Advertisement

Shravana: ಆಚರಣೆಗಳ ಹೂರಣ ಶ್ರಾವಣ

06:35 PM Aug 29, 2023 | Team Udayavani |

ಒಂದು ದಿನ ವೈಬ್ರೇಶನ್‌ಲ್ಲಿದ್ದ ಮೊಬೈಲ್‌ ಒಂದೇ ಸಮನೇ ಗುರ್‌ ಗುರ್‌ ಎಂದು ಸದ್ದು ಮಾಡುವಾಗ ಫ್ರಿಡ್ಜ್ ಮೇಲಿದ್ದ ಆ ಜನ್ಮ ಸಂಗಾತಿಯನ್ನು ತೆಗೆದು ನೋಡಲು ಗೆಳತಿ ದಿವ್ಯಾಳ ಕರೆ ಅದಾಗಿತ್ತು. ಕರೆಯಿತ್ತಿ ಸ್ವೀಕರಿಸಿದಾಗ “ಎಷ್ಟ ಹೊತ್ತ ಆಯ್ತು…, ಫೋನ್‌ ಮಾಡ್ಲಿಕತ್ತ್ ನಿನಗ, ಈಗ ರಿಸೀವ ಮಾಡಿದಿ’ ಎಂದು ಗದರಿದಳು.

Advertisement

“ಹೂಂ…. ಮೊಬೈಲ್‌ ವೈಬ್ರೇಶನ್‌ ನಾಗ ಇತ್ತು, ಗೊತ್ತಾಗಿಲ್ಲ’ ಎಂದಷ್ಟೇ ಉತ್ತರಿಸಿದೆ. “ಈ ದೀವಸೀ ಗೌರಿ ಪೂಜಾ, ಅದೇ ಈ ಬೆಂಗಳೂರು ಕಡೇ ಭೀಮನ ಅಮಾವಾಸ್ಯೆ, ಗಂಡನ ಪೂಜಾ ಅಂತ ಕರೀತಾರ ಅದಕ್ಕ, ಮಾಡಿದಿ ಇಲ್ವೋ ಇವತ್ತ್ ‘ ಎಂದು ಪ್ರಶ್ನಾರ್ಥಕವಾಗಿ ಕೇಳಿದಳು. “ಹೂಂ, ಪೂಜಾ ಮಾಡಿ ಹತ್ತ ಕಡಬು ಮಾಡಿ ನೈವೇದ್ಯ ತೋರಸೀ ನವಾ’ ಎಂದು ಖುಷಿಯಿಂದ ಉತ್ತರಿಸಿದೆ. ಅದಕ್ಕವಳು ಮತ್ತೆ “ನೀ ಖರೇ ಪೂಜಾ ಮಾಡಿ ಮತ್ತ ವಾಟ್ಸ್‌ಆ್ಯಪ್‌ ಸ್ಟೇಟಸ್‌ ನಾಗ ಹಾಕೆ ಇಲ್ಲ ‘ ಮತ್ತೆ ಅದೇ ಪ್ರಶ್ನಾರ್ಥಕ ಧ್ವನಿಯಿಂದ ಕೇಳಿದಳು.

” ನಾ ಪೂಜಾ ಅಷ್ಟೇ ಮಾಡೀನಿ, ಆದ್ರ ಫೋಟೋ ತಕ್ಕೊಂಡಿಲ್ಲ, ಇನ್ನ ವಾಟ್ಸ್‌ಆ್ಯಪ್‌ ನಾಗ ಎದಕ್ಕ ಹಾಕ್ಬೇಕು’ ಎಂದೆ. ನೀ ವಾಟ್ಸ್‌ಆ್ಯಪ್‌ ಸ್ಟೇಟಸ್‌ ನಾಗ ನೋಡು, ಎಲ್ಲರು ಹಾಕ್ಯಾರ ದೀವಸೀ ಗೌರಿ (ಭೀಮನ ಅಮಾವಾಸ್ಯೆ) ಫೋಟೋ. ನೀ ಹಾಕಿಲ್ಲ ಫೋಟೋ ಅದಕ್ಕ ನೀ ಪೂಜಾ ಮಾಡೇ ಇಲ್ಲ ಅಂತ ಅನುಮಾನಿಸಿ ಕೇಳದೆ ನೋಡು’ ಎಂದ್ಹೇಳಿದಳು. ಮತ್ತೆ ಮಾತು ಮುಂದುವರೆಸಿ ಅವರ ಸೀರೆ, ಇವರ ಬಳಿ,ಬಂಗಾರ ಎಂದು ಪರಿಚಿತರ, ಅಪರಿಚಿತರ ಪೂಜೆ ಮತ್ತು ಅವರ ಅಲಂಕಾರಗಳನ್ನು ನನಗೊಪ್ಪಿಸಿ ನಲವತ್ತು ನಿಮಿಷಗಳ ದೀರ್ಘ‌ ಸಂಭಾಷಣೆ ಮುಕ್ತಾಯಗೊಂಡಿತು.

