Advertisement

ಅಜಪುರ ಯಕ್ಷಗಾನ ಸಂಘಕ್ಕೆ  ಶ್ರೀ ವಿಶ್ವೇಶತೀರ್ಥ ಪ್ರಶಸ್ತಿ

11:04 AM Nov 10, 2017 | |

ಉಡುಪಿಯ ಯಕ್ಷಗಾನ ಕಲಾರಂಗವು ಕಲಾಸಂಘಟನೆಯೊಂದಕ್ಕೆ ಪ್ರತೀ ವರ್ಷ ನೀಡುವ ವಿಶ್ವೇಶತೀರ್ಥ ಪ್ರಶಸ್ತಿ ವಿಶಿಷ್ಟವಾದುದು. ಯತಿವರೇಣ್ಯರಾದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಯಕ್ಷಗಾನ ಕಲೆ-ಕಲಾವಿದರನ್ನು ಬಹಳವಾಗಿ ಪ್ರೀತಿಸುವವರು. ಸಂಸ್ಥೆಯ ಮಹಾಪೋಷಕರು, ಆಶ್ರಯದಾತರು. ಯಕ್ಷಗಾನ ಕಲಾರಂಗ ಅವರ ಹೆಸರಿನಲ್ಲಿ ಪ್ರಶಸ್ತಿ ಸ್ಥಾಪಿಸಿ, ಪ್ರತಿವರ್ಷ ಯಕ್ಷಗಾನ ಸಂಘಟನೆಯೊಂದನ್ನು ರೂ. 50,000 ನಗದು ಪುರಸ್ಕಾರದೊಂದಿಗೆ ಗೌರವಿಸುತ್ತಿದೆ. 2017ರ ಈ ಪ್ರಶಸ್ತಿಗೆ ಭಾಜನವಾದ ಸಂಸ್ಥೆ ಬ್ರಹ್ಮಾವರದ ಅಜಪುರ ಯಕ್ಷಗಾನ ಸಂಘ. ನವೆಂಬರ್‌ 19ರಂದು ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

Advertisement

ಯಕ್ಷಗಾನದ ಆಹಾರ್ಯಕ್ಕೆ ಕಲಾ ಪ್ರಪಂಚದಲ್ಲೇ ವಿಶಿಷ್ಟ ಸ್ಥಾನವಿದೆ. ನಾಟಕೀಯ ವೇಷಭೂಷಣಗಳ ದಾಳಿ ಯಕ್ಷಗಾನದ ವೇಷಗಾರಿಕೆಯ ಸೊಗಸನ್ನು ಹಿಂದೆ ಸರಿಸಿದ ಹೊತ್ತಿನಲ್ಲಿ ಯಕ್ಷವಿದ್ವಾಂಸ ಹಂದಾಡಿ ಸುಬ್ಬಣ್ಣ ಭಟ್ಟರ ನೇತೃತ್ವದಲ್ಲಿ ಪಾರಂಪರಿಕ ಯಕ್ಷಗಾನ ಆಹಾರ್ಯ ನಿರ್ಮಾಣ ಮಾಡುವ ಉದ್ದೇಶದಿಂದ 1956ರಲ್ಲಿ ಅಜಪುರ ಯಕ್ಷಗಾನ ಸಂಘ ಸ್ಥಾಪನೆಯಾಯಿತು. ಅದು ಅಷ್ಟಕ್ಕೇ ಸೀಮಿತವಾಗದೆ 60 ವರ್ಷಗಳ ಅವಧಿಯಲ್ಲಿ ಯಕ್ಷಗಾನ ಕಲಿಕೆ, ಪ್ರದರ್ಶನ, ಸಂಯೋಜನೆ, ತಾಳಮದ್ದಳೆ ಹೀಗೆ ಈ ಕಲಾಪ್ರಕಾರದ ಬೆಳವಣಿಗೆಗೆ ತನ್ನ ಕೊಡುಗೆಯನ್ನು ನೀಡುತ್ತಾ ಬಂದಿದೆ. 

