ಶೃಂಗೇರಿ: ಕಷ್ಟ ಕಾಲದಲ್ಲಿ ರೈತರ ನೆರವಿಗೆ ಬರಬೇಕಾದ ವಿಮೆ ಮಲೆನಾಡು ರೈತರಿಗೆ ಗಗನ ಕುಸುಮವಾಗಿದ್ದು ಈಗ ಮತ್ತೂಮ್ಮೆ ವಿಮಾ ಕಂತು ಕಟ್ಟಲು ಸೂಚನೆ ಬಂದಿದೆ. ಬೆಳೆ ವಿಮೆ ಇನ್ನೂ ಬರುವ ಮುನ್ನವೇ ಮತ್ತೆ ವಿಮಾ ಕಂತು ಕಟ್ಟಲು ಸೂಚನೆ ಬಂದಿರುವುದು ರೈತರಿಗೆ ತಲೆನೋವಾಗಿದೆ.
ಕಳೆದ ವರ್ಷ ಸುರಿದ ದಾಖಲೆ ಮಳೆಯಿಂದ ತಾಲೂಕಿನ ಬಹುತೇಕ ರೈತರು ಆಹಾರ ಬೆಳೆ ಮತ್ತು ವಾಣಿಜ್ಯ ಬೆಳೆಯನ್ನು ಕಳೆದುಕೊಂಡಿದ್ದಾರೆ. ಈಗ ಮತ್ತೆ ವಿಮಾ ಕಂತು ಪಡೆದುಕೊಳ್ಳುವಂತೆ ಬ್ಯಾಂಕುಗಳು, ಸಹಕಾರ ಸಂಘಗಳಿಗೆ ಆದೇಶ ಬಂದಿದ್ದು, ಜೂ. 30 ವಿಮಾ ಮೊತ್ತ ಪಾವತಿಸಲು ಕಡೆ ದಿನಾಂಕವಾಗಿದೆ.
ತಾಲೂಕಿನಲ್ಲಿ ಅಡಕೆ ಮತ್ತು ಕಾಳುಮೆಣಸಿಗೆ ವಿಮಾ ಸೌಲಭ್ಯವಿದ್ದು, ಸರಕಾರ ನಿಗದಿಪಡಿಸಿದ ಮೊತ್ತದ ಶೇ. 50ರಷ್ಟನ್ನು ರೈತರು ವಿಮಾ ಕಂತಾಗಿ ಕಟ್ಟಬೇಕಾಗಿದೆ. ಅಡಕೆ ಬೆಳೆಗೆ ಹೆಕ್ಟೇರ್‌ಗೆ ರೂ. 6,400 ಮತ್ತು ಕಾಳು ಮೆಣಸಿಗೆ ಹೆಕ್ಟೇರ್‌ಗೆ ರೂ. 2350 ಪಾವತಿಸಬೇಕು. ಬೆಳೆ ಸಾಲ ಮಾಡಿರುವ ರೈತರಿಗೆ ಕಡ್ಡಾಯವಾಗಿರುವ ವಿಮೆ, ಬೆಳೆ ಸಾಲ ಮಾಡಿರದ ರೈತರು ನಿಗದಿತ ದಾಖಲೆ ನೀಡಿ ವಿಮಾ ಕಂತನ್ನು ತುಂಬಬಹುದಾಗಿದೆ. ಓರಿಯಂಟಲ್ ಜನರಲ್ ಇನ್ಶೂರೆನ್ಸ್ ಕಂಪನಿ ಮೂಲಕ ಇದನ್ನು ಅನುಷ್ಠಾನಗೊಳಿಸಲಾಗುತ್ತಿದೆ.
