Advertisement

ನಾಳೆಯಿಂದ ಶರಣ ಸಂಸ್ಥಾನದಲ್ಲಿ ಶ್ರಾವಣ ಉಪನ್ಯಾಸ ಮಾಲಿಕೆ

09:55 AM Aug 10, 2018 | Team Udayavani |

ಕಲಬುರಗಿ: ನಗರದ ಮಹಾದಾಸೋಹಿ ಶ್ರೀ ಶರಣಬಸವೇಶ್ವರ ಸಂಸ್ಥಾನದಲ್ಲಿ ಅಖೀಲ ಭಾರತ ಶಿವಾನುಭವ ಮಂಟಪ ಹಾಗೂ ಶರಣಬಸವ ವಿಶ್ವವಿದ್ಯಾಲಯ ಸಂಯುಕ್ತ ಆಶ್ರದಲ್ಲಿ ಶ್ರಾವಣದ ಮಾಸದ ವಿಶ್ವ ಅನುಭಾವಿಗಳ ವಿಚಾರ ಕುರಿತ ಉಪನ್ಯಾಸ ಮಾಲಿಕೆ ಆ. 11ರಿಂದ ಸೆಪ್ಟೆಂಬರ್‌ 18ರವರೆಗೆ 40 ದಿನಗಳ ಕಾಲ ನಡೆಯಲಿದೆ.

Advertisement

ಅನ್ನದಾಸೋಹ, ಶಿಕ್ಷಣ ದಾಸೋಹಕ್ಕೆ ಖ್ಯಾತಿಯಾಗಿರುವ ಮಹಾದಾಸೋಹಿ ಶರಣಬಸವೇಶ್ವರ ಸಂಸ್ಥಾನದಲ್ಲಿ ಅಖೀಲ ಭಾರತ ಅನುಭವ ಮಂಟಪದಡಿ ಕಳೆದ ಆರವತ್ತು ಮೂರು ವರ್ಷಗಳಿಂದ ಶ್ರಾವಣ ಮಾಸದ ಶಿವಾನುಭವ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದ್ದು, ಆದರ್ಶ ಸಾಧಕರ ಜೀವನ ದರ್ಶನ ಉಪನ್ಯಾಸ ಮಾಲಿಕೆ ಇದಾಗಿರುತ್ತದೆ ಎಂದು ಶರಣಬಸವೇಶ್ವರ ಮಹಾದಾಸೋಹ ಸಂಸ್ಥಾನದ ಪೀಠಾಧಿಪತಿ ಹಾಗೂ ಶರಣಬಸವ ವಿವಿ ಕುಲಾಧಿಪತಿಗಳಾದ ಡಾ| ಶರಣಬಸವಪ್ಪ ಅಪ್ಪ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 

ಉಪನ್ಯಾಸ ಮಾಲಿಕೆಯಲ್ಲಿ ಮಹಾಪುರುಷರ, ಸತುರುಷರ ಧಾರ್ಮಿಕ, ವೈಚಾರಿಕ ಮತ್ತು ವಿಜ್ಞಾನಿಗಳ ಕುರಿತು ತಜ್ಞರು ಉಪನ್ಯಾಸ ಮಂಡಿಸಲಿದ್ದಾರೆ. ಭಾರತ ದೇಶ ಅಧ್ಯಾತ್ಮದ ತವರಾಗಿದೆ ಅಲ್ಲದೇ ಕೇಂದ್ರಬಿಂದುವಾಗಿದೆ. ಕಲಬುರಗಿ ನಾಡು ಮಹಾದಾಸೋಹಿ ಶರಣಬಸವೇಶ್ವರರು, ಬಸವಾದಿ ಶರಣರು ಮತ್ತು ಸಂತರು ಬದುಕಿದ ಪುಣ್ಯಭೂಮಿಯಾಗಿದೆ. ಪವಿತ್ರ ಶ್ರಾವಣ ಮಾಸದಲ್ಲಿ ದೇವರನ್ನು ಅನುಭವಿಸುವವರೇ ಅನುಭಾವಿಗಳಾಗುತ್ತಾರೆ. ವಿದ್ವಾಂಸರು ಪ್ರತಿಯೊಬ್ಬ ಮಹಾನ್‌ ಸಾಧಕರ ಬಗ್ಗೆ ಸವಿಸ್ತಾರವಾಗಿ ಉಪನ್ಯಾಸ ನೀಡಲಿದ್ದಾರೆ ಎಂದು ವಿವರಿಸಿದರು.