1957ರಲ್ಲಿ ಯಕ್ಷಗಾನದ ವೇಷಭೂಷಣ ತಯಾರಿಸಿ ಅದನ್ನು ಶಾಲಾ ವಾರ್ಷಿಕೋತ್ಸವ ಸಂದರ್ಭದ ಪ್ರದರ್ಶನಗಳಿಗೆ, ಹವ್ಯಾಸಿ ಸಂಘಗಳಿಗೆ ಮಳೆಗಾಲದ ಆಟಕ್ಕೆ ಕನಿಷ್ಟ ಬಾಡಿಗೆಗೆ ವ್ಯವಸ್ಥೆ ಮಾಡಿತು. ಮುಖ ವರ್ಣಿಕೆ ಮಾಡಲು, ಆಹಾರ್ಯವನ್ನು ಅಚ್ಚುಕಟ್ಟಾಗಿ ಕಟ್ಟುವಲ್ಲಿ ನುರಿತ ನಾಲ್ಕಾರು ಪ್ರಸಾದನ ಕಲಾವಿದರನ್ನು ಹೊಂದಿ ವೇಷಗಾರಿಕೆಯ ಅಪಸವ್ಯ ಹೋಗಲಾಡಿಸುವಲ್ಲಿ ಸಂಘಟನೆ ಮಾಡಿದ ಪ್ರಯತ್ನ ಶ್ಲಾಘನೀಯ. ದೊಡ್ಡವರ ವೇಷಭೂಷಣಮಕ್ಕಳಿಗಾಗದು. ಮಕ್ಕಳಿಗಾಗಿಯೇ ವೇಷಭೂಷಣ ಸಿದ್ಧಪಡಿಸಿ ನಿರಂತರ ಒದಗಿಸುತ್ತಾ ಬಂದ ಕೀರ್ತಿ ಅಜಪುರ ಸಂಘಕ್ಕಿದೆ. ಡಾ| ಶಿವರಾಮ ಕಾರಂತರ ಬ್ಯಾಲೆಗೆ, ಮಾರ್ತಾ ಆ್ಯಸ್ಟನ್‌ರ ಪ್ರದರ್ಶನಗಳಿಗೆ, ಬೆಂಗಳೂರು, ಮಂಗಳೂರು ಮತ್ತಿತರ ಕಡೆ ನಡೆಯುವ ಆಟಗಳಿಗೆ, ದಿಲ್ಲಿಯ ರಾಷ್ಟ್ರೀಯ ವಸ್ತುಸಂಗ್ರಹಾಲಯಕ್ಕೆ ವೇಷಭೂಷಣ ಕಳಿಸಿದ ಹಿರಿಮೆಗೆ ಈ ಸಂಘ ಭಾಜನವಾಗಿದೆ. 1958ರಲ್ಲಿ ಬ್ರಹ್ಮಾವರದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಡಾ| ಶಿವರಾಮ ಕಾರಂತರ ಮುಂದಾಳತ್ವದಲ್ಲಿ ಪ್ರೊ| ಬಿ. ವಿ. ಆಚಾರ್ಯರ ಸಹಕಾರದೊಂದಿಗೆ ಮೂರು ದಿನಗಳ ಕಾಲ ನಡೆದ ಐತಿಹಾಸಿಕ ಗೋಷ್ಠಿಯಲ್ಲಿ ಹಾರಾಡಿ ಮಟಾ³ಡಿ ತಿಟ್ಟಿನ ಘಟಾನುಘಟಿ ಕಲಾವಿದರಿಗೆ ವೇಷ ಕಟ್ಟಿ ಆಟ ಆಡಿಸಿ ಜನಮೆಚ್ಚುಗೆಗೆ ಪಾತ್ರವಾಗಿದ್ದು ಈ ಸಂಘಟನೆಯ ಕಿರೀಟಕ್ಕೆ ಮತ್ತೂಂದು ತುರಾಯಿ. 1979ರಲ್ಲಿ ಅಮೆರಿಕದಲ್ಲಿ ಸಂಘದ ಕಲಾವಿದರು ಪ್ರದರ್ಶನ ನೀಡಿದ್ದು ಎಲ್ಲರಿಂದ ಪ್ರಶಂಸೆ ಪಡೆದಿದೆ.

ಬಡಗುತಿಟ್ಟು ಯಕ್ಷಗಾನ ಕ್ಷೇತ್ರದ ಭೀಷ್ಮರೆಂದೇ ಖ್ಯಾತರಾದ ಹಂದಾಡಿ ಸುಬ್ಬಣ್ಣ ಭಟ್ಟರು 1956ರಿಂದ     2016ರ ವರೆಗೆ ಈ ಸಂಘವನ್ನು ಸಂಘಟಿಸಿದ ಪರಿ ಅನನ್ಯ. ಸಂಸ್ಥಾಪಕರಾಗಿ, ನಿರ್ದೇಶಕರಾಗಿ, ಗೌರವಾಧ್ಯಕ್ಷರಾಗಿ, ಸಂಪ್ರದಾಯಕ್ಕೊಂದು ಮುನ್ನುಡಿ ಬರೆದು ಯಕ್ಷಗಾನದ ಈ ಅಪೂರ್ವ ಆಸ್ತಿಯನ್ನು ಮುಂದಿನ ಜನಾಂಗಕ್ಕೆ ವರ್ಗಾಯಿಸಿದ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ. ಅವರದು ಯಕ್ಷಗಾನಕ್ಕೆ ತಮ್ಮನ್ನು ಸಮರ್ಪಿಸಿಕೊಂಡ ಅನುಪಮ ವ್ಯಕ್ತಿತ್ವ. 

