ಶೃಂಗೇರಿ: ಸ್ವಾತಂತ್ರ್ಯ ಬಂದು ಏಳು ದಶಕವಾಗಿದ್ದರೂ, ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಗ್ರಾಮೀಣ ಭಾಗದ ಮೂಲ ಸಮಸ್ಯೆ ಮಾತ್ರ ಇನ್ನೂ ಜೀವಂತವಾಗಿದೆ.
ಇದಕ್ಕೆ ತಾಜಾ ಉದಾಹರಣೆ ನೆಮ್ಮಾರ್ ಗ್ರಾಪಂ ನ ಮಲ್ನಾಡ್ ಗ್ರಾಮದ ಹಂಚಿನಕೊಡಿಗೆ ಮಕ್ಕಿಹಾಳೆ ಕಿರು ಸೇತುವೆ. ಈ ಸೇತುವೆ ಕಳೆದ ವರ್ಷದ ಪ್ರವಾಹದಲ್ಲಿ ಕೊಚ್ಚಿಹೋಗಿತ್ತು. ಮಳೆಗಾಲ ಸಮೀಪಿಸುತ್ತಿದ್ದರೂ ಈ ವರ್ಷ ಸರಕಾರ ಅದನ್ನು ಪುನರ್ ನಿರ್ಮಾಣಕ್ಕೆ ಇನ್ನೂ ಕೈಹಾಕದಿರುವುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.
ನಕ್ಸಲ್ ಪೀಡಿತ ಪ್ರದೇಶವಾದ ಈ ಹಳ್ಳಿಯಲ್ಲಿ ದುರ್ಗಮ ರಸ್ತೆ ಹಾಗೂ ಅಲ್ಲೊಂದು, ಇಲ್ಲೊಂದು ಮನೆ ಇದೆ. ಈ ಹಳ್ಳಿಯ ಗ್ರಾಮಸ್ಥರಿಗೆ ಪಟ್ಟಣಕ್ಕೆ ಬರಬೇಕಾದರೆ ನೆಮ್ಮಾರ್ ಗ್ರಾಪಂನ ಬುಕುಡಿಬೈಲಿನ ಮೂಲಕ ಬರಬೇಕು. ಬುಕುಡಿಬೈಲಿಗೆ 6 ಕಿಮೀ ಕಡಿದಾದ, ತಿರುವಿನಿಂದ ಕೂಡಿದ ಮಣ್ಣಿನ ರಸ್ತೆ ಇದೆ. ಆದರೆ ಇಲ್ಲಿಗೆ ತಲುಪುವ ಮಕ್ಕಿಹಾಳೆ ಸೇತುವೆ ಕಳೆದ ವರ್ಷ ಸೆಪ್ಟೆಂಬರ್ ಪ್ರವಾಹದಲ್ಲಿ ಕೊಚ್ಚಿಹೋಗಿದ್ದು, ಅವಶೇಷ ಮಾತ್ರ ಉಳಿದುಕೊಂಡಿದೆ. ಮಳೆಗಾಲದಲ್ಲಿ ಅಪಾರ ಪ್ರಮಾಣದ ನೀರು ಹರಿಯುವ ಈ ಹಳ್ಳಕ್ಕೆ ಅವೈಜ್ಞಾನಿಕವಾಗಿ ಪೈಪ್ ಅಳವಡಿಸಿ, ಸೇತುವೆ ನಿರ್ಮಾಣ ಮಾಡಲಾಗಿದೆ. 40 ವರ್ಷದ ಹಿಂದೆ ನಿರ್ಮಿಸಿರುವ ಕೈಪಿಡಿಯೂ ಇಲ್ಲದ ಕಿರು ಸೇತುವೆ ಮೇಲೆ ಮಳೆಗಾಲದಲ್ಲಿ ನೀರು ತುಂಬಿ ಹರಿಯುವುದು ಸಾಮಾನ್ಯವಾಗಿತ್ತು. ಆದರೆ ಕಳೆದ ವರ್ಷ ಸೇತುವೆ ಕೊಚ್ಚಿಹೋಗಿ ಪೈಪು ಮಾತ್ರ ಉಳಿಯಿತು. ಮಳೆಗಾಲ ಮುಗಿಯುತ್ತ ಬಂದಿದ್ದರಿಂದ ಗ್ರಾಮಸ್ಥರು, ಗ್ರಾಪಂ ಸದಸ್ಯರ ಸಹಕಾರದೊಂದಿಗೆ ಕೊಚ್ಚಿ ಹೋಗಿದ್ದ ಸೇತುವೆಗೆ ಮಣ್ಣು ತುಂಬಿ ತಾತ್ಕಾಲಿಕ ಸಂಪರ್ಕ ಮಾಡಿಕೊಂಡಿದ್ದರು. ಸೇತುವೆ ನಿರ್ಮಾಣಕ್ಕೆ ಹಲವಾರು ಬಾರಿ ಸರಕಾರಕ್ಕೆ ಮನವಿ ಸಲ್ಲಿಸಿದ್ದರೂ, ಸೇತುವೆ ನಿರ್ಮಾಣ ಮಾತ್ರ ಆರಂಭವಾಗುವ ಸೂಚನೆ ಕಾಣುತ್ತಿಲ್ಲ. ಮಳೆಗಾಲ ಇನ್ನೂ ಕೇವಲ ಒಂದೇ ತಿಂಗಳಿದ್ದು, ಇನ್ನು ಯಾವಾಗ ಕಾಮಗಾರಿ ಆರಂಭವಾಗುತ್ತದೆ ಎಂಬುದು ಪ್ರಶ್ನೆಯಾಗಿದೆ.
ಹಂಚಿನಕೊಡಿಗೆ ಸುತ್ತ ಮುತ್ತಲಿನ ಹಳ್ಳಿಗಳಾದ ನವರೇಹಕ್ಲು, ಪಾರ್ಥನಮಕ್ಕಿ, ದೊಡ್ಡಹಡ್ಲು, ಮೀನುಗರಡಿ, ಬಸನಕಲ್ಲು, ಹೆಗ್ಗುಂಬ್ರಿ ಸಹಿತ ಅನೇಕ ಹಳ್ಳಿಗಳಿಗೆ ಸಂಪರ್ಕ ಸೇತುವೆಯಾಗಿದೆ. ಈ ಸೇತುವೆ ನಿರ್ಮಾಣವಾಗದಿದ್ದರೆ, ಗ್ರಾಮಸ್ಥರಿಗೆ ಅನಾರೋಗ್ಯವಾದಾಗ, ಶಾಲಾ ಮಕ್ಕಳಿಗೆ ಮುಖ್ಯವಾಗಿ ತೊಂದರೆಯಾಗಲಿದೆ.
ಬುಕುಡಿಬೈಲಿಗೆ ಬರುವ ರಸ್ತೆ ತೀವ್ರ ಹಾಳಾಗಿದ್ದು, ಕೊರಕಲಿನಿಂದ ಕೂಡಿದೆ. ಸುತ್ತಿ ಬಳಸಿ ಮೇಗೂರು ಮೂಲಕ ತೆರಳಲು ಈ ಸೇತುವೆ ಅನಿವಾರ್ಯ. ಸೇತುವೆ ಹಾನಿಯಾದಾಗ ಸ್ಥಳಕ್ಕೆ ತಹಶೀಲ್ದಾರ್ ಭೇಟಿ ನೀಡಿ ಸರಕಾರಕ್ಕೆ ತುರ್ತು ಅಗತ್ಯವಿರುವ ವರದಿ ಸಲ್ಲಿಸಿದ್ದಾರೆ. ಈ ಹಳ್ಳಿಯ ಜನರು ಮಳೆಗಾಲದಲ್ಲಿ ತಮ್ಮ ದಿನ ನಿತ್ಯ ವಸ್ತು, ಪಡಿತರ, ಬ್ಯಾಂಕ್, ಆಸ್ಪತ್ರೆ ಮುಂತಾದ ಕೆಲಸ ಕಾರ್ಯಗಳಿಗೆ ನೆಮ್ಮಾರ್‌ಗೆ ಬರಬೇಕು. ಪಡಿತರ ಪಡೆಯಲು ಸುತ್ತ ಮುತ್ತಲಿನ ಜನರು ಒಟ್ಟಾಗಿ ಜೀಪ್ ಬಾಡಿಗೆ ಪಡೆದು ಪಡಿತರ ಕೊಂಡೊಯ್ಯುತ್ತಾರೆ. ದೂರದ ಮತ್ತು ಒಳನಾಡು ಪ್ರದೇಶವಾದ ಇಲ್ಲಿಗೆ ರಸ್ತೆ ಡಾಂಬರೀಕರಣ ಅಗತ್ಯವಿದ್ದರೂ, ಅನಿವಾರ್ಯವಾಗಿರುವ ಸೇತುವೆಯನ್ನು ನಿರ್ಮಾಣಕ್ಕೆ ಸರಕಾರ ಮುಂದಾಗದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಸರಕಾರದಿಂದ ತಾಲೂಕಿಗೆ ಸಾಕಷ್ಟು ಹಣ ಬಂದಿದ್ದು, ಈ ಭಾಗಕ್ಕೆ 18 ಲಕ್ಷ ರೂ.ಅನುದಾನ ಬಂದಿದೆ. ಆದರೆ ಈ ಅನುದಾನವನ್ನು ಕೇವಲ ಎರಡು ಮನೆಗಳ ಅನುಕೂಲಕ್ಕೆ ಬಳಸಲಾಗುತ್ತಿದೆ. ಅನಿವಾರ್ಯವಾಗಿರುವ ಕಿರು ಸೇತುವೆಗೆ ಅಗತ್ಯ ಅನುದಾನ ಒದಗಿಸುವಂತೆ ಸರಕಾರಕ್ಕೆ ಹಲವಾರು ಬಾರಿ ಮನವಿ ಸಲ್ಲಿಸಲಾಗಿದೆ. ಆದರೆ ಗ್ರಾಮಸ್ಥರ ಬೇಡಿಕೆಗೆ ಬಗ್ಗೆ ನಿರ್ಲಕ್ಷ್ಯ ವಹಿಸಿದೆ. ಸರಕಾರ ತುರ್ತಾಗಿ ಸೇತುವೆ ನಿರ್ಮಾಣಕ್ಕೆ ಮುಂದಾಗದಿದ್ದಲ್ಲಿ ಮಳೆಗಾಲದಲ್ಲಿ ಸಂಭವಿಸಬಹುದಾದ ಪ್ರಾಣ ಹಾನಿಗೆ ಜಿಲ್ಲಾಡಳಿತವೇ ಹೊಣೆಯಾಗಲಿದೆ. ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಬೇಕು.
•ಬಿ.ಶಿವಶಂಕರ್, ಜಿಪಂ ಸದಸ್ಯ, ಶೃಂಗೇರಿ.
ಮಳೆಗಾಲದಲ್ಲಿ ಪ್ರವಾಹದಿಂದ ಕಿರು ಸೇತುವೆಗೆ ಹಾನಿಯಾದಾಗ ಅನಿವಾರ್ಯ ಸಂಪರ್ಕಕ್ಕೆ ಗ್ರಾಮಸ್ಥರು, ಗ್ರಾಪಂ ಸದಸ್ಯರೊಂದಿಗೆ ತಾತ್ಕಾಲಿಕ ದುರಸ್ತಿ ಮಾಡಿಕೊಳ್ಳಲಾಗಿತ್ತು. ಸೇತುವೆಯ ಕಲ್ಲುಗಳು ಕಿತ್ತು ಹೋಗಿದ್ದು, ಸೇತುವೆಯ ಒಳ ಭಾಗ ಸಂಪೂರ್ಣ ಕುಸಿದಿದೆ. ಪ್ರಕೃತಿ ವಿಕೋಪ ಪರಿಹಾರದಲ್ಲಿ ಸೇತುವೆ ನಿರ್ಮಾಣವಾಗುತ್ತದೆ ಎಂದು ಭಾವಿಸಲಾಗಿತ್ತು.
•ಪ್ರಶಾಂತ್, ಗ್ರಾಪಂ ಸದಸ್ಯ ನೆಮ್ಮಾರ್, ದಿವೀರ್, ಕೃಷ್ಣ, ಉದಯ,ಪೂರ್ಣಿಮಾ, ಪ್ರಕಾಶ, ಸುಬ್ರಹ್ಮಣ್ಯ, ಮಲ್ನಾಡ್ ಗ್ರಾಮಸ್ಥರು.
ರಮೇಶ ಕರುವಾನೆ