ಕಾನ್ಪುರ: ಪ್ರವಾಸಿ ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಾಟ ಅಂತ್ಯವಾಗಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ತಂಡ ನಾಲ್ಕು ವಿಕೆಟ್ ನಷ್ಟಕ್ಕೆ 258 ರನ್ ಗಳಿಸಿದ್ದು, ದಿನದ ಗೌರವ ಪಡೆದಿದೆ.
ಮೊದಲ ಟೆಸ್ಟ್ ಪಂದ್ಯವಾಡುತ್ತಿರುವ ಶ್ರೇಯಸ್ ಅಯ್ಯರ್, ಆರಂಭಿಕ ಆಟಗಾರ ಶುಭ್ಮನ್ ಗಿಲ್ ಮತ್ತು ಆಲ್ ರೌಂಡರ್ ರವೀಂದ್ರ ಜಡೇಜಾ ಅರ್ಧಶತಕದ ಕಾಣಿಕೆ ನೀಡಿದರು. ಕಿವೀಸ್ ಪರ ಕೈಲ್ ಜೇಮಿಸನ್ ಮಿಂಚಿದರು.
ಗಿಲ್ ಜೊತೆ ಇನ್ನಿಂಗ್ಸ್ ಆರಂಭಿಸಿದ ಕನ್ನಡಿಗ ಮಯಾಂಕ್ ಅಗರ್ವಾಲ್ 13 ರನ್ ಗೆ ಔಟಾದರು. ನಂತರ ಬಂದ ಅನುಭವಿ ಚೇತೇಶ್ವರ ಪೂಜಾರ ಗಳಿಸಿದ್ದು 26 ರನ್ ಮಾತ್ರ. ಶುಭ್ಮನ್ ಗಿಲ್ ತನ್ನ ನಾಲ್ಕನೇ ಟೆಸ್ಟ್ ಅರ್ಧಶತಕ (52) ಗಳಿಸಿದರು. ನಾಯಕ ಅಜಿಂಕ್ಯ ರಹಾನೆ ಉತ್ತಮ ಆರಂಭ ಪಡೆದರೂ, 35 ರನ್ ಗೆ ಜೇಮಿಸನ್ ಬೌಲಿಂಗ್ ನಲ್ಲಿ ಬೌಲ್ಡ್ ಆದರು.
ಇದನ್ನೂ ಓದಿ:ಆರ್ ಸಿಬಿ, ಸಿಎಸ್ ಕೆ ರಿಟೆನ್ಶನ್ ಆಟಗಾರರ ಪಟ್ಟಿ ಸಿದ್ದ: ಪಾಂಡ್ಯ ಬ್ರದರ್ಸ್ ಕೈಬಿಟ್ಟ ಮುಂಬೈ
145 ರನ್ ಗೆ ನಾಲ್ಕು ವಿಕೆಟ್ ಕಳೆದುಕೊಂಡ ಭಾರತಕ್ಕೆ ಅಯ್ಯರ್ ಮತ್ತು ಜಡೇಜಾ ನೆರವಾದರು. ಇವರಿಬ್ಬರು ಮುರಿಯದ ಐದನೇ ವಿಕೆಟ್ ಗೆ 113 ರನ್ ಗಳಿಸಿ ಎರಡನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಅಯ್ಯರ್ 75 ರನ್ ಗಳಿಸಿದ್ದು, ಜಡೇಜಾ 50 ರನ್ ಗಳಿಸಿದ್ದಾರೆ. ಕಿವೀಸ್ ಪರ ಕೈಲ್ ಜೇಮಿಸನ್ ಮೂರು ವಿಕೆಟ್ ಪಡೆದರೆ, ಟಿಮ್ ಸೌಥಿ ಒಂದು ವಿಕೆಟ್ ಪಡೆದರು.