ಸಂಘವು ಮಂಗಳೂರು ಆಕಾಶವಾಣಿ ಪ್ರಾರಂಭವಾದಾಗಿನಿಂದಲೂ ನಿರಂತರ ತಾಳಮದ್ದಳೆಯನ್ನು ಪ್ರಸ್ತುತಪಡಿಸುತ್ತಾ ಬಂದಿದೆ. ಬೆಂಗಳೂರು ಆಕಾಶವಾಣಿ ಯಿಂದಲೂ ಕಾರ್ಯಕ್ರಮ ನೀಡಿದೆ. ಮಕ್ಕಳಿಗೆ ನಾಟ್ಯ ತರಬೇತಿ ನೀಡಿ ಅವರಿಂದ ವಾರ್ಷಿಕೋತ್ಸವ ಮತ್ತು ಬೇರೆ ಬೇರೆ ಸಂದರ್ಭಗಳಲ್ಲಿ ಮೌಲ್ಯಾಧಾರಿತ ಪ್ರಸಂಗ ಮತ್ತು ಹೂವಿನ ಕೋಲುಗಳನ್ನು ನಡೆಸಿದೆ. ಉಡುಪಿಯ ಯಕ್ಷಗಾನ ಕಲಾರಂಗ ಆಯೋಜಿಸಿದ್ದ ಮಕ್ಕಳ ಯಕ್ಷಗಾನ ಸ್ಪರ್ಧೆ ಯಲ್ಲಿ ಸತತ ಮೂರು ಬಾರಿ ಪ್ರಥಮ ಸ್ಥಾನ ಪಡೆದ ಶ್ರೇಷ್ಠ ತಂಡ ಎಂಬ ಖ್ಯಾತಿ ಈ ಸಂಘಕ್ಕಿದೆ. ಸಂಘವು ವೈಭವೋಪೇತ ಹಿಮ್ಮೇಳ ಗಾಯನ, ಮನೋಹರವಾದ ಯಕ್ಷಗಾನ, ಗುಣಮಟ್ಟದ ತಾಳಮದ್ದಳೆ ಗಳನ್ನು ನಿರಂತರ ನಡೆಸುತ್ತಾ ಬಂದಿದೆ.

Advertisement

ಪ್ರತಿವರ್ಷ ವಾರ್ಷಿಕೋತ್ಸವದಲ್ಲಿ ಹಿರಿಯ ಪ್ರಸಾಧನ ಕಲಾವಿದರನ್ನು ಗೌರವಿಸುವ ಸಂಪ್ರದಾಯವನ್ನು ರೂಢಿಸಿಕೊಂಡಿದೆ. ಕಳೆದ ವರ್ಷ ವಜ್ರಮಹೋತ್ಸವವನ್ನು ಸುಬ್ಬಣ್ಣ ಭಟ್ಟರ ಸಂಸ್ಮರಣೆ, ತಾಳಮದ್ದಳೆ, ಯಕ್ಷಗಾನ ಪ್ರದರ್ಶನಗಳೊಂದಿಗೆ ವಿಶಿಷ್ಟವಾಗಿ ಆಚರಿಸಿದೆ. ಪ್ರಸಕ್ತ ಕೃಷ್ಣಸ್ವಾಮಿ ಜೋಯಿಸರು ಗೌರವಾಧ್ಯಕ್ಷರಾಗಿ, ಬಾಲಕೃಷ್ಣ ಬಿರ್ತಿಯವರು ಅಧ್ಯಕ್ಷರಾಗಿ, ರಾಜೇಶ ನಾವಡ ಜಿ.ವಿ. ಅವರು ಕಾರ್ಯದರ್ಶಿಯಾಗಿ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ.

ನಾರಾಯಣ ಎಂ. ಹೆಗಡೆ

Advertisement

Udayavani is now on Telegram. Click here to join our channel and stay updated with the latest news.

Next