ಪುತ್ತೂರು : ಶ್ರೀ ಲಕ್ಷ್ಮೀದೇವಿ ಬೆಟ್ಟ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಜೀರ್ಣೋದ್ಧಾರದ ಪ್ರಯುಕ್ತ ಗರ್ಭಗುಡಿ ನಿರ್ಮಾಣದ ‘ಕೃಷ್ಣ ಶಿಲೆ’ಯ ವೈಭವದ ಮೆರವಣಿಗೆ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದ ಬಳಿಯಿಂದ ಶುಕ್ರವಾರ ನಡೆಯಿತು.
ಶ್ರೀ ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎನ್. ಸುಧಾಕರ ಶೆಟ್ಟಿ ತೆಂಗಿನಕಾಯಿ ಒಡೆಯುವ ಮೂಲಕ ಮೆರವಣಿಗೆಯನ್ನು ಉದ್ಘಾಟಿಸಿದರು. ಉದ್ಯಮಿ ಕೆ.ಎಸ್. ಅಶೋಕ್ ಕುಮಾರ್ ರೈ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ನೆಲ್ಲಿಕಟ್ಟೆ ಪ್ರಭಾಕರ ಶೆಟ್ಟಿಯವರಿಗೆ ಧ್ವಜ ಹಸ್ತಾಂತರಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.
ಚಂಡೆ, ಕೊಂಬು, ವಾದ್ಯ, ಭಜನೆ, ಬೊಂಬೆ ಕುಣಿತ ಮೊದಲಾದ ಆಕರ್ಷಣೆಗಳೊಂದಿಗೆ ಮೂರು ವಾಹನಗಳಲ್ಲಿ ಕೃಷ್ಣಶಿಲೆಯ ಮೆರವಣಿಗೆ ದೇಗುಲದ ಬಳಿಯಿಂದ ಸಾಗಿ, ಮುಖ್ಯರಸ್ತೆಯಾಗಿ, ಕೆಎಸ್‌ಆರ್‌ಟಿಸಿ ಬಸ್ಸು ನಿಲ್ದಾಣ, ರೈಲ್ವೇ ಗೇಟ್ ಬಳಿಯಿಂದ ಎಡಕ್ಕೆ ತಿರುಗಿ ಲಕ್ಷ್ಮೀದೇವಿ ಬೆಟ್ಟಕ್ಕೆ ತೆರಳಿತು.
ತಾಂಬೂಲ ಹಸ್ತಾಂತರ
ದೇಗುಲ ನಿರ್ಮಾಣ ಶಿಲ್ಪಿ ವೆಂಕಟೇಶ್ ಬೆಳ್ತಂಗಡಿ, ವಾಸ್ತು ಎಂಜಿನಿಯರ್ ಪಿ.ಜಿ. ಜಗನ್ನಿವಾಸ್ ರಾವ್‌ರಿಗೆ ಕ್ಷೇತ್ರದ ಪರವಾಗಿ ತಂತ್ರಿಗಳು ತಾಂಬೂಲ ನೀಡಿ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡುವಂತೆ ಮನವಿ ಮಾಡಿದರು. ಬಳಿಕ ದೇವಿಗೆ ಮಹಾಪೂಜೆ ನೆರವೇರಿತು.
ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಎನ್. ಐತ್ತಪ್ಪ ಸಪಲ್ಯ, ಅಧ್ಯಕ್ಷ ಪ್ರಭಾಕರ ಶೆಟ್ಟಿ ನೆಲ್ಲಿಕಟ್ಟೆ, ಪ್ರಧಾನ ಕಾರ್ಯದರ್ಶಿ ಕೃಷ್ಣ ಪ್ರಸಾದ್ ಬೆಟ್ಟ, ಜನಾರ್ದನ ಬೆಟ್ಟ, ಕಾರ್ಯಾಧ್ಯಕ್ಷ ಮುರಳೀಕೃಷ್ಣ ಹಸಂತ್ತಡ್ಕ, ಉಪಾಧ್ಯಕ್ಷೆ ನಯನಾ ವಿ. ರೈ ಕುದ್ಕಾಡಿ, ಜತೆ ಕಾರ್ಯ ದರ್ಶಿ ಇಂದುಶೇಖರ್, ರಾಜೀವ ಸುವರ್ಣ, ಹರಿಪ್ರಸಾದ್ ಶೆಟ್ಟಿ ನೆಲ್ಲಿಕಟ್ಟೆ, ಲಕ್ಷ್ಮೀ ಪ್ರಸಾದ್ ಬೆಟ್ಟ, ದಿನೇಶ್ ಸಾಲ್ಯಾನ್, ಸತೀಶ್ ಬಿ.ಎಸ್., ನಿತಿನ್ ನಿಡ್ಪಳ್ಳಿ , ಡಾ| ಕೃಷ್ಣಪ್ರಸನ್ನ, ನವೀನ್ ಕುಲಾಲ್, ಅರುಣ್ ಕುಮಾರ್ ಪುತ್ತಿಲ, ಸವಣೂರು ಕೆ. ಸೀತಾರಾಮ ರೈ, ಯು. ಲೋಕೇಶ್ ಹೆಗ್ಡೆ, ನಯನಾ ರೈ, ಜಾನು ನಾಯ್ಕ, ಜಗನ್ನಾಥ ಶೆಟ್ಟಿ, ಪಿ.ಕೆ. ಗಣೇಶನ್, ಅಜಿತ್ ರೈ, ದಿನೇಶ್ ಜೈನ್ ಪಾಲ್ಗೊಂಡರು.
ಸುಮಾರು 7 ಕೋಟಿ ರೂ. ವೆಚ್ಚದಲ್ಲಿ ದೇವಸ್ಥಾನ ಜೀರ್ಣೋದ್ಧಾರಗೊಳ್ಳಲಿದ್ದು, 4.75 ಕೋ. ರೂ. ವೆಚ್ಚದಲ್ಲಿ ದೇವಿಯ ಕೃಷ್ಣಶಿಲೆಯ ಗರ್ಭಗುಡಿ ನಿರ್ಮಾಣಗೊಳ್ಳಲಿದೆ.
ಶಿಲಾಪೂಜನ
11.50ರ ಮಿಥುನ ಲಗ್ನ ಶುಭ ಮುಹೂರ್ತದಲ್ಲಿ ಪುತ್ತೂರು ಕ್ಷೇತ್ರ ತಂತ್ರಿ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಯವರಿಗೆ
ಆಚಾರ್ಯವರಣ ನೀಡಲಾಯಿತು. ತಂತ್ರಿಗಳ ನೇತೃತ್ವದಲ್ಲಿ ಗರ್ಭಗುಡಿಯ ಶಿಲೆಯ ಶಿಲಾಪೂಜನ ಧಾರ್ಮಿಕ ವಿಧಾನ ಗಳೊಂದಿಗೆ ನಡೆಯಿತು.