ಮುಂಬಯಿ: ಖಾರ್ ಪೂರ್ವದ ಸಾಯಿಬಾಬಾ ರಸ್ತೆಯ ಜವಾಹರ್‌ನಗರ್‌ನ ಪಹೇಲ್ವಾನ್ ಚಾಳ್‌ನಲ್ಲಿ ತುಳು ಕನ್ನಡಿಗರ ಆಡಳಿತದಲ್ಲಿ ಕಳೆದ ಸುಮಾರು ಐದೂವರೆ ದಶಕಗಳಿಂದ ಧಾರ್ಮಿಕ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡುತ್ತಿರುವ ಶ್ರೀ ಶನಿಮಹಾತ್ಮ ಸೇವಾ ಸಮಿತಿ ವತಿಯಿಂದ ಸದ್ಯ ಸೇವಾನಿರತ ಸಾಯಿಧಾಮ್ ಬಿಲ್ಡಿಂಗ್‌ನಲ್ಲಿ ಶನೈಶ್ಚರ ಜನ್ಮ ದಿನಾಚರಣ ಅಂಗವಾಗಿ ಜೂ. 2ರಂದು ಪೂರ್ವ ಸಿದ್ಧತೆಯಾಗಿ ವಿವಿಧ ಪೂಜೆಗಳು ನಡೆದವು.
ಬೆಳಗ್ಗೆ ಸೇವಾ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಭಕ್ತರ ಸೇರುವಿಕೆಯಲ್ಲಿ ತೋರಣ ಮುಹೂರ್ತ, ಪ್ರಾರ್ಥನೆ, ಶನಿಶಾಂತಿ ಪೂಜೆ, ಸಪ್ತಶುದ್ಧಿ, ವಾಸ್ತು ಪೂಜೆ, ಸಂಜೆ ರಕ್ಷಾಹೋಮ, ಅದಿವಾಸ ಪೂಜೆ ನಡೆಯಿತು. ಪುರೋಹಿತ ಶ್ರೀನಿವಾಸ ಜೋಯಿಸರ ತನ್ನ ಪೌರೋಹಿತ್ಯದಲ್ಲಿ ಪೂಜಾದಿ ಗಳನ್ನು ನೆರವೇರಿಸಿ ಜಯಂತ್ಯುತ್ಸವಕ್ಕೆ ಚಾಲನೆಯನ್ನಿತ್ತು ಭಕ್ತರನ್ನು ಅನುಗ್ರಹಿಸಿದರು.
ಜೂ. 3 ರಂದು ಶನಿದೇವರ ಜನ್ಮ ದಿನಾಚರಣೆ ಅಂಗ ವಾಗಿ ಸಾಮೂಹಿಕ ಶನಿಪೂಜೆ ಹಾಗೂ ಶನಿದೇವರ ಸ್ವರ್ಣ ಭಾವಚಿತ್ರ ಪ್ರತಿಷ್ಠಾಪನೆ ನಡೆಯಲಿದೆ. ಅಂತೆಯೇ ಮಂದಿರದಲ್ಲಿ ಚಿನ್ನದ ಶನಿದೇವರ ಭಾವಚಿತ್ರ, ಜಗನ್ಮಾತೆ, ಗುರು ರಾಘವೇಂದ್ರ ಸ್ವಾಮಿ ಹಾಗೂ ಮಹಾಗಣಪತಿ ದೇವರ ಬೆಳ್ಳಿಯ ಭಾವಚಿತ್ರವನ್ನು ಪ್ರತಿಷ್ಠಾಪಿಸಲಾಗುವುದು. ಆ ಪ್ರಯುಕ್ತ ಬೆಳಗ್ಗೆ ಗಣಹೋಮ, ಕಲಶ ಪ್ರತಿಷ್ಟೆ, ಬಿಂಬ ಪ್ರತಿಷ್ಠೆ, ಕಲಶ ಅಭಿಷೇಕ, ಮಹಾಪೂಜೆ ಜರಗಲಿದೆ. ಮಂದಿರದ ಅರ್ಚಕ ನಾಗೇಶ್ ಸುವರ್ಣ ಪೌರೋಹಿತ್ಯದಲ್ಲಿ ಕಲಶ ಪ್ರತಿಷ್ಠಾಪನೆ ನೆರವೇರಿಸಲಿದ್ದಾರೆ. ಸಂಜೆ ಭಜನೆ, ಗ್ರಂಥ ಪಾರಾಯಣ, ವಾಚನ, ರಾತ್ರಿ ಮಹಾ ಮಂಗಳಾರತಿ, ತೀರ್ಥಪ್ರಸಾದ ವಿತರಣೆ ಜರಗಲಿದೆ ಎಂದು ಸಮಿತಿ ಗೌರವ ಕಾರ್ಯಾಧ್ಯಕ್ಷ ಶ್ರೀಧರ್ ಜೆ. ಪೂಜಾರಿ, ಅಧ್ಯಕ್ಷ ಶಂಕರ್ ಕೆ. ಸುವರ್ಣ, ಗೌರವ ಪ್ರ. ಕಾ. ಯೋಗೇಶ್ ಕೆ. ಹೆಜ್ಮಾಡಿ ಅವರು ತಿಳಿಸಿದ್ದಾರೆ.
ಚಿತ್ರ-ವರದಿ: ರೋನ್ಸ್ ಬಂಟ್ವಾಳ್