Advertisement

ಮುಂಗಾರು ಅತಂತ್ರ: ಭತ್ತ ಬೆಳೆಗಾರರ ಸ್ಥಿತಿ ಗಂಭೀರ

11:43 AM Jul 31, 2019 | Naveen |

ಶೃಂಗೇರಿ: ತಾಲೂಕಿನಾದ್ಯಂತ ಮುಂಗಾರು ಮಳೆಯ ಕಣ್ಣಾಮುಚ್ಚಾಲೆ ಮುಂದುವರಿದಿದ್ದು, ಭತ್ತ ಬೆಳೆಯುವ ರೈತರ ಸ್ಥಿತಿ ಅತಂತ್ರವಾಗಿದೆ. ಭತ್ತ ಬೆಳೆಯುತ್ತಿರುವ ರೈತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದ್ದು, ಇದರ ನಡುವೆ ಹವಮಾನ ಪ್ರತಿಕೂಲದಿಂದ ರೈತರು ಭತ್ತ ಬೆಳೆಯಲು ಹಿಂದೇಟು ಹಾಕುವಂತಾಗಿದೆ.

Advertisement

ಬಿತ್ತನೆಗೆ ಹಿನ್ನಡೆ: ಜೂನ್‌ ಎರಡನೇ ವಾರದಿಂದ ಬಿರುಸಾಗಿ ನಡೆಯಬೇಕಿದ್ದ ಬಿತ್ತನೆ ಕಾರ್ಯಕ್ಕೆ ಸಕಾಲದಲ್ಲಿ ಮಳೆಯಾಗದ ಕಾರಣ ಹಿನ್ನಡೆಯಾಗಿತ್ತು. ಬಹುತೇಕ ಮಳೆಯಾಶ್ರಿತ ಗದ್ದೆಗಳಿದ್ದು, ಬಿತ್ತನೆ ಮಾಡುವಷ್ಟು ನೀರಿಲ್ಲದೇ ತೊಂದರೆಯಾಗಿತ್ತು. ಜೂನ್‌ ಕೊನೆಯ ವಾರದಲ್ಲಿ ಸಾಮಾನ್ಯ ಮಳೆ ಮತ್ತು ಮೋಟರ್‌ ಮೂಲಕ ನೀರೆತ್ತಿ ಭತ್ತದ ಸಸಿ ಮುಡಿಯನ್ನು ಸಿದ್ಧಗೊಳಿಸಲಾಗಿದೆ. ತಾಲೂಕಿನಲ್ಲಿ ಶೇ.80 ಕ್ಕೂ ಹೆಚ್ಚು ಬಿತ್ತನೆ ಕಾರ್ಯ ಮುಗಿದಿದ್ದು, ಜುಲೈ ಮೂರನೇ ವಾರದಿಂದಲೇ ನಾಟಿ ಕಾರ್ಯ ಆರಂಭವಾಗಬೇಕಿತ್ತು.

ನಾಟಿಗೂ ಮಳೆ ಕೊರತೆ: ಸಸಿ ಮುಡಿಯನ್ನು ಒಂದು ಗದ್ದೆಯಲ್ಲಿ ಮಾಡುವುದರಿಂದ ಅಲ್ಪ ಪ್ರಮಾಣದ ನೀರು ಸಾಕು. ಆದರೆ, ನಾಟಿ ಕಾರ್ಯಕ್ಕೆ ಎಲ್ಲಾ ಗದ್ದೆಗಳಿಗೂ ಸಾಕಷ್ಟು ನೀರಿನ ಅಗತ್ಯವಿರುತ್ತದೆ. ಮಳೆ ಒಮ್ಮೊಮ್ಮೆ ಬಂದು ನಂತರ ಬಿಡುವು ಕೊಡುತ್ತಿದೆ. ಸತತವಾಗಿ ಮಳೆ ಬಾರದ ಹಿನ್ನೆಲೆಯಲ್ಲಿ ಹಳ್ಳ, ಕೆರೆ, ಗುಡ್ಡದಿಂದ ಹರಿದು ಬರುವ ಸ್ವಾಭಾವಿಕ ನೀರು ಹೆಚ್ಚಾಗಿಲ್ಲ.

