Advertisement

ಶ್ರಾವಣ ಮಾಸಕೆ ಚೂಡಿಯ ತೋರಣ

07:00 AM Jul 28, 2017 | |

ಕಾರ್ಕಳ: ಮತ್ತೆ ಬಂದಿದೆ ಶ್ರಾವಣ, ಎಲ್ಲೆಲ್ಲೂ ಹರುಷದ ತೋರುಣ ಎನ್ನುವ ಹೊಸ ಸಾಲೊಂದು ಹೊಳೆದರೆ ಅದು ಈ ಶ್ರಾವಣ ಮಾಸದಲ್ಲಿಯೇ. ಆಷಾಢ ಕಳೆದು ಶ್ರಾವಣ ಮಾಸ ಅಡಿ ಇಟ್ಟಾಗ ಸುತ್ತಲಿನ ಪರಿಸರ ತುಂಬಿಕೊಂಡತೆಯೇ, ಹಬ್ಬ, ಪೂಜೆ, ಹಾಗೂ ಶುಭಕಾರ್ಯಗಳಿಗೆ ಊರು ಅಣಿಯಾಗಿ ಮೈ ಮನಸ್ಸೂ ತುಂಬಿಕೊಳ್ಳುತ್ತದೆ. ಗೌಡ ಸಾರಸ್ವತ ಸಮುದಾಯದ ಮಹಿಳೆಯರಿಗಂತೂ ಶ್ರಾವಣ ಶುರುವಾದರೆ ಚೂಡಿ ಪೂಜೆಯ ಸಂಭ್ರಮ. ಮನೆಯ ತುಂಬೆಲ್ಲಾ ಚೂಡಿ ಹೂವುಗಳ ಘಮಘಮ.ನಡೆದು ಬಂದ ಸಂಪ್ರದಾಯಶ್ರಾವಣ ಮಾಸ ಬಂದಾಗ ಜಿ.ಎಸ್‌.ಬಿ. ಸಮಾಜದ ಮುತ್ತೈದೆಯರು ತಮ್ಮ ಮನೆಗಳಲ್ಲಿ ಚೂಡಿ ಪೂಜೆ ಆಚರಿಸುವುದು ಸಾರಸ್ವತ ಸಮಾಜದಲ್ಲಿ ನಡೆದು ಬಂದ ಸಂಪ್ರದಾಯ.ಇದೊಂದು ಶ್ರಾವಣದ ಸಡಗರ,ಜೊತೆಗೆ ನಮ್ಮನ್ನು ಪ್ರತೀ ನಿತ್ಯವೂ ಪೊರೆಯುತ್ತಿರುವ ಸಸ್ಯಶಾಲಿನಿಯನ್ನೂ ಮನಸಾರೆ ಪೂಜಿಸುವ ಹಬ್ಬ.

Advertisement

ಮುತ್ತೈದೆಯರ ನೆಚ್ಚಿನ ಚೂಡಿ
ಇಡೀ ಶ್ರಾವಣ ಮಾಸದಲ್ಲಿ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಮುತ್ತೆ$çದೆಯರು ಚೂಡಿಪೂಜೆಯನ್ನು ಶುಕ್ರವಾರ ಹಾಗೂ ರವಿವಾರ ಸಂಭ್ರಮದಿಂದ ಆಚರಿಸುತ್ತಾರೆ. ಮನೆಯಲ್ಲಿರುವ ಮುತ್ತೈದೆಯರೆಲ್ಲಾ ಸೇರಿಕೊಂಡು ಮನೆಯ ಸುತ್ತಮುತ್ತಲೂ ಸಿಗುವ ರತ್ನಗಂಧಿ, ರಥದ ಹೂವು, ಕದಿಕೆ, ಕರವೀರ, ಮೊದಲಾದ ಬಣ್ಣ ಬಣ್ಣದ ಹೂವು ಹಾಗೂ ಗರಿಕೆಗಳನ್ನು  ಒಟ್ಟು ಮಾಡಿ ಬಾಳೆ ನಾರಿನಿಂದ ಕಟ್ಟುವುದಕ್ಕೆ ಚೂಡಿ ಕಟ್ಟುವುದು ಎನ್ನುತ್ತಾರೆ. ಈ ಕ್ರಮ ತಲೆತಲಾಂತರದಿಂದ ಬಂದಿದೆ.

ಗೌಜಿ ಗಮ್ಮತ್ತು
ಪ್ರತೀ ಮುತ್ತೈದೆಯರೂ ಸುಮಾರು 5-12 ಚೂಡಿಗಳನ್ನು ಕಟ್ಟಿ ಅದಕ್ಕೆ ಸರಿಸಮನಾಗಿ ವೀಣ್ಯವನ್ನೂ ಜತೆಗೂಡಿಸಿ ಮನೆ ಮುಂದಿನ ತುಳಸಿಯ ಮೇಲಿಟ್ಟು ತುಳಸಿಗೆ ಅರಸಿನ ಹಾಗೂ ಕುಂಕುಮ ಹಚ್ಚಿ, ಚೂಡಿಗಳಿಂದ ಸಿಂಗಾರಗೊಳಿಸಿ, ಆರತಿ ಬೆಳಗಿ, ಅಕ್ಷತೆ ಕಾಳು ಹಾಕುತ್ತಲೇ ತುಳಸಿಗೆ ಪ್ರದಕ್ಷಿಣೆ ಬಿದ್ದು, ಆ ಬಳಿಕ ಸೂರ್ಯನಮಸ್ಕಾರ ಮಾಡಿ, ಪೂಜಿಸಿದ ಚೂಡಿಯನ್ನು ಬಾವಿಯ ದಂಡೆಗೆ ಹಾಗೂ ಮನೆಯ ಹೊಸ್ತಿಲಿಗೆ ಅರಸಿನ ಕುಂಕುಮ ಹಚ್ಚಿ ಇಡುತ್ತಾರೆ. ಮದುವೆಯಾದ ಹೊಸತರಲ್ಲಿ  ಮನೆಯ ಸೊಸೆಗೆ ಮೊದಲ ಚೂಡಿ ಪೂಜೆಯ ಸಂಭ್ರಮವಾದ್ದರಿಂದ ಸಂಬಂಧಿಕರನ್ನೆಲ್ಲ ಮನೆಗೆ ಆಹ್ವಾನಿಸಿ ಗೌಜಿ ಗಮ್ಮತ್ತಿನಿಂದ ಚೂಡಿ ಪೂಜೆ ಆಚರಿಸಲಾಗುತ್ತದೆ.