40 ದಿನಗಳ ಉಪನ್ಯಾಸ ನಂತರ ಮಾಲಿಕೆಯ ಒಟ್ಟಾರೆ ಉಪನ್ಯಾಸವನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲು ಉದ್ದೇಶಿಸಲಾಗಿದೆ. ಸಮಗ್ರವಾಗಿ ಹೊರಬರಲಿರುವ ಈ ಪುಸ್ತಕವು ಮುಂದೆ ದೊಡ್ಡ ಆಕರ ಗ್ರಂಥ ಆಗಲಿದೆ. ಸಂಸ್ಥೆಯ ಅಂತರವಾಣಿಯಲ್ಲೂ ಪ್ರಸಾರವಾಗಲಿದೆ ಎಂದು ತಿಳಿಸಿದರು.
 
ಶ್ರಾವಣ ಮಾಸದ ಶಿವಾನುಭವ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸ್ವಾತಂತ್ರ್ಯಾ ಸಂಗ್ರಾಮಕ್ಕೆ ನಾಂದಿ ಹಾಡಿದ ಮಹಾದಾಸೋಹಿ ಲಿಂಗೈಕ್ಯ ಪೂಜ್ಯ ದೊಡ್ಡಪ್ಪ ಅಪ್ಪ ಅವರ 35ನೇ ಪುಣ್ಯ ಸ್ಮರಣೋತ್ಸವ ಅಂಗವಾಗಿ 8 ದಿನಗಳ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ. ಅದಲ್ಲದೇ ತಾವು ಮಹಾದಾಸೋಹ ಪೀಠಾರೋಹಣಗೈದು 35 ವರ್ಷಗಳ ಸವಿನೆನಪಿಗೆ 40 ದಿನಗಳ ಸಾಂಸ್ಕೃತಿಕ ಶಿವಾನುಭವ ಉಪನ್ಯಾಸ ಮಾಲಿಕೆ ನಡೆಯಲಿದೆ ಎಂದು ಡಾ| ಅಪ್ಪ
ತಿಳಿಸಿದರು.

ನೀಲೂರು ನಿಂಬೆಕ್ಕ, ಅಕ್ಕಮಹಾದೇವಿ, ಮಹಾಕವಿ ರಾಘವಾಂಕ, ಚಾಮರಸ, ಸರ್ವಜ್ಞ, ಭೀಮಕವಿ, ಶರಣಬಸವೇಶ್ವರರು, ಶರಣಬಸವ ವಿಶ್ವವಿದ್ಯಾಲಯದ ಉದ್ದೇಶಿತ ಅಧ್ಯಯನ ಪೀಠಗಳು ಸೇರಿದಂತೆ ಇತರ ವಿಷಯಗಳು ಕುರಿತು ಉಪನ್ಯಾಸ ನಡೆಯಲಿದ್ದು, ಡಾ| ಶಿವರಾಜ ಶಾಸ್ತ್ರೀ, ಡಾ| ಡಿ.ಟಿ. ಅಂಗಡಿ, ಡಾ| ಕ್ಷೇಮಲಿಂಗ ಬಿರಾದಾರ, ಡಾ| ಸಾರಿಕಾದೇವಿ ಕಾಳಗಿ, ಡಾ| ಅನಂದ ಸಿದ್ದಾಮಣಿ, ನಂದಿನಿ ನಿಷ್ಠಿ, ಡಾ| ವೆಂಕಣ್ಣ ಡೊಳ್ಳೆಗೌಡರು, ಡಾ| ಮಹಾದೇವ ಬಡಿಗೇರ, ಡಾ| ಲಿಂಗರಾಜ ಶಾಸ್ತ್ರೀ ಸೇರಿದಂತೆ ಇತರರು ಉಪನ್ಯಾಸ ಮಂಡಿಸಲಿದ್ದಾರೆ ಎಂದು ತಿಳಿಸಿದರು.

Advertisement

ಉದ್ಘಾಟನೆ: ಶ್ರಾವಣ ಮಾಸದ ಉಪನ್ಯಾಸ ಮಾಲಿಕೆ ಕಾರ್ಯಕ್ರಮಗಳ ಉದ್ಘಾಟನೆಯನ್ನು ಆ. 11ರಂದು ಸಂಜೆ 7:00ಕ್ಕೆ ಡಾ| ಅಪ್ಪ ಅವರ ಸಾನ್ನಿಧ್ಯದಲ್ಲಿ ಶ್ರೀಶೈಲ ಸಾರಂಗಮಠ ಹಾಗೂ ಸುಲಫಲ ಮಠದ ಡಾ| ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು ನೆರವೇರಿಸುವರು. ರಾಜಶೇಖರ ಶಿವಾಚಾರ್ಯರು ಮುಖ್ಯ ಅತಿಥಿಗಳಾಗಿ
ಆಗಮಿಸಲಿದ್ದಾರೆ. ರೇವಯ್ಯ ವಸ್ತ್ರದಮಠ, ಡಾ| ಸೀಮಾ ಪಾಟೀಲ, ಡಾ| ಕಲಾವತಿದೊರೆ, ಪ್ರೊ| ಎಂ. ಎಸ್‌. ಪಾಟೀಲ, ಪ್ರೊ| ಛಾಯಾ ಭರತನೂರ್‌ ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಪ್ರತಿದಿನ ಸಂಜೆ 7:30ರಿಂದ 8:30ರ ವರೆಗೆ ವಿದ್ವಾಂಸರಿಂದ ಉಪನ್ಯಾಸ ನಡೆಯಲಿದೆ. ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಶಿವಾನುಭವ ಮಾಲಿಕೆಯ ಸಂಚಾಲಕ, ಪ್ರಾಧ್ಯಾಪಕ ಶಿವರಾಜ ಶಾಸ್ತ್ರಿ ಹೇರೂರ, ಕೃಪಾಗೊಬ್ಬೂರ ಸುದ್ದಿಗೋಷ್ಠಿಯಲ್ಲಿದ್ದರು. 

ಉಪನ್ಯಾಸ ಮಾಲಿಕೆ ಪುಸ್ತಕ ಪ್ರಕಟ ಶ್ರಾವಣ ಮಾಸದ ಅಂಗವಾಗಿ ಶರಣಬಸವೇಶ್ವರ ಮಹಾದಾಸೋಹಿ ಸಂಸ್ಥಾನದಲ್ಲಿ ನಡೆಯುವ 40 ದಿನಗಳ ಉಪನ್ಯಾಸವನ್ನು ಸಮಗ್ರ ವಿಷಯ ಒಳಗೊಂಡ ಪುಸ್ತಕ ರೂಪದಲ್ಲಿ ಪ್ರಕಟಿಸಲು ಉದ್ದೇಶಿಸಲಾಗಿದೆ. ಸಮಗ್ರವಾಗಿ ಹೊರಬರಲಿರುವ ಈ ಪುಸ್ತಕ ಮುಂದೆ ದೊಡ್ಡ ಆಕರ ಗ್ರಂಥ ಆಗಲಿದೆ. ಶರಣಬಸವ ವಿವಿಯಲ್ಲಿ ಈಗಾಗಲೇ ಎರಡು ಅಧ್ಯಯನ ಪೀಠಗಳನ್ನು ಕಾರ್ಯಾರಂಭಗೊಳಿಸಲಾಗಿದೆ. ಪೀಠಗಳಿಗೆ ಯಾರೂ ದಾನ ನೀಡಲು ಬರುತ್ತಾರೆಯೋ ಅವರ ಹೆಸರಿನಲ್ಲಿ ಮಾಡಲಾಗುವುದು. 
 ಡಾ| ಶರಣಬಸವಪ್ಪ ಅಪ್ಪ ಅಧ್ಯಕ್ಷರು, ಶರಣಬಸವೇಶ್ವರ ಮಹಾದಾಸೋಹಿ ಸಂಸ್ಥಾನದ ಪೀಠಾಧಿಪತಿ, ಕಲಬುರಗಿ

Advertisement

Udayavani is now on Telegram. Click here to join our channel and stay updated with the latest news.

Next