Advertisement

ಟಿ20: ಶ್ರೇಯಸ್‌-ಸಂಜು ಅಬ್ಬರಕ್ಕೆ ಸರಣಿ ಶ್ರೇಯಸ್ಸು

10:55 PM Feb 26, 2022 | Team Udayavani |

ಧರ್ಮಶಾಲಾ: ವನ್‌ಡೌನ್‌ ಬ್ಯಾಟ್ಸ್‌ಮನ್‌ ಶ್ರೇಯಸ್‌ ಅಯ್ಯರ್‌ ಅವರ ಅಬ್ಬರದ ಬ್ಯಾಟಿಂಗ್‌ ಸಾಹಸದಿಂದ ಶ್ರೀಲಂಕಾವನ್ನು ದ್ವಿತೀಯ ಟಿ20 ಪಂದ್ಯದಲ್ಲಿ 7 ವಿಕೆಟ್‌ಗಳಿಂದ ಮಣಿಸಿದ ಭಾರತ ಸರಣಿ ಗೌರವ ಸಂಪಾದಿಸಿದೆ.

Advertisement

ಧರ್ಮಶಾಲಾದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಬ್ಯಾಟಿಂಗಿಗೆ ಇಳಿದ ಶ್ರೀಲಂಕಾ 5 ವಿಕೆಟಿಗೆ 183 ರನ್ನುಗಳ ದೊಡ್ಡ ಮೊತ್ತವನ್ನೇ ಪೇರಿಸಿತು. ಭಾರತ ಕೇವಲ 17.1 ಓವರ್‌ಗಳಲ್ಲಿ ಮೂರೇ ವಿಕೆಟಿಗೆ 186 ರನ್‌ ಬಾರಿಸಿ ವಿಜಯೋತ್ಸವ ಆಚರಿಸಿತು.

ಸತತ 2ನೇ ಶತಕಾರ್ಧದೊಂದಿಗೆ ಮೆರೆದ ಶ್ರೇಯಸ್‌ ಅಯ್ಯರ್‌ ಆರಂಭಿಕ ಆಘಾತದಿಂದ ತಂಡವನ್ನು ಪಾರು ಮಾಡಿ ಸುರಕ್ಷಿತವಾಗಿ ದಡ ಸೇರಿಸಿದರು. ಅಯ್ಯರ್‌ ಅಬ್ಬರದ ಬ್ಯಾಟಿಂಗ್‌ ಮೂಲಕ ಅಜೇಯ 74 ರನ್‌ ಬಾರಿಸಿದರು. ಕೇವಲ 44 ಎಸೆತ ಎದುರಿಸಿದ ಅವರು 6 ಬೌಂಡರಿ, 4 ಸಿಕ್ಸರ್‌ ಸಿಡಿಸಿ ಲಂಕಾ ಬೌಲಿಂಗ್‌ ದಾಳಿಯನ್ನು ಧೂಳೀಪಟಗೊಳಿಸಿದರು. ಗೆಲುವಿನ ಬೌಂಡರಿ ಬಾರಿಸಿದ ರವೀಂದ್ರ ಜಡೇಜ 18 ಎಸೆತಗಳಿಂದ 45 ರನ್‌ ಬಾರಿಸಿ ಅಜೇಯರಾಗಿ ಉಳಿದರು (7 ಬೌಂಡರಿ, 1 ಸಿಕ್ಸರ್‌). ಈ ಜೋಡಿಯಿಂದ ಮುರಿಯದ 4ನೇ ವಿಕೆಟಿಗೆ 26 ಎಸೆತಗಳಿಂದ 58 ರನ್‌ ಹರಿದು ಬಂತು. ಸರಣಿಯ ಅಂತಿಮ ಪಂದ್ಯ ರವಿವಾರ ಇದೇ ಅಂಗಳದಲ್ಲಿ ನಡೆಯಲಿದೆ.

