ಕಾವೂರು: ಗಳಿಸಿದ ಹಣವನ್ನು ವಿವಿಧ ಧಾರ್ಮಿಕ, ಸಾಮಾಜಿಕ ಕಾರ್ಯಗಳಿಗೆ ಸದ್ವಿನಿಯೋಗ ಮಾಡುವ ಮೂಲಕ ಪುಣ್ಯ ಸಂಪಾದನೆ ಮಾಡಬಹುದು. ಇಂತಹ ಕಾರ್ಯಕ್ಕೆ ಎಲ್ಲೆಡೆ ಗೌರವ ಲಭ್ಯವಾಗುತ್ತದೆ ಎಂದು ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಹೇಳಿದರು.
ಕೂಳೂರು ಸಮೀಪದ ಪಂಜಿ ಮೊಗರು ರಾಘವೇಂದ್ರ ನಗರದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಗುರುರಾಘವೇಂದ್ರ ಮಠದಲ್ಲಿ ಶ್ರೀಕೃಷ್ಣ, ಮುಖ್ಯಪ್ರಾಣ ದೇವರು ಹಾಗೂ ರಾಯರ ವೃಂದಾವನ ಪುನಃ ಪ್ರತಿಷ್ಠಾಪನೆ ಕಾರ್ಯಕ್ರಮ ಪ್ರಯುಕ್ತ ಬುಧವಾರ ಸುಧರ್ಮ ಸಭೆಯಲ್ಲಿ ಆಶೀರ್ವಚನವಿತ್ತರು. ಸತ್ಯ ಧರ್ಮದಲ್ಲಿ ಜೀವನ ನಡೆಸುವವರಿಗೆ ರಾಯರ ಆಶೀರ್ವಾದ ಸದಾ ಇರುತ್ತದೆ. ಈ ಮಠವನ್ನು ಪುನರುಜ್ಜೀವನ ಗೊಳಿಸಿದ ರವಿಚಂದ್ರನ್ ದಂಪತಿ ಗುರು ಕೃಪೆಗೆ ಪಾತ್ರರಾಗಿದ್ದಾರೆ ಎಂದರು.
ಶ್ರೀ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರತೀರ್ಥ ಸ್ವಾಮೀಜಿ, ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ, ಸುಬ್ರಹ್ಮಣ್ಯ ಮಠದ ಶ್ರೀೕ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಆಶೀರ್ವಚನವಿತ್ತರು.
ಕಟೀಲು ಕ್ಷೇತ್ರದ ಆನುವಂಶಿಕ ಅರ್ಚಕರಾದ ವಾಸುದೇವ ಆಸ್ರಣ್ಣ, ಲಕ್ಷ್ಮೀನಾರಾಯಣ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ, ನಿಟ್ಟೆ ಯುನಿ ವರ್ಸಿಟಿ ಚಾನ್ಸಲರ್ ಎನ್. ವಿನಯ ಹೆಗ್ಡೆ, ಕರ್ಣಾಟಕ ಬ್ಯಾಂಕ್ ಮುಖ್ಯಸ್ಥ ಜಯರಾಮ ಭಟ್, ಅದಾನಿ ಯುಪಿಸಿಎಲ್ ಕಾರ್ಯಕಾರಿ ನಿರ್ದೇಶಕ ಕಿಶೋರ್ ಆಳ್ವ, ಎಂಆರ್‌ಪಿಎಲ್ ನಿವೃತ್ತ ವ್ಯವಸ್ಥಾಪಕ ನಿರ್ದೇಶಕಎಚ್. ಕುಮಾರ್, ಮಾಜಿ ಕಾರ್ಪೊ ರೇಟರ್ ಮಧುಕಿರಣ್, ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್, ವಜ್ರಕುಮಾರ್ ಕರ್ಣಂತಾಯ ಬಲ್ಲಾಳ್, ಕಾರ್ಪೊ ರೇಶನ್ ಬ್ಯಾಂಕ್‌ನ ಭಾರತಿ, ಮಾಜಿ ಸಚಿವ ಬಿ. ರಮಾನಾಥ ರೈ ಮುಖ್ಯ ಅತಿಥಿಗಳಾಗಿದ್ದರು.
ಮಠದ ಅರ್ಚಕ ಸುದರ್ಶನ ಬನ್ನಿಂತಾಯ, ಸಂಘಟನ ಕಾರ್ಯದರ್ಶಿ ಸುಧಾಕರ ರಾವ್ ಪೇಜಾವರ, ಕಾರ್ಯದರ್ಶಿ ಶ್ಯಾಮಪ್ರಸಾದ್ ಹೆಬ್ಟಾರ್, ಜಿ.ಕೆ. ಶೆಟ್ಟಿ, ಜತೆ ಕಾರ್ಯದರ್ಶಿ ಗಣೇಶ್ ಭಟ್ ಶರವು ಉಪಸ್ಥಿತರಿದ್ದರು.
ಬ್ರಹ್ಮಕಲಶ ಸಮಿತಿ ಅಧ್ಯಕ್ಷ ಡಾ| ವಿ. ರವಿಚಂದ್ರನ್ ಪ್ರಸ್ತಾವನೆಗೈದರು. ಅಧ್ಯಕ್ಷ ಪ್ರೊ| ಎಂ.ಬಿ. ಪುರಾಣಿಕ್ ಸ್ವಾಗತಿಸಿದರು. ಮನೋಹರ ಪ್ರಸಾದ್ ನಿರೂಪಿಸಿದರು. ಸಂಗೀತ ರಸಮಂಜರಿ ನಡೆಯಿತು.