Advertisement

Shree Kshetra Ucchila ; ಅ.15 ರಿಂದ 24 ರವರೆಗೆ `ಉಚ್ಚಿಲ ದಸರಾ-2023′ ವೈಭವ

11:35 PM Oct 09, 2023 | Team Udayavani |

ಕಾಪು : ಕರ್ನಾಟಕದ ಕೊಲ್ಹಾಪುರ ಎಂದು ಪ್ರಸಿದ್ಧಿ ಪಡೆದಿರುವ ಶ್ರೀ ಕ್ಷೇತ್ರ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಭಕ್ತರ ಸಹಕಾರ – ಸಹಯೋಗದೊಂದಿಗೆ ಅ. ಅ.15 ರಿಂದ ಅ.24 ರವರೆಗೆ ನವರಾತ್ರಿ ಉತ್ಸವದೊಂದಿಗೆ ಈ ಬಾರಿಯೂ `ಉಚ್ಚಿಲ ದಸರಾ ಉತ್ಸವ-2023′ ಅನ್ನು ಆಚರಿಸಲು ದ.ಕ. ಮೊಗವೀರ ಮಹಾಜನ ಸಂಘ, ಕ್ಷೇತ್ರದ ಆಡಳಿತ ಸಮಿತಿ ಮತ್ತು ಕ್ಷೇತ್ರದ ಭಕ್ತಾಭಿಮಾನಿ ಬಳಗ ನಿರ್ಧರಿಸಿದೆ ಎಂದು ದ.ಕ. ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ ಡಾ| ಜಿ. ಶಂಕರ್ ತಿಳಿಸಿದರು.

Advertisement

ಉಚ್ಚಿಲದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ನವರಾತ್ರಿ ಮತ್ತು ದಸರಾ ಪ್ರಯುಕ್ತ ಪ್ರತೀದಿನ ಬೆಳಿಗ್ಗೆ ಚಂಡಿಕಾ ಹೋಮ, ಮಧ್ಯಾಹ್ನ ಅನ್ನಸಂತರ್ಪಣೆ, ಭಜನಾ ಕಾರ್ಯಕ್ರಮ, ಸಂಜೆ ಸಹಸ್ರ ಸುಮಂಗಲೆಯರಿಂದ ಸಾಮೂಹಿಕ ಕುಂಕುಮಾರ್ಚನೆ, ಧಾರ್ಮಿಕ ಸಭಾ ಕಾರ್ಯಕ್ರಮ, ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮ, ನವದುರ್ಗೆಯರು ಮತ್ತು ಶಾರದಾ ಮಾತೆಗೆ ತ್ರಿಕಾಲ ಪೂಜೆ, ವಿಜಯ ದಶಮಿಯಂದು ಬೃಹತ್ ಶೋಭಾಯಾತ್ರೆಯ ಮೂಲಕ ವೈಭವದ ಜಲಸ್ಥಂಭನಾ ಕಾರ್ಯಕ್ರಮ ನಡೆಯಲಿದೆ ಎಂದರು.

ಅ. 15ರಂದು ಪ್ರತಿಷ್ಠೆ, ಉದ್ಘಾಟನೆ : ಅ. 15ರಂದು ಬೆಳಗ್ಗೆ9.30 ಕ್ಕೆ ಉಚ್ಚಿಲ ಶಾಲಿನಿ ಡಾ| ಜಿ. ಶಂಕರ್ ತೆರೆದ ಸಭಾಂಗಣದಲ್ಲಿ ನವದುರ್ಗೆಯರು ಮತ್ತು ಶಾರದಾ ಮಾತೆಯ ವಿಗ್ರಹ ಪ್ರತಿಷ್ಠಾಪನೆ ನೆರವೇರಲಿದ್ದು 10 ಗಂಟೆಗೆ ಉಡುಪಿ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಅವರು ಉಚ್ಚಿಲ ದಸರಾ 2023ಕ್ಕೆ ಚಾಲನೆ ನೀಡಲಿದ್ದಾರೆ. 10.15ಕ್ಕೆ ನೂತನ ಅನ್ನ ಛತ್ರ ಕಟ್ಟಡ ಮತ್ತು ಸುಸಜ್ಜಿತ ಅತಿಥಿಗೃಹ ಉದ್ಘಾಟನೆ, 10.30 ಕ್ಕೆ ಫಲಪುಷ್ಪ ಪ್ರದರ್ಶನ, ಪುಸ್ತಕ ಮೇಳ ಹಾಗೂ ಕೇಂದ್ರ ಮತ್ತು ರಾಜ್ಯ ಸರಕಾರಗಳಲ್ಲಿನ ಮೀನುಗಾರಿಕೆ ಯೋಜನೆಗಳ ಮಾಹಿತಿ ಮತ್ತು ಮೀನುಗಾರಿಕಾ ಪರಿಕರಗಳ ಪ್ರದರ್ಶನ ಉದ್ಘಾಟನೆ, ಸಂಜೆ 6.15 ಕ್ಕೆ ಯುವ ದಸರಾ ಹಾಗೂ ಹತ್ತು ದಿನಗಳ ಕಾಲ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ನೆರವೇರಲಿದೆ ಎಂದರು.