ಲಂಕೆಯ ದೊಡ್ಡ ಮೊತ್ತವನ್ನು ಬೆನ್ನಟ್ಟಲಿಳಿದ ಭಾರತಕ್ಕೆ ಪವರ್‌ ಪ್ಲೇ ಒಳಗಾಗಿ ಅವಳಿ ಆಘಾತ ಎದುರಾಯಿತು. ಆರಂಭಿಕರಾದ ನಾಯಕ ರೋಹಿತ್‌ ಶರ್ಮ (1) ಮತ್ತು ಇಶಾನ್‌ ಕಿಶನ್‌ (16) ಬೇಗನೇ ಔಟಾದರು. ಚಮೀರ ಮೊದಲ ಓವರ್‌ನಲ್ಲೇ ಭಾರತದ ಕಪ್ತಾನನನ್ನು ಪೆವಿಲಿಯನ್ನಿಗೆ ಕಳುಹಿಸಿದರೆ, ಕಳೆದ ಪಂದ್ಯದ ಹೀರೋ ಇಶಾನ್‌ ಕಿಶನ್‌ ಅವರಿಗೆ ಲಹಿರು ಕುಮಾರ ಬಲೆ ಬೀಸಿದರು. 6 ಓವರ್‌ ಅಂತ್ಯಕ್ಕೆ ಭಾರತ 2ಕ್ಕೆ 42 ರನ್‌ ಮಾಡಿ ಒತ್ತಡಕ್ಕೆ ಸಿಲುಕಿತ್ತು.
ಮುಂದಿನದು ಶ್ರೇಯಸ್‌ ಅಯ್ಯರ್‌ ಸಾಹಸ. ತಂಡವನ್ನು ಕುಸಿತದಿಂದ ಪಾರು ಮಾಡಿದ ಅಯ್ಯರ್‌ ಲಂಕಾ ಬೌಲರ್‌ಗಳ ಮೇಲೆ ಘಾತಕವಾಗಿ ಎರಗಿದರು. ಕರುಣಾರತ್ನೆ ಎಸೆತವನ್ನು ಸಿಕ್ಸರ್‌ಗೆ ಬಡಿದಟ್ಟಿ ಸತತ 2ನೇ ಅರ್ಧ ಶತಕ ಬಾರಿಸಿದರು. ಅಯ್ಯರ್‌ ಅವರ ಅಬ್ಬರದ ಬ್ಯಾಟಿಂಗ್‌ನಿಂದಾಗಿ ಭಾರತ 12ನೇ ಓವರ್‌ನಲ್ಲಿ ನೂರರ ಗಡಿ ದಾಟಿತು.

ಅಯ್ಯರ್‌ಗೆ ಸಂಜು ಸ್ಯಾಮ್ಸನ್‌ ಉತ್ತಮ ಬೆಂಬಲ ನೀಡಿದರು. ಅಯ್ಯರ್‌ ಐವತ್ತರ ಗಡಿ ದಾಟಿದ ಬಳಿಕ ಸಂಜು ಕೂಡ ಮುನ್ನುಗ್ಗಿ ಬಾರಿಸತೊಡಗಿದರು. ಶ್ರೀಲಂಕಾ ಬೌಲಿಂಗ್‌ ಸಂಪೂರ್ಣವಾಗಿ ಹಳಿ ತಪ್ಪಿತು. ಈ ಜೋಡಿಯಿಂದ 3ನೇ ವಿಕೆಟಿಗೆ 47 ಎಸೆತಗಳಿಂದ 84 ರನ್‌ ಒಟ್ಟುಗೂಡಿತು. ಹೀಗಾಗಿ ಭಾರತಕ್ಕೆ ಒತ್ತಡ ಎದುರಾಗಲಿಲ್ಲ. ಸಂಜು ಗಳಿಕೆ 25 ಎಸೆತಗಳಿಂದ 39 ರನ್‌. 3 ಸಿಕ್ಸರ್‌, 2 ಬೌಂಡರಿಗಳಿಂದ ಅಬ್ಬರಿಸಿದರು.

Advertisement

ಎಚ್ಚರಿಕೆಯ ಆರಂಭ
ಮೊದಲ ಪಂದ್ಯಕ್ಕೆ ಹೋಲಿಸಿದರೆ ಶ್ರೀಲಂಕಾದ ಆರಂಭ ಉತ್ತಮ ಮಟ್ಟದಲ್ಲಿತ್ತು. ಅಲ್ಲಿ ಮೊದಲ ಎಸೆತದಲ್ಲೇ ವಿಕೆಟ್‌ ಉದುರಿಸಿಕೊಂಡಿದ್ದ ಲಂಕಾ ಇಲ್ಲಿ ನಿಧಾನ ಗತಿಯಲ್ಲಿ ಆಟ ಆರಂಭಿಸಿತು. ಪವರ್‌ ಪ್ಲೇ ಅವಧಿಯಲ್ಲಿ ಪಥುಮ್‌ ನಿಸ್ಸಂಕ ಮತ್ತು ದನುಷ್ಕ ಗುಣತಿಲಕ ಭಾರತದ ದಾಳಿಯನ್ನು ಎಚ್ಚರಿಕೆಯಿಂದ ನಿಭಾಯಿಸಿದರು. ಆದರೆ ಸಿಡಿದು ನಿಲ್ಲಲು ಸಾಧ್ಯವಾಗಲಿಲ್ಲ. ಈ ಅವಧಿಯಲ್ಲಿ ಒಟ್ಟುಗೂಡಿದ್ದು 32 ರನ್‌ ಮಾತ್ರ. ಅನಂತರವೇ ಇವರ ಆಟ ಬಿರುಸು ಪಡೆದದ್ದು. 8 ಓವರ್‌ಗಳಲ್ಲಿ 50 ರನ್‌ ಜತೆಯಾಟ ನಿಭಾಯಿಸಿದರು.

