Advertisement

ನಾಯಕಿಯರ ಶತಕ ಸಂಭ್ರಮ; ಲಂಕೆಗೆ ಜಯ

02:04 PM Sep 17, 2018 | Team Udayavani |

ಕಾಟುನಾಯಕೆ (ಶ್ರೀಲಂಕಾ): ಐಸಿಸಿ ವನಿತಾ ಏಕದಿನ ಕ್ರಿಕೆಟ್‌ ಚಾಂಪಿಯನ್‌ಶಿಪ್‌ ಪಂದ್ಯಾವಳಿಯ ರವಿವಾರದ ಸೆಣಸಾಟದಲ್ಲಿ ಆತಿಥೇಯ ಶ್ರೀಲಂಕಾ ತಂಡ ಭಾರತವನ್ನು 3 ವಿಕೆಟ್‌ಗಳಿಂದ ಸೋಲಿಸಿದೆ. ಎರಡೂ ತಂಡಗಳ ನಾಯಕಿಯರ ಶತಕ ಈ ಪಂದ್ಯದ ವೈಶಿಷ್ಟವಾಗಿತ್ತು.
ಟಾಸ್‌ ಸೋತು ಮೊದಲು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಭಾರತ 5 ವಿಕೆಟಿಗೆ 253 ರನ್‌ ಪೇರಿಸಿ ಸವಾಲೊಡ್ಡಿದರೆ, ಶ್ರೀಲಂಕಾ 49.5 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 257 ರನ್‌ ಗಳಿಸಿ ರೋಚಕ ಗೆಲುವು ಸಾಧಿಸಿತು. ಭಾರತದ ಪರ ನಾಯಕಿ ಮಿಥಾಲಿ ರಾಜ್‌ ಅಜೇಯ 125 ರನ್‌ ಬಾರಿಸಿದರೆ, ಶ್ರೀಲಂಕಾ ತಂಡದ ನಾಯಕಿ ಚಾಮರಿ ಜಯಾಂಗನಿ 115 ರನ್‌ ಹೊಡೆದು ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು.

Advertisement

ಭಾರತದ ನಾಯಕಿಗೆ ತಾನೇನೂ ಕಡಿಮೆ ಇಲ್ಲ ಎಂಬುದನ್ನು ನಿರೂಪಿಸಿದ ಎಡಗೈ ಆರಂಭಕಾರ್ತಿ ಚಾಮರಿ ಜಯಾಂಗನಿ 115 ರನ್‌ ಬಾರಿಸಿದರು. ಆಕ್ರಮಣಕಾರಿ ಆಟ ಪ್ರದರ್ಶಿಸಿದ ಲಂಕಾ ನಾಯಕಿ 133 ಎಸೆತ ಎದುರಿಸಿ, 13 ಬೌಂಡರಿ ಹಾಗೂ 4 ಸಿಕ್ಸರ್‌ ಸಿಡಿಸಿ ಮೆರೆದರು. ಇದು 75ನೇ ಏಕದಿನದಲ್ಲಿ ಜಯಾಂಗನಿ ಹೊಡೆದ 4ನೇ ಶತಕ. ಹಾಸಿನಿ ಪೆರೆರ ಜತೆ ಮೊದಲ ವಿಕೆಟಿಗೆ 23.1 ಓವರ್‌ಗಳಿಂದ 101 ರನ್‌ ರಾಶಿಹಾಕುವ ಮೂಲಕ ಜಯಾಂಗನಿ ಭಾರತಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದರು. ಹಾಸಿನಿ ಗಳಿಕೆ 45 ರನ್‌.ಭಾರತದ  ಪರ  ಜೂಲನ್‌ ಗೋಸ್ವಾಮಿ, ಮಾನ್ಸಿ ಜೋಶಿ ತಲಾ 2 ವಿಕೆಟ್‌ ಉರುಳಿಸಿದರು.

 ಮಿಥಾಲಿ ಜೀವನಶ್ರೇಷ್ಠ ಬ್ಯಾಟಿಂಗ್‌


197ನೇ ಏಕದಿನ ಅಂತಾರಾಷ್ಟ್ರೀಯ ಪಂದ್ಯ ಆಡಲಿಳಿದ ಮಿಥಾಲಿ ರಾಜ್‌ ಬಾರಿಸಿದ 7ನೇ ಶತಕ ಇದಾಗಿದೆ. ಒಟ್ಟು 143 ಎಸೆತಗಳಿಗೆ ಜವಾಬಿತ್ತ ಮಿಥಾಲಿ, 14 ಬೌಂಡರಿ ಹಾಗೂ ಒಂದು ಸಿಕ್ಸರ್‌ ಎತ್ತಿದರು. ಇದು ಅವರ ಜೀವನಶ್ರೇಷ್ಠ ಗಳಿಕೆಯೂ ಆಗಿದೆ. ಇದಕ್ಕೂ ಮೊದಲು 1999ರಲ್ಲಿ ಅಯರ್‌ಲ್ಯಾಂಡ್‌ ವಿರುದ್ಧ ಅಜೇಯ 114 ರನ್‌ ಹೊಡೆದದ್ದು ಅವರ ಅತ್ಯುತ್ತಮ ಸಾಧನೆಯಾಗಿತ್ತು. ಅಂದು ಮಿಥಾಲಿ ಚೊಚ್ಚಲ ಏಕದಿನದಲ್ಲೇ ಈ ಶತಕ ಬಾರಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next