ಸಾಂಸ್ಕೃತಿಕ – ಕಲಾ ವೈಭವ : ಅ. 15ರಂದು ಯುವ ದಸರಾ – ನೃತ್ಯ ಸ್ಪರ್ಧೆ, ಅ. 19ರಂದು ಸಂಜೆ 4.30 ರಿಂದ ವಿ| ಪವನ ವಿ. ಆಚಾರ್ ಬಳಗದವರಿಂದ ಶತವೀಣಾವಲ್ಲರಿ ಏಕಕಾಲದಲ್ಲಿ 151 ವೀಣೆಗಳ ವಾದನ ಕಾರ್ಯಕ್ರಮ, ಅ. 20 ರಂದು ಮುದ್ದು ಮಕ್ಕಳಿಂದ ಶ್ರೀ ಶಾರದಾ ಮಾತೆಯ ಛದ್ಮವೇಷ ಸ್ಪರ್ಧೆ, ಅ. 21 ರಂದು ರಂಗೋಲಿ ಸ್ಪರ್ಧೆ, ಮಹಿಳೆಯರ ಹುಲಿವೇಷ ಸ್ಪರ್ಧೆ, ಅ. 22 ರಂದು ಚಿತ್ರಕಲಾ ಸ್ಪರ್ಧೆ ಹಾಗೂ ಪ್ರತೀ ದಿನ ವಿವಿಧ ಸಾಂಸ್ಕೃತಿಕ ಮನೋರಂಜನಾ ಕಾರ್ಯಕ್ರಮಗಳು ನಡೆಯಲಿವೆ.

ಅ. 24ರಂದು ವೈಭವದ ಶೋಭಾಯಾತ್ರೆ
ಅ. 24ರಂದು ಶ್ರೀ ಕ್ಷೇತ್ರ ಉಚ್ಚಿಲದಿಂದ ಹೊರಡುವ ನವದುರ್ಗೆಯರು ಮತ್ತು ಶಾರದಾ ಮಾತೆಯ ವಿಗ್ರಹಗಳನ್ನೊಳಗೊಂಡ ವೈಭವದ ಶೋಭಾಯಾತ್ರೆಯ ರಾ.ಹೆ. 66 ರ ಉಚ್ಚಿಲ-ಎರ್ಮಾಳು-ಮೂಳೂರು-ಕೊಪ್ಪಲಂಗಡಿಯವರೆಗಿನ ಸುಮಾರು 10 ಕಿ.ಮೀ. ದೂರದವರೆಗೆ ಕಾಲ್ನಡಿಗೆಯ ಮೂಲಕ ಸಾಗಿ ಕಾಪು ದೀಪಸ್ಥಂಭದ ಬಳಿಯ ಸಮುದ್ರದಲ್ಲಿ ವಿಸರ್ಜನೆಗೊಳ್ಳಲಿದೆ. ಭಜನಾ ತಂಡಗಳು, ವಿವಿಧ ವೇಷ ಭೂಷಣಗಳು, ಹುಲಿವೇಷಗಳನ್ನೊಳಗೊಂಡ 50ಕ್ಕೂ ಅಧಿಕ ಟ್ಯಾಬ್ಲೋಗಳು ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳಲಿವೆ.

Advertisement

ಬೃಹತ್ ಗಂಗಾರತಿ, ಮಹಾಮಂಗಳಾರತಿ
ವಿಸರ್ಜನಾ ಸಮಯದಲ್ಲಿ ಆಕರ್ಷಕ ಸುಡುಮದ್ದು ಪ್ರದರ್ಶನ, ಸಮುದ್ರ ಮದ್ಯದಲ್ಲಿ ಬೋಟ್‌ಗಳಲ್ಲಿ ವಿಶೇಷವಾದ ವಿದ್ಯುತ್ ದೀಪಾಲಂಕಾರ, ಕಾಶಿಯ ಗಂಗಾನದಿಯ ತಟದಲ್ಲಿ ಗಂಗಾ ಮಾತೆಗೆ ಬೃಹತ್ ಗಂಗಾರತಿ ಬೆಳಗುವ ಅರ್ಚಕರ ಮೂಲಕ ಬೃಹತ್ ಗಂಗಾರತಿ, ಹತ್ತು ಸಾವಿರಕ್ಕೂ ಅಧಿಕ ಮಹಿಳೆಯರಿಂದ ಸಾಮೂಹಿಕ ಮಹಾಮಂಗಳಾರತಿ ನಡೆಯಲಿದೆ.

