ಬೆಳ್ತಂಗಡಿ: ನೀರುನಾಯಿಗಳ ಉಪಟಳದಿಂದ ಶಿಶಿಲ ಗ್ರಾಮದ ಕಪಿಲಾ ನದಿ ತಟದಲ್ಲಿರುವ ಶಿಶಿಲೇಶ್ವರ ದೇವಸ್ಥಾ ನದ ದೇವರ ಮೀನುಗಳಿಗೆ ಸಂಕಷ್ಟ ಎದುರಾಗಿರುವ ಹಿನ್ನೆಲೆಯಲ್ಲಿ ಶನಿವಾರ ಉಪ್ಪಿನಂಗಡಿ ವ್ಯಾಪ್ತಿಯ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯರೊಂದಿಗೆ ಮಾತುಕತೆ ನಡೆಸಿದರು.
ದೇವರ ಮೀನುಗಳಿಗೆ ನೀರುನಾಯಿಗಳ ಉಪಟಳದ ಬಗ್ಗೆ “ಉದಯವಾಣಿ’ ಶನಿವಾರ ವರದಿ ಪ್ರಕಟಿಸಿತ್ತು. ಹೀಗಾಗಿ ಅರಣ್ಯ ಇಲಾಖೆ ಅಧಿಕಾರಗಳು ಸ್ಥಳೀಯರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಆಲಿಸಿದರು. ನೀರುನಾಯಿಗಳು ವರ್ಷದ ಕೆಲವು ದಿನಗಳಷ್ಟೇ ಕಾಣಸಿಗುತ್ತವೆ. ನದಿಯಲ್ಲಿ ನೀರು ಹೆಚ್ಚಳವಾದರೆ ಸ್ಥಳಾಂತರಗೊಳ್ಳುತ್ತವೆ. ಆದ್ದರಿಂದ ಅವುಗಳ ಆವಾಸಸ್ಥಾನ ಸ್ಥಳಾಂತರಕ್ಕೆ ಕಾನೂನಿನಲ್ಲಿ ಅವಕಾಶ ವಿರುವುದಿಲ್ಲ.
ನದಿಗಳಲ್ಲಿನ ಪ್ರಮುಖ ಸ್ಥಳದಲ್ಲಿ ಕಸಕಡ್ಡಿ ತೆರವುಗೊಳಿಸಬಹುದಾಗಿದೆ. ಉಳಿದಂತೆ ಕ್ಷೇತ್ರದ ಪ್ರಮುಖರ ಬೇಡಿಕೆಯಂತೆ ರಾತ್ರಿ ಹೊತ್ತು ಕಾವಲು ಕಾಯಲು ನಿರ್ಧರಿಸಲಾಗಿದೆ. ದೇವರ ಮೀನಿಗೆ ನೇಮಿಸಿರುವ ಕಾವಲು ಸಮಿತಿಗೆ ಅರಣ್ಯ ಇಲಾಖೆಗೆ ಅಧಿಕಾರಿಗಳ ದೂರವಾಣಿ ಸಂಖ್ಯೆ ನೀಡಿದ್ದು ನೀರುನಾಯಿ ಕಂಡುಬಂದಲ್ಲಿ ಮಾಹಿತಿ ನೀಡುವಂತೆ ತಿಳಿಸಲಾಗಿದೆ. ಜತೆಗೆ ನದಿಯಲ್ಲಿ ಸ್ವಚ್ಛತೆ ನಡೆಸಿ ಕಸಕಡ್ಡಿ, ಪೊದೆಗಳನ್ನು ತೆರವುಗೊಳಿಸಲಾಗುವುದು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಈ ವೇಳೆ ದೇವಸ್ಥಾನದ ವ್ಯವಸ್ಥಾ ಪನ ಸಮಿತಿ ಅಧ್ಯಕ್ಷ ಶ್ರೀನಿವಾಸ ಮೂಡೆತ್ತಾಯ, ಕಳೆಂಜ ಶಾಖೆ ಉಪ ವಲಯ ಅರಣ್ಯಾಧಿಕಾರಿ ಪ್ರಶಾಂತ್, ಅರಣ್ಯ ರಕ್ಷಕ ನಾಗಲಿಂಗ ಬಡಿಗೇರ್ ಸ್ಥಳದಲ್ಲಿದ್ದರು.