ಪೂಜೆಯಲ್ಲಿ ಕಾಡುವ ಕಾಡ ಹೂವು
ಚೂಡಿ ಪೂಜೆಯಿಂದ ಹಲವಾರು ಕಾಡು ಹೂವುಗಳು ಮುನ್ನೆಲೆಗೆ ಬಂದಿದೆ.ಕಾಗೆಯ ಕಣ್ಣು ಎಂದು ಕರೆಯಲ್ಪಡುವ ನೀಲಿ ಬಣ್ಣದ ಹೂವು, ರಥದ ಹೂವು ಹಾಗೂ ಬಗೆ ಬಗೆಯ ಗರಿಕೆಗಳು ಈ ಚೂಡಿ ಕಟ್ಟಲು ಬಳಸಲಾಗುತ್ತದೆ. 

ಶ್ರಾವಣದಲ್ಲಿ ಪ್ರಕೃತಿ ತುಂಬಿಕೊಳ್ಳುವುದರಿಂದ ಇಂತಹ ಕಾಡು ಹೂವುಗಳಿಗೇನೂ ಈ ಕಾಲದಲ್ಲಿ ಬರವಿಲ್ಲ.ಸುತ್ತಮುತ್ತಲಲ್ಲೇ ಸಿಗುವ ಸರಳ ಹೂವುಗಳಿಂದ ಸರಳವಾಗಿ ಚೂಡಿ ಪೂಜೆ ಆಚರಿಸುವುದು ಇಲ್ಲಿನ ಉದ್ದೇಶ.

Advertisement

ಶ್ರಾವಣ ಮಾಸ ಸಂಬಂಧದ ಹರುಷ
ಇದು ಬರೀ ಒಂದು ಮನೆಯ ಹೆಂಗಳೆಯರ ಹಬ್ಬವಲ್ಲ. ಮನೆಮನೆಯ ಹಬ್ಬ.ತಾವು ಚೂಡಿ ಪೂಜಿಸಿದ ದಿನದಂದೇ ಆ ಚೂಡಿಯನ್ನು ಹಿರಿಯರ ಮನೆಗೆ, ಕಿರಿಯರು ಹೋಗಿ ಆ ಮನೆಯ ಮಹಿಳೆಗೆ ಕೊಟ್ಟು ಅವರು ಪೂಜಿಸಿದ ಚೂಡಿಯನ್ನು ಮುಡಿಗೆ ಮುಡಿದು ಅವರಿಂದ ಆಶೀರ್ವಾದ ಪಡೆಯುವ ಕ್ರಮವಿದೆ. ವಿವಿಧ ದೇವಸ್ಥಾನಗಳಿಗೆ ತೆರಳಿ ಚೂಡಿಯನ್ನು ದೇವಸ್ಥಾನ ಹೊಸ್ತಿಲ ಮೇಲೆ ಇಟ್ಟು ಇಡೀ ಶ್ರಾವಣ ಮಾಸವನ್ನು ಭಕ್ತಿಯಿಂದ ಆಹ್ವಾನಿಸಿಕೊಳ್ಳುತ್ತಾರೆ ಮುತ್ತೆ$çದೆಯರು. ಹಾಗಾಗಿ ಚೂಡಿ ಪೂಜೆ ಸಂಬಂಧಗಳನ್ನು ಮತ್ತಷ್ಟು ಬೆಸೆಯುವುದಕ್ಕೆ ಮುನ್ನುಡಿ.

ಸಾಮಾಜಿಕ ಜಾಲ ತಾಣದಲ್ಲೂ ಚೂಡಿಯ ಕ್ರೇಜ್‌
ಆಧುನಿಕ ಹೆಂಗಳೆಯರಲ್ಲಿ ಚೂಡಿ ಪೂಜೆಯ ಕ್ರೇಜ್‌ ಕೊಂಚ ಕಡಿಮೆಯಾದರೂ ಹೊಸದಾಗಿ ಆಚರಿಸಿದ ಚೂಡಿ ಪೂಜೆಯ ಫೋಟೋ ಗಳನ್ನು, ಲೈವ್‌ ವಿಡಿಯೋಗಳನ್ನು ದೂರದ ಊರಿನ ಸಂಬಂಧಿಕರಿಗೆ ಕಳಿಸಿ ಚೂಡಿ ಪೂಜೆಯ ಕ್ರಮ ಹಾಗೂ ಸಂಪ್ರದಾಯಗಳನ್ನು ಪರಸ್ಪರ ಹಂಚಿಕೊಳ್ಳುತ್ತಾರೆ ಈ ಹೊಸ ಕಾಲ ಮಂದಿ.

– ಪ್ರಸಾದ್‌ ಶೆಣೈ ಕಾರ್ಕಳ

Advertisement

Udayavani is now on Telegram. Click here to join our channel and stay updated with the latest news.

Next