ಅಂಬಾರಿ ಹೊತ್ತ ಆನೆ ಪ್ರತಿಕೃತಿ
ಈ ಬಾರಿಯ ದಸರಾ ಉತ್ಸವಕ್ಕೆ ಅಂಬಾರಿ ಹೊತ್ತ ಆನೆಯ ಪ್ರತಿಕೃತಿ ವಿಶೇಷ ಮೆರಗು ನೀಡಲಿದ್ದು ಶೋಭಾಯಾತ್ರೆಯಲ್ಲೂ ಆನೆ ಸಂಚರಿಸಲಿದೆ. ಟ್ಯಾಬ್ಲೋದಲ್ಲಿ ಮೀನುಗಾರರ ಬದುಕು, ಮಣಿಪಾಲ ಆರೋಗ್ಯ ಕಾರ್ಡ್, ಸ್ವಚ್ಛತೆ ಜಾಗೃತಿ ಸಹಿತ ಸಾಮಾಜಿಕ ಪರಿಕಲ್ಪನೆಯ ವಿವಿಧ ಟ್ಯಾಬ್ಲೋಗಳು ಸಂಚರಿಸಲಿವೆ.

ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಮಾತನಾಡಿ, ಡಾ| ಜಿ. ಶಂಕರ್ ಅವರ ಮಾರ್ಗದರ್ಶನದೊಂದಿಗೆ ಶ್ರೀ ಕ್ಷೇತ್ರ ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದ ಸಮಗ್ರ ಜೀರ್ಣೋದ್ದಾರ, ಬ್ರಹ್ಮಕಲಶೋತ್ಸವ ಮತ್ತು ಪ್ರಥಮ ವರ್ಷದ ದಸರಾ ಉತ್ಸವವು ಅತ್ಯಂತ ವೈಭವದಿಂದ ಸಂಪನ್ನಗೊಂಡಿದೆ. ಎರಡನೇ ವರ್ಷದ ದಸರಾ ಉತ್ಸವವನ್ನು ಅಚ್ಚುಕಟ್ಟಾಗಿ, ವೈಭವದೊಂದಿಗೆ ನಡೆಸುವ ಸಿದ್ಧತೆಗಳನ್ನು ನಡೆಸಲಾಗುತ್ತಿದ್ದು ಶೋಭಾಯಾತ್ರೆ ಸಾಗುವ ದಾರಿಯುದ್ದಕ್ಕೂ ಸಾರ್ವಜನಿಕರು ತಮ್ಮ ಅಂಗಡಿ, ಮನೆ, ಮಳಿಗೆಗಳನ್ನು ತಳಿರು ತೋರಣಗಳಿಂದ ಶೃಂಗರಿಸಿ ದಸರಾ ಉತ್ಸವವನ್ನು ಯಶಸ್ವೀಗೊಳಿಸುವಂತೆ ಮನವಿ ಮಾಡಿದರು.

ಕ್ಷೇತ್ರಾಡಳಿತ ಮಂಡಳಿ ಅಧ್ಯಕ್ಷ ವಾಸುದೇವ ಸಾಲ್ಯಾನ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗುಂಡು ಬಿ. ಅಮೀನ್, ದ.ಕ. ಮೊಗವೀರ ಮಹಾಜನ ಸಂಘದ ಉಪಾಧ್ಯಕ್ಷ ಸುಭಾಶ್ಚಂದ್ರ ಕಾಂಚನ್, ಪ್ರಧಾನ ಕಾರ್ಯದರ್ಶಿ ಸುಧಾಕರ ಕುಂದರ್, ಮಹಿಳಾ ಸಂಘದ ಅಧ್ಯಕ್ಷೆ ಉಷಾ ರಾಣಿ, ನಾಲ್ಕು ಪಟ್ಣ ಮೊಗವೀರ ಮಹಾಸಭಾದ ಅಧ್ಯಕ್ಷ ಮನೋಜ್ ಕಾಂಚನ್, ಮಹಿಳಾ ಸಭಾದ ಅಧ್ಯಕ್ಷೆ ಸುಗುಣಾ ಕರ್ಕೇರ, ಪ್ರಮುಖರಾದ ಮೋಹನ್ ಬೇಂಗ್ರೆ, ಶಂಕರ್ ಸಾಲ್ಯಾನ್, ಅನಿಲ್ ಕುಮಾರ್, ಸಂಜೀವ ಮೆಂಡನ್, ಮೋಹನ್ ಬಂಗೇರ, ದಿನೇಶ್ ಮೂಳೂರು, ರವೀಂದ್ರ ಶ್ರೀಯಾನ್, ಸತೀಶ್ ಅಮೀನ್ ಬಾರ್ಕೂರು, ಸತೀಶ್ ಅಮೀನ್ ಪಡುಕೆರೆ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next