಮಿಸಿ ಕರ್ಣಕುಂಡಲ ದಾನಬೇಡುವುದು ಈ ನಾಟಕದ ಕಥಾವಸ್ತು.

ನಾಟಕಕ್ಕೆ ಸಾಲುದೀಪ ಅಳವಡಿಸಿ ಮಂದ ಬೆಳಕನ್ನು ರಂಗದಲ್ಲಿ ಏರ್ಪಡಿಸಲಾಗಿತ್ತು. ಪಾತ್ರಗಳ ಚಲನೆಗಾಗಿ ಮತ್ತು ಹಿನ್ನಲೆಯಲ್ಲಿ ಯಕ್ಷಗಾನ ಶೈಲಿಯನ್ನು ಅಳವಡಿಸಿಕೊಳ್ಳಲಾಗಿತ್ತು. ಕೊನೆಯಲ್ಲಿ ಸೂತ್ರಧಾರ ಒಂದೊಂದೇ ಮೇಣದ ಬತ್ತಿಯನ್ನು ನಂದಿಸುತ್ತ ಕರ್ಣನ ಬದುಕಿನಲ್ಲಾದ ಅನ್ಯಾಯವನ್ನು ಪ್ರೇಕ್ಷಕರಿಗೆ ಹೇಳುವ ತಂತ್ರಗಾರಿಕೆ ವಿಶಿಷ್ಟವಾಗಿತ್ತು.

ಬಿ.ಎಲ್‌.ರವಿಕುಮಾರ್‌ (ಕರ್ಣ), ಎಚ್‌.ಎಂ.ನಾಗರಾಜರಾವ್‌ (ಶಲ್ಯ), ಸುಬ್ರಹ್ಮಣ್ಯ ಆಚಾರ್ಯ(ಬ್ರಾಹ್ಮಣ), ಅಶ್ವತ್ಥ ನಾರಾಯಣ(ದೇವೇಂದ್ರ), ಎ.ಎಸ್‌ ನಯನ(ಸೂತ್ರಧಾರ) ಮತ್ತು ಉಳುವೆ ಗಿರೀಶ್‌ ದೇವದೂತನ ಪಾತ್ರಧಾರಿಗಳಾಗಿದ್ದರು. ಹಿನ್ನೆಲೆಯಲ್ಲಿ ಎ.ಜಿ.ಶಿವಾನಂದ ಭಟ್‌, ಶ್ರೀನಿ  ಮತ್ತು ಸಂಪಗೋಡು ಗುರುಮೂರ್ತಿ ಪೂರಕವಾಗಿ ಸಂಗೀತ ಒದಗಿಸಿದರು. ನಾಟಕ ರಮೇಶ್‌ ಬೇಗಾರ್‌ ಅವರ ನಿರ್ದೇಶನ ಹೊಂದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next