ಬಲಿಯುತ್ತಿರುವ ಸಸಿ: ಪ್ರತಿ ವರ್ಷದಂತೆ ನಕ್ಷತ್ರಗಳ ವಾಡಿಕೆ ಮಳೆಯಾಗುತ್ತದೆ ಎಂಬ ನಂಬಿಕೆಯಲ್ಲಿ ಬಿತ್ತನೆ ಮಾಡಿರುವ ರೈತರು ಇದೀಗ ಕಂಗಾಲಾಗಿದ್ದಾರೆ. ಭತ್ತದ ಸಸಿ ಕೀಳುವ ದಿನ ಸಮೀಪಿಸುತ್ತಿದ್ದರೂ, ಗದ್ದೆಯಲ್ಲಿ ನೀರು ಇಲ್ಲವಾಗಿದೆ. ನಿಯಮಿತ ವೇಳೆಗೆ ಭತ್ತದ ಸಸಿ ನಾಟಿ ಮಾಡಲೇಬೇಕಾದ ಅನಿವಾರ್ಯತೆ ಇದ್ದು, ತಡವಾದರೆ ಇಳುವರಿ ಕುಂಠಿತಗೊಳ್ಳಲಿದೆ. ಸದ್ಯದ ಸ್ಥಿತಿಯಲ್ಲಿ ನಿರೀಕ್ಷೆಯಂತೆ ನಾಟಿ ಅಸಾಧ್ಯ ಎನ್ನೋದು ಹಲವು ರೈತರ ಮಾತು.

ಈಗಾಗಲೇ ರೈತರು ನಾಟಿ ಕಾರ್ಯಕ್ಕೆ ಪೂರ್ವಭಾವಿಯಾಗಿ ಬದುಗಳನ್ನು ಕೆತ್ತಿ ಗದ್ದೆಯನ್ನು ಸಿದ್ಧಪಡಿಸಿಕೊಂಡಿದ್ದು, ಮಳೆ ಕೈಕೊಟ್ಟರೆ ಅಪಾರ ನಷ್ಟ ಉಂಟಾಗುತ್ತದೆ.

Advertisement

ಈ ವರ್ಷ ಮಳೆ ಅತಂತ್ರವಾಗಿದೆಯಾದರೂ ಮುಂಬರುವ ದಿನಗಳಲ್ಲಿ ಮಳೆಯಾಗಲಿದೆ ಎಂಬ ಭರವಸೆ ಇದೆ. ಇಲಾಖೆಯಲ್ಲಿ ಹೈಬ್ರಿಡ್‌ ತಳಿಯ ಬಿತ್ತನೆ ಬೀಜವನ್ನು ಸಹಾಯಧನದಲ್ಲಿ ನೀಡಲಾಗುತ್ತಿದ್ದು, ಇನ್ನೂ ಬಿತ್ತನೆಗೆ ಅವಕಾಶವಿದೆ.
ರವಿಶಂಕರ್‌, ಕೃಷಿ ಅಧಿಕಾರಿ

ನಮ್ಮ ಗ್ರಾಮದಲ್ಲಿ ಭತ್ತ ಬೆಳೆಯುವ ಕೆಲವೇ ರೈತರಿದ್ದು, ಈ ವರ್ಷದ ಮಳೆ ಭತ್ತ ಬೆಳೆಯುವ ರೈತರಿಗೆ ನಿರಾಸೆ ಮೂಡಿಸಿದೆ. ಒಂದಷ್ಟು ಗದ್ದೆಗಳಿಗೆ ನೀರಿದ್ದರೂ, ಮಲೆನಾಡಿಗೆ ಅಗತ್ಯವಿರುವಷ್ಟು ಮಳೆಯಾಗದಿದ್ದರೆ ಸೆಪ್ಟೆಂಬರ್‌ ನಂತರ ಮತ್ತೆ ನೀರಿನ ಕೊರತೆಯಾಗುತ್ತದೆ. ತಾಲೂಕಿನಲ್ಲಿ ಭತ್ತದ ಬದಲಿಗೆ ಗದ್ದೆಯಲ್ಲಿ ಬದಲಿ ಬೆಳೆಯನ್ನು ಬೆಳೆಯಲಾಗದು. ಮಲೆನಾಡಿನಲ್ಲಿ ಭತ್ತ ಬೆಳೆಯುವ ರೈತರಿಗೆ ಸರಕಾರ ವಿಶೇಷ ಪ್ರೋತ್ಸಾಹ ನೀಡದಿದ್ದರೆ ಇನ್ನು ಕೆಲವೇ ವರ್ಷದಲ್ಲಿ ರೈತರು ಭತ್ತ ಬೆಳೆಯುವುದನ್ನೇ ಕೈಬಿಡಬಹುದು.
ಕೆ.ಎಂ. ಬಾಲಕೃಷ್ಣ ಕೆಂಜಿಗೆರೆ,
ಶೃಂಗೇರಿ ತಾಲೂಕು

Advertisement

Udayavani is now on Telegram. Click here to join our channel and stay updated with the latest news.

Next