ಗೆಳತಿ ದಿವ್ಯಾಳ ಆಜ್ಞೆಯಂತೆ, ವಾಟ್ಸ್‌ಆ್ಯಪ್‌ ಸ್ಟೇಟಸ್‌ ನೋಡಿದಾಗ ಅವಳೆಂದಂತೆ ಎಲ್ಲ ಮಹಿಳೆಯರ ಬಳಗ ದೀವಸೀ ಗೌರಿ ಪೂಜೆಯನ್ನು ಚೆಂದವಾಗಿ ವಾಟ್ಸ್‌ಆ್ಯಪ್‌ನಲ್ಲಿ ಸಂಭ್ರಮಿಸಿದ್ದರು. ಅವಳೆಂದಂತೆ ಎಲ್ಲರೂ ಸೊಗಸಾಗಿ ಸಿಂಗರಿಸಿಕೊಂಡು ಹಲವಾರು ಭಂಗಿಗಳ ಫೋಟೋಗಳು ಸ್ಟೇಟಸ್‌ನಲ್ಲಿ ಮಿಂಚಿದ್ದವು. ಆದರೆ ಎಲ್ಲ ಫೋಟೋಗಳಲ್ಲಿ ಗಂಡ ಮಾತ್ರ ಅದೃಶ್ಯ.

ನಿಜ ಶ್ರಾವಣ ಮಾಸ ಎಂದರೆ ಹಬ್ಬಗಳ ಗೊಂಚಲು. ಭೀಮನ ಅಮವಾಸ್ಯೆ , ಮಂಗಳ ಗೌರಿ ವ್ರತ , ನಾಗರ ಪಂಚಮಿ, ವರಮಹಾಲಕ್ಷ್ಮೀ, ಶ್ರೀಕೃಷ್ಣ ಜನ್ಮಾಷ್ಟಮಿ, ರಕ್ಷಾ ಬಂಧನ, ಗಣೇಶ್‌ ಚತುರ್ಥಿ ಹೀಗೆ ಒಂದು ತಿಂಗಳು ಸಾಲು ಸಾಲು ಹಬ್ಬಗಳು. ಹೆಣ್ಣು ಮಕ್ಕಳದು ಈ ಮಾಸದಲ್ಲಿ ಅನಿಯಮಿತ ಶೃಂಗಾರ-ಬಂಗಾರ. ಇತ್ತೀಚಿಗಂತೂ ಇನ್‌ಸ್ಟಾಗ್ರಾಮ್‌, ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ನಲ್ಲಿ ಫೋಟೋ ಹಾಕಲೆಂದೇ ಇನ್ನೂ ಮುದ್ದಾಗಿ ಸಿಂಗರಿಸಿಕೊಳ್ಳುವುದುಂಟು. ಹೆಣ್ಣುಮಕ್ಕಳು ತಾವು ಸಿಂಗರಿಸಿಕೊಳ್ಳುವುದಲ್ಲದೇ, ದೇವರನ್ನೂ ಅಷ್ಟೇ ಆಸಕ್ತಿಯಿಂದ ಅತ್ಯದ್ಭುತವಾಗಿ ಅಲಂಕರಿಸಿ ಸಂಭ್ರಮಿಸುವ ಪರಿಪಾಠ.

Advertisement

ಇದಲ್ಲದೇ ಮಕ್ಕಳಲ್ಲಿ ದೇವರನ್ನು ಕಾಣುವಂತೆ, ಪುಟಾಣಿ ಮಕ್ಕಳನ್ನು ವರಮಹಾಲಕ್ಷ್ಮೀ ಹಬ್ಬದಂದು ಲಕ್ಷ್ಮೀಯಂತೆ ಸಿಂಗರಿಸಿ, ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ರಾಧಾ ಕೃಷ್ಣರಂತೆ, ಯಶೋಧೆಯಂತೆ ತಾವೂ ಅಲಂಕಾರಗೊಂಡು ಮುದ್ದುಮಕ್ಕಳ ಚೆಂದವನ್ನು ಸಂಭ್ರಮಿಸುವ ದಿನಗಳು ಶ್ರಾವಣ ಮಾಸ.

ಹೀಗೆ ಶ್ರಾವಣ ಮಾಸ ಬರೀ ಮಾನವ ಜನಾಂಗ ಹಬ್ಬವಲ್ಲದೇ, ಇಡೀ ನಿಸರ್ಗದ ಜಾತ್ರೆ. ಈ ದಿನಗಳನ್ನೇ ಕೊಂಡಾಡಿ ಅಂಬಿಕಾತನಯದತ್ತರು ಬರೆದ ಸುಶ್ರಾವ್ಯವಾದ ಹಾಡು:

ಶ್ರಾವಣಾ ಬಂತು ಕಾಡಿಗೆ | ಬಂತು ನಾಡಿಗೆ |
ಬಂತು ಬೀಡಿಗೆ | ಶ್ರಾವಣಾ ಬಂತು |
ಜಗದ್ಗುರು ಹುಟ