ಶೃಂಗೇರಿ: ಕಾರ್ತಿಕ ಮಾಸ ದೀಪಗಳ ಮಾಸ. ಜ್ಞಾನದ ಬೆಳಕು ಬೆಳಗಿ ಅಜ್ಞಾನದ ಕತ್ತಲು ಕಳೆಯುವ ಸಂಕೇತವಾಗಿ ಭಕ್ತರು ಪ್ರತಿ ದೇವಾಲಯದಲ್ಲೂ ಸಾವಿರಾರು ದೀಪಗಳನ್ನು ಬೆಳಗಿ ಭಗವಂತನನ್ನು ಆರಾಧಿ ಸುವ ಮಾಸ. ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದಲ್ಲಿ ಕಾರ್ತಿಕ ಹುಣ್ಣಿಮೆ (ನ.12)ಯಂದು ಲಕ್ಷ ದೀಪೋತ್ಸವ ವಿಜೃಂಭಣೆಯಿಂದ ನಡೆಯುತ್ತದೆ. ಈಗಾಗಲೇ ಶ್ರೀ ಮಠದಲ್ಲಿ ಲಕ್ಷ ದೀಪೋತ್ಸವಕ್ಕಾಗಿ ಭರದ ಸಿದ್ಧತೆ ನಡೆಯುತ್ತಿದೆ.
ಶ್ರೀ ಶಾರದಾ ಪೀಠದ ಎಲ್ಲಾ ದೇವಾಲಯಗಳು ಸೇರಿದಂತೆ ಪಟ್ಟಣದ ಹೃದಯ ಭಾಗದಲ್ಲಿರುವ ಶ್ರೀ ಮಲಹಾನಿಕರೇಶ್ವರ ಸ್ವಾಮಿ ದೇವಾಲಯ ಹಾಗೂ ಶ್ರೀ ಮಠದ ವರೆಗಿನ ರಾಜ ಬೀದಿಯ ಇಕ್ಕೆಲಗಳಲ್ಲಿ ಭಕ್ತರು ದೀಪಗಳನ್ನು ಬೆಳಗಿ ಸಂಭ್ರಮಿಸುತ್ತಾರೆ. ಲಕ್ಷ ದೀಪೋತ್ಸವದ ಅಂಗವಾಗಿ ಶ್ರೀ ಮಠದಲ್ಲಿ ಸಾಂಪ್ರದಾಯಿಕ ಪೂಜಾರಾಧನೆಗಳು, ಶ್ರೀ ಮಹಾರುದ್ರಯಾಗ ಹಾಗೂ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ರಾತ್ರಿ 10 ಗಂಟೆಗೆ ಉಭಯ ಜಗದ್ಗುರುಗಳಾದ ಶ್ರೀ ಭಾರತೀತೀರ್ಥ ಮಹಾಸ್ವಾಮೀಜಿ ಹಾಗೂ ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿಗಳು ಬೆಟ್ಟದ ಶ್ರೀ ಮಲಹಾನಿಕರೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಲಕ್ಷ ದೀಪೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಇದಕ್ಕೂ ಮುಂಚೆ ಬೆಟ್ಟದಲ್ಲಿ ಶ್ರೀ ಸ್ತಂಭ ಗಣಪತಿ, ಶ್ರೀ ಮಲಹಾನಿಕರೇಶ್ವರ ಸ್ವಾಮಿ, ಶ್ರೀ ಭವಾನಿ ಅಮ್ಮನವರ ಸನ್ನಿಧಿಯಲ್ಲಿ ರಂಗಪೂಜೆ, ಮಹಾಮಂಗಳಾರತಿ ಅಷ್ಟಾವಧಾನ ಸೇವೆಗಳ ನಂತರ ಧ್ವಜಸ್ತಂಭದ ಮುಂಭಾಗದಲ್ಲಿ ಪರಕಾಳಿಯನ್ನು ಸುಡಲಾಗುತ್ತದೆ. ಜಗದ್ಗುರುಗಳು ದೀಪೋತ್ಸವಕ್ಕೆ ಚಾಲನೆ ನೀಡಿದ ನಂತರ ಎಲ್ಲೆಡೆ ದೀಪಗಳು ಕಂಗೊಳಿಸುತ್ತವೆ. ಶ್ರೀ ಭವಾನಿ ಮಲಹಾನಿಕರೇಶ್ವರ ಸ್ವಾಮಿ ಉತ್ಸವ ವಿಗ್ರಹವನ್ನು ಮೆರವಣಿಗೆಯಲ್ಲಿ ಶ್ರೀಮಠಕ್ಕೆ ತರಲಾಗುತ್ತದೆ. ಈ ಸಂದರ್ಭದಲ್ಲಿ ಜಗದ್ಗುರುಗಳು ಕಾಲ್ನಡಿಗೆಯಲ್ಲಿ ಮೆರವಣಿಗೆಯಲ್ಲಿ ಸಾಗೋದು ವಿಶೇಷವಾಗಿದೆ. ಬಳಿಕ ಶ್ರೀ ಶಾರದಾಂಬಾ ದೇವಾಲಯದಲ್ಲಿ ಬಂಗಾರದ ರಥೋತ್ಸವ, ಮಹಾಮಂಗಳಾರತಿ, ಅಷ್ಟಾವಧಾನ ಸೇವೆಗಳ ನಂತರ ಶ್ರೀ ಶಾರದಾಂಬೆ, ಶ್ರೀ ಮಲಹಾನಿಕರೇಶ್ವರ ಸ್ವಾಮಿ ಮತ್ತು ಶ್ರೀ ವಿದ್ಯಾಶಂಕರ ದೇವರಿಗೆ ತುಂಗಾ ನದಿಯಲ್ಲಿ ತೆಪ್ಪೋತ್ಸವ ನಡೆಯುತ್ತದೆ. ಈ ಸಂದರ್ಭದಲ್ಲಿ ಮುತ್ತೆ„ದೆಯರಿಂದ ತುಂಗೆಗೆ ಲಕ್ಷ ದೀಪಗಳ ಬಾಗಿನ ಸಮರ್ಪಣೆ ನಡೆಯಲಿದೆ. ನಂತರ ಶ್ರೀ ಮಠದ ಅರ್ಚಕರಿಂದ ತುಂಗಾರತಿ ನಡೆಯುತ್ತದೆ. ನಂತರ ದೀಪೋತ್ಸವಕ್ಕೆ ತೆರೆ ಬೀಳಲಿದೆ.