ರೈತರಿಗೆ ತಲೆನೋವಾದ ಕಂತು: ಕಳೆದ ವರ್ಷದ ವಿಮೆ ಪಾವತಿಸಿರುವ ರೈತರು ಬೆಳೆಯನ್ನು ಕಳೆದುಕೊಂಡಿದ್ದು ಪರಿಹಾರ ಮೊತ್ತವೂ ಬರದೆ, ಈಗ ಮತ್ತೆ ಮುಂದಿನ ಸಾಲಿಗೆ ವಿಮೆ ಮೊಬಲಗು ಕಟ್ಟಲು ಹಿಂದೇಟು ಹಾಕುತ್ತಿದ್ದಾರೆ. ಆದರೆ ವಿಮಾ ಕಂತು ಪಾವತಿಸಲು ಜೂನ್ 30 ಕಡೆಯ ದಿನಾಂಕವಾಗಿದ್ದು, ಕಳೆದ ವರ್ಷದ ವಿಮೆ ಬರುತ್ತದೆ ಇಲ್ಲ ಎಂಬುದು ತಿಳಿಯದೇ, ಮತ್ತೆ ವಿಮಾ ಕಂತು ಕಟ್ಟಬೇಕೆ ಎಂಬ ಪ್ರಶ್ನೆಯಾಗಿದೆ. ಕಳೆದ ವರ್ಷ ಪಾವತಿಸಿದ ವಿಮೆ ಪರಿಹಾರ ಇನ್ನೂ ರೈತರ ಖಾತೆಗೆ ಜಮಾ ಆಗಿಲ್ಲ. ಕಳೆದ ವರ್ಷದ ಅತಿವೃಷ್ಟಿಯಿಂದ ಬಹುತೇಕ ರೈತರು ಬೆಳೆ ಕಳೆದುಕೊಂಡಿದ್ದರು. ವಿಮಾ ಪರಿಹಾರ ಬರುತ್ತದೆ ಎಂಬ ನಿರೀಕ್ಷೆಯಲ್ಲಿ ರೈತರಿದ್ದಾರೆ. ಆದರೆ ವಿಮೆ ಜಮಾ ಮಾಡಿಕೊಳ್ಳುವ ಬ್ಯಾಂಕುಗಳಿಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ ಹಾಗೂ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಯಾರು ಎಂಬ ಬಗ್ಗೆ ರೈತರಿಗೆ ಮಾಹಿತಿ ಇಲ್ಲ.
ಹವಾಮಾನಾಧಾರಿತ ಬೆಳೆ ವಿಮೆ ಯೋಜನೆ ತಾಲೂಕಿನಲ್ಲಿ ಜಾರಿಯಾಗಿದ್ದು, ಇದರ ಅವಧಿ ಜೂ.1ರಿಂದ ಮೇ31ರವರಗೆ ಒಂದು ವರ್ಷ ಇರುತ್ತದೆ.ಅಡಕೆ ಮತ್ತು ಕಾಳುಮೆಣಸು ವಾರ್ಷಿಕ ಬೆಳೆಯಾಗಿರುವುದರಿಂದ ವಿಮಾ ಕಂತು ಪಾವತಿಸಿದ ನಂತರ ಮೇ 31ರವರೆಗೂ ಅವಧಿ ಇರುತ್ತದೆ.ಅದರ ನಂತರವಷ್ಟೇ ಪರಿಹಾರ ವಿಮಾ ಕಂತು ನೀಡಲಿದ್ದು, ಇದಕ್ಕೆ ಕನಿಷ್ಠ ಎರಡು ತಿಂಗಳು ಅಗತ್ಯವಿರುತ್ತದೆ.ಆಗಸ್ಟ್ ನಂತರವಷ್ಟೇ ಕಳೆದ ಸಾಲಿನ ವಿಮಾ ಮೊಬಲಗು ದೊರಕಲಿದ್ದು, ಅಲ್ಲಿಯವರೆಗೆ ರೈತರು ಕಾಯಬೇಕಿದೆ. ಮುಂದಿನ ವರ್ಷದ ವಿಮಾ ಕಂತು ತುಂಬಲು ಜೂ. 30ಕೊನೆಯ ದಿನಾಂಕವಾಗಿರುತ್ತದೆ.
•
ನಾಗರಾಜ್,
ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ, ಶೃಂಗೇರಿ
ಕಳೆದ ವರ್ಷದ ಆದಾಯ ಸಂಪೂರ್ಣ ಕುಸಿತವಾಗಿದ್ದು, ಈ ಸಾಲಿನ ಬೋರ್ಡೋ ಸಿಂಪಡಣೆಗೂ ರೈತರು ಪರದಾಡುತ್ತಿದ್ದಾರೆ. ಈ ಹಂತದಲ್ಲಿ ಮತ್ತೆ ಈ ಸಾಲಿನ ವಿಮಾ ಕಂತು ಪಾವತಿ ಮಾಡಲು ಸೂಚನೆ ನೀಡಿರುವುದು ರೈರೈತರ ಆರ್ಥಿಕ ಸಂಕಷ್ಟ ಹೆಚ್ಚುವಂತೆ ಮಾಡಿದೆ. ತೋಟಗಾರಿಕಾ ಬೆಳೆಗಳು ತೀವ್ರ ತೊಂದರೆಗೆ ಒಳಗಾಗಿದ್ದು, ಸಂಬಂಧಪಟ್ಟ ಇಲಾಖೆ ತಕ್ಷಣ ವಿಮಾ ಮೊತ್ತವನ್ನು ಬಿಡುಗಡೆ ಮಾಡಿಸಬೇಕು.
•
ಅಂಬ್ಲೂರು ರಾಮಕೃಷ್ಣ,
ಅಡ್ಡಗದ್ದೆ ಗ್ರಾಪಂ ಶೃಂಗೇರಿ