ಕಲಬುರಗಿ: ಐತಿಹಾಸಿಕ ಶರಣಬಸವೇಶ್ವರ ಮಹಾರಥೋತ್ಸವ ಕೊರೊನೊ ಭೀತಿ ನಡುವೆ ಶುಕ್ರವಾರ ಸಂಜೆ 4 ಗಂಟೆ ಸುಮಾರಿಗೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು.
ಶರಣಬಸವೇಶ್ವರ ಮಹಾದಾಸೋಹಿ ಸಂಸ್ಥಾನದ ಪೂಜ್ಯ ದಾಕ್ಷಾಯಣಿ ಅಪ್ಪ, ಸಂಸ್ಥಾನದ 9ನೇ ಪೀಠಾಧಿಪತಿ ಚಿರಂಜೀವಿ ದೊಡ್ಡಪ್ಪ ಅಪ್ಪ ಅವರು ಶರಣಬಸವೇಶ್ವರ ಪರುಷ ಬಟ್ಟಲುಗಳನ್ನು ಪ್ರದರ್ಶಿಸಿ ರಥೋತ್ಸವ ಕ್ಕೆ ಚಾಲನೆ ನೀಡಿದರು.
ಇದಕ್ಕೂ ಮುಂಚೆ ಸಂಸ್ಥಾನದ ಅನುಭವ ಮಂಟಪದಲ್ಲಿ ಶರಣಬಸವೇಶ್ವರರ ಮಹಾ ದಾಸೋಹಿ ಸಂಸ್ಥಾನದ ಪೀಠಾಧಿಪತಿ ಡಾ. ಶರಣಬಸವಪ್ಪ ಅಪ್ಪ ಅವರು ಪರುಷ ಬಟ್ಟಲು ಪ್ರದರ್ಶಿಸಿ, ಶರಣಬಸವೇಶ್ವರ ಜಾತ್ರೆ ಎಂದರೆ ಶರಣರ ದರ್ಶನ ಪಡೆಯುವುದು ಹಾಗೂ ಅವರ ತತ್ವಗಳನ್ನು ಮೆಲಕು ಹಾಕಿ ಅವುಗಳಂತೆ ನಡೆಯುವುದಾಗಿದೆ. ರಥೋತ್ಸವ ದಿನದಿಂದ 11 ದಿನಗಳ ಕಾಲ ಅಂದರೆ ಯುಗಾದಿ ಹಬ್ಬದವರೆಗೂ ನಡೆಯಲಿದೆ. ಈ 1 ದಿನಗಳುದ್ದಕ್ಕೂ ಬೇಡ ಎಂದರೂ ಭಕ್ತರು ಬಂದು ಭಕ್ತಿ ಭಾವದಿಂದ ದರ್ಶನ ಪಡೆಯುತ್ತಾರೆ.
198 ವರ್ಷಗಳಿಂದ ಶರಣಬಸವೇಶ್ವರರ ಜಾತ್ರಾ ಮಹೋತ್ಸವದ ರಥೋತ್ಸವ ನೆರವೇರಿಸಿಕೊಂಡು ಬರಲಾಗುತ್ತಿದೆ. ಒಂದು ವರ್ಷ ಆಚರಣೆ ಮಾಡುವುದನ್ನು ಬಿಟ್ಟಿಲ್ಲ. ಕೊರೊನಾ ಭೀತಿ ಹಿನ್ನೆಲೆಯಲ್ಲಿ ಜಾತ್ರೆ ಮುಂದೂಡುವಂತೆ ಜಿಲ್ಲಾಡಳಿತ ಕೋರಿದೆ. ಹೀಗಾಗಿ ಜನ ಸೇರುವ ಮುನ್ನವೇ ಸಾಂಕೇತಿಕವಾಗಿ ರಥೋತ್ಸವ ನೆರವೇರಿಸಲಾಗಿದೆ ಎಂದು ಡಾ. ಅಪ್ಪ ವಿವರಣೆ ನೀಡಿದರು.
ಕೊರೊನಾ ಭೀತಿ ಹಿನ್ನಲೆಯಲ್ಲಿ ಬಹಳ ಜನ ಕೂಡಬಾರದು. ಮಾಂಸ ತಿನ್ನೊದು ಕಡಿಮೆ ಮಾಡಬೇಕು. ಉಳ್ಳಾಗಡ್ಡಿಗೆ ಉಪ್ಪು ಲೇಪಿಸಿ ತಿನ್ನಬೇಕೆಂದು ಇದೇ ಸಂದರ್ಭದಲ್ಲಿ ಡಾ. ಶರಣಬಸವಪ್ಪ ಅಪ್ಪ ಅವರು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಹಾಜರಿದ್ದ ಕಲಬುರಗಿ ಜಿಲ್ಲಾಧಿಕಾರಿ ಶರತ್ ಬಿ ಮಾತನಾಡಿ, ಶರಣಬಸವೇಶ್ವರ ಜಾತ್ರೆ ರದ್ದುಗೊಳಿಸಿ ಆದೇಶ ಹೊರಡಿಸಿಲ್ಲ. ಜಾತ್ರೆ ಮುಂದೂಡುವಂತೆ ಹಾಗೂ ಜನ ಸೇರದಂತೆ ಸಂಸ್ಥೆ ವತಿಯಿಂದ ಸಾಂಪ್ರದಾಯಿಕವಾಗಿ ಆಚರಿಸುವಂತೆ ಜಿಲ್ಲಾಡಳಿತ ದಿಂದ ಮನವಿ ಮಾಡಲಾಗಿತ್ತು.
ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಶರಣಬಸವ ವಿವಿಯ ಕುಲಪತಿ ಡಾ. ನಿರಂಜನ್ ನಿಷ್ಠಿ ಸೇರಿದಂತೆ ಮುಂತಾದವರಿದ್ದರು.
ಜಾತ್ರಾ ಮಹೋತ್ಸವಕ್ಕೆ ಜಿಲ್ಲೆಯಲ್ಲದೇ ನಾಡಿನ ಮೂಲೆ ಮೂಲೆಗಳಿಂದ ಭಕ್ತರು ಆಗಮಿಸಿದ್ದಾರೆ. ರಥೋತ್ಸವ ಸಂಜೆ 6 ಬದಲು ಸಂಜೆ 4 ಕ್ಕೆ ಜರುಗಿತು.