ಗುಣತಿಲಕ ತಮ್ಮ ಆಯ್ಕೆಯನ್ನು ಭರ್ಜರಿಯಾಗಿ ಸಮರ್ಥಿಸಿಕೊಂಡರು. ಜಡೇಜ ಓವರ್‌ನಲ್ಲಿ 6, 4, 6 ರನ್‌ ಸಿಡಿಸಿ ಅಪಾಯಕಾರಿಯಾಗಿ ಬೆಳೆಯುವ ಸೂಚನೆ ನೀಡಿದರು. ಆದರೆ ಮುಂದಿನ ಎಸೆತದಲ್ಲೇ ಮತ್ತೂಂದು ದೊಡ್ಡ ಹೊಡೆತಕ್ಕೆ ಮುಂದಾಗಿ ಪೆವಿಲಿಯನ್‌ ಸೇರಿಕೊಂಡರು. ಗುಣತಿಲಕ ಅವರ 38 ರನ್‌ 29 ಎಸೆತಗಳಿಂದ ಬಂತು. ಸಿಡಿಸಿದ್ದು 4 ಫೋರ್‌, 2 ಸಿಕ್ಸರ್‌. ಮೊದಲ ವಿಕೆಟಿಗೆ 8.4 ಓವರ್‌ಗಳಿಂದ 67 ರನ್‌ ಒಟ್ಟುಗೂಡಿತು.

ಚಹಲ್‌ ಮುಂದಿನ ಓವರ್‌ನಲ್ಲೇ ಅಪಾಯಕಾರಿ ಚರಿತ ಅಸಲಂಕ ಅವರನ್ನು ಲೆಗ್‌ ಬಿಫೋರ್‌ ಬಲೆಗೆ ಬೀಳಿಸಿದರು. ಅರ್ಧ ಹಾದಿ ಕ್ರಮಿಸುವ ವೇಳೆ ಲಂಕಾ ಸ್ಕೋರ್‌ಬೋರ್ಡ್‌ 2ಕ್ಕೆ 71 ರನ್‌ ತೋರಿಸುತ್ತಿತ್ತು. 11ನೇ ಓವರ್‌ನಲ್ಲಿ ಕಮಿಲ್‌ ಮಿಶಾರ ಅವರನ್ನು ಔಟ್‌ ಮಾಡಿದ ಹರ್ಷಲ್‌ ಪಟೇಲ್‌ ಲಂಕೆಗೆ ಮತ್ತೂಂದು ಆಘಾತವಿಕ್ಕಿದರು. ಚಂಡಿಮಾಲ್‌ ಕೂಡ ವಿಫ‌ಲರಾದರು.

ನಿಸ್ಸಂಕ-ಶಣಕ ಸಾಹಸ
ಆದರೆ ಒಂದೆಡೆ ಕ್ರೀಸ್‌ ಆಕ್ರಮಿಸಿಕೊಂಡು ನಿಂತಿದ್ದ ನಿಸ್ಸಂಕ ಮತ್ತು ನಾಯಕ ದಸುನ್‌ ಶಣಕ ಜತೆಗೂಡಿದೊಡನೆ ಲಂಕಾ ಬ್ಯಾಟಿಂಗ್‌ ಬಿರುಸು ಪಡೆಯಿತು. ಡೆತ್‌ ಓವರ್‌ಗಳಲ್ಲಿ ರನ್‌ ಪ್ರವಾಹವೇ ಹರಿಯಿತು. ನಿಸ್ಸಂಕ-ಶಣಕ 26 ಎಸೆತಗಳಿಂದ 58 ರನ್‌ ರಾಶಿ ಹಾಕಿದರು. ನಿಸ್ಸಂಕ ಕೊಡುಗೆ 53 ಎಸೆತಗಳಿಂದ 75 ರನ್‌ (11 ಬೌಂಡರಿ). ಶಣಕ ಔಟಾಗದೆ 47 ರನ್‌ ಬಾರಿಸಿದರು. ಕೇವಲ 19 ಎಸೆತಗಳಲ್ಲಿ 5 ಸಿಕ್ಸರ್‌ ಹಾಗೂ 2 ಬೌಂಡರಿ ಸಿಡಿಸಿ ಮೆರೆದರು. ಕೊನೆಯ 5 ಓವರ್‌ಗಳಲ್ಲಿ ಲಂಕಾ 80 ರನ್‌ ಸೂರೆಗೈದಿತು.

