ಹ್ಯಾಮಿಲ್ಟನ್: ಸೆಡಾನ್ ಪಾರ್ಕ್ ನಲ್ಲಿ ನಲ್ಲಿ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಆರಂಭಿಕ ಆಘಾತದ ನಡುವೆಯೂ ಶ್ರೇಯಸ್ ಅಯ್ಯರ್ ಚೊಚ್ಚಲ ಶತಕ, ಮತ್ತು ರಾಹುಲ್ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಬೃಹತ್ ಮೊತ್ತವನ್ನು ಪೇರಿಸಿದೆ.
ಶ್ರೇಯಸ್ ಆಯ್ಯರ್ ಮನಮೋಹಕ ಚೊಚ್ಚಲ ಶತಕ (103) , ಕೆ,ಎಲ್ ರಾಹುಲ್(88) ಮತ್ತು ನಾಯಕ ವಿರಾಟ್ ಕೊಹ್ಲಿಯ (51) ಅಮೋಘ ಅರ್ಧಶತಕದ ನೆರವಿನೊಂದಿಗೆ ನ್ಯೂಜಿಲ್ಯಾಂಡ್ ಗೆ 348 ರನ್ ಗಳ ಗುರಿ ನೀಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಗೆ ಇಳಿದ ಭಾರತದ ಆರಂಭ ಉತ್ತಮವಾಗಿತ್ತು. ಏಕದಿನ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ ನೂತನ ಆರಂಭಿಕ ಜೋಡಿ ಮಯಾಂಕ್ ಮತ್ತು ಪೃಥ್ವಿ ಶಾ ಅಲ್ಪ ಮೊತ್ತಕ್ಕೆ ಔಟಾದಾರೂ ಅರ್ಧಶತಕದ ಜೊತೆಯಾಟ ನೀಡಿದರು. 21 ಎಸೆತಗಳಲ್ಲಿ 3 ಬೌಂಡರಿ ಸೇರಿ 20 ರನ್ ದಾಖಲಿಸಿದ್ದ ಪೃಥ್ವಿ ಶಾ 8ನೇ ಓವರ್ ನಲ್ಲಿ ಗ್ರ್ಯಾಂಡ್ ಹೋಮ್ ಎಸೆತಕ್ಕೆ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಮಯಾಂಕ್ ಕೂಡ 32 ರನ್ ಗಳಿಸಿ ಸೌಥೀಗೆ ವಿಕೆಟ್ ಒಪ್ಪಿಸಿ ನಿರ್ಗಮಿಸಿದರು.
ನಂತರ ಬಂದ ನಾಯಕ ವಿರಾಟ್ ಕೊಹ್ಲಿ 6 ಭರ್ಜರಿ ಫೋರ್ ಗಳ ನೆರವಿನಿಂದ 51 ರನ್ ಬಾರಿಸಿ ಐಶ್ ಸೋಧಿ ಬೌಲಿಂಗ್ ನಲ್ಲಿ ಬೌಲ್ಡ್ ಆದರು. ನಂತರ ಜೊತೆಗೂಡಿದ ಅಯ್ಯರ್ ಮತ್ತು ರಾಹುಲ್ ಬೌಂಡರಿ ಮತ್ತು ಸಿಕ್ಸರ್ ಗಳ ಸುರಿಮಳೆಗೈದರು. ಅಯ್ಯರ್ 107 ಎಸೆತಗಳಲ್ಲಿ 103 ರನ್ ಗಳಿಸಿ ಸೌಥಿಗೆ ವಿಕಟ್ ಒಪ್ಪಿಸಿದರು. ಈ ಆಟದಲ್ಲಿ 1 ಸಿಕ್ಸರ್ ಸಹಿತ 11 ಭರ್ಜರಿ ಬೌಂಡರಿಗಳಿದ್ದವು.
ಬಿರುಸಿನ ಆಟವಾಡಿದ ಕೆ. ಎಲ್ ರಾಹುಲ್ 6 ಸಿಕ್ಸರ್ 3 ಬೌಂಡರಿಗಳ ನೆರವಿನಿಂದ 64 ಎಸೆತಗಳಲ್ಲಿ 88 ರನ್ ಗಳಿಸಿದರು. ಉತ್ತಮ ಜೊತೆಯಾಟ ನೀಡಿದ ಕೇಧಾರ್ ಜಾದವ್ 1 ಸಿಕ್ಸರ್ ಮತ್ತು 3 ಬೌಡರಿಗಳ 26 ರನ್ ಗಳಿಸಿದರು. ಅಂತಿಮವಾಗಿ ಟೀಂ ಇಂಡಿಯಾ ನಿಗದಿತ 50 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 347 ರನ್ ಗಳಿಸಿತು. ಆ ಮೂಲಕ ನ್ಯೂಜಿಲ್ಯಾಂಡ್ ಗೆ 348 ರನ್ ಗಳ ಟಾರ್ಗೆಟ್ ನೀಡಿದೆ.
ದುಬಾರಿ ಸ್ಪೆಲ್ ನಡೆಸಿದ ಟಿಮ್ ಸೌಥಿ 85 ರನ್ ನೀಡಿ 2 ವಿಕೆಟ್ ಪಡೆದರು. ಕಾಲಿನ್ ಡಿ ಗ್ರ್ಯಾಂಡ್ ಹೋಮ್ ಮತ್ತು ಐಶ್ ಸೋಧಿ ತಲಾ ಒಂದು ವಿಕೆಟ್ ಹಂಚಿಕೊಂಡಿದ್ದಾರೆ.