ರೋಹಿತ್‌ ವಿಶ್ವದಾಖಲೆ
ಇದು ಸ್ವದೇಶದಲ್ಲಿ ರೋಹಿತ್‌ ಶರ್ಮ ನಾಯಕತ್ವದಲ್ಲಿ ಒಲಿದ 16ನೇ ಗೆಲುವು. ಇದು ಅತ್ಯಧಿಕ ಗೆಲುವಿನ ವಿಶ್ವದಾಖಲೆ.

ಸ್ಕೋರ್‌ ಪಟ್ಟಿ
ಶ್ರೀಲಂಕಾ
ಪಥುಮ್‌ ನಿಸ್ಸಂಕ ಎಲ್‌ಬಿಡಬ್ಲ್ಯು ಭುವನೇಶ್ವರ್‌ 75
ದನುಷ್ಕ ಗುಣತಿಲಕ ಸಿ ವಿ.ಅಯ್ಯರ್‌ ಬಿ ಜಡೇಜ 38
ಚರಿತ ಅಸಲಂಕ ಎಲ್‌ಬಿಡಬ್ಲ್ಯು ಚಹಲ್‌ 2
ಕಮಿಲ್‌ ಮಿಶಾರ ಸಿ ಶ್ರೇಯಸ್‌ ಬಿ ಹರ್ಷಲ್‌ 1
ದಿನೇಶ್‌ ಚಂಡಿಮಾಲ್‌ ಸಿ ರೋಹಿತ್‌ ಬಿ ಬುಮ್ರಾ 9
ದಸುನ್‌ ಶಣಕ ಔಟಾಗದೆ 47
ಚಮಿಕ ಕರುಣಾರತ್ನೆ ಔಟಾಗದೆ 0
ಇತರ 11
ಒಟ್ಟು (20 ಓವರ್‌ಗಳಲ್ಲಿ 5 ವಿಕೆಟಿಗೆ) 183
ವಿಕೆಟ್‌ ಪತನ: 1-67, 2-71, 3-76, 4-102, 5-160.
ಬೌಲಿಂಗ್‌:
ಭುವನೇಶ್ವರ್‌ ಕುಮಾರ್‌ 4-0-36-1
ಜಸ್‌ಪ್ರೀತ್‌ ಬುಮ್ರಾ 4-0-24-1
ಹರ್ಷಲ್‌ ಪಟೇಲ್‌ 4-0-52-1
ಯಜುವೇಂದ್ರ ಚಹಲ್‌ 4-0-27-1
ರವೀಂದ್ರ ಜಡೇಜ 4-0-37-1

ಭಾರತ
ರೋಹಿತ್‌ ಶರ್ಮ ಬಿ ಚಮೀರ 1
ಇಶಾನ್‌ ಕಿಶನ್‌ ಸಿ ಶಣಕ ಬಿ ಕುಮಾರ 16
ಶ್ರೇಯಸ್‌ ಅಯ್ಯರ್‌ ಔಟಾಗದೆ 74
ಸಂಜು ಸ್ಯಾಮ್ಸನ್‌ ಸಿ ಫೆರ್ನಾಂಡೊ ಬಿ ಕುಮಾರ 39
ರವೀಂದ್ರ ಜಡೇಜ ಔಟಾಗದೆ 45
ಇತರ 11
ಒಟ್ಟು (17.1 ಓವರ್‌ಗಳಲ್ಲಿ 3 ವಿಕೆಟಿಗೆ) 186
ವಿಕೆಟ್‌ ಪತನ: 1-9, 2-44, 3-128.
ಬೌಲಿಂಗ್‌:
ದುಷ್ಮಂತ ಚಮೀರ 3.1-0-39-1
ಬಿನುರ ಫೆರ್ನಾಂಡೊ 4-0-47-0
ಲಹಿರು ಕುಮಾರ 3-0-31-2
ಪ್ರವೀಣ ಜಯವಿಕ್ರಮ 2-0-19-0
ಚಮಿಕ ಕರುಣಾರತ್ನೆ 3-0-24-0
ದಸುನ್‌ ಶಣಕ 2-0-24-0

Advertisement

Udayavani is now on Telegram. Click here to join our channel and stay updated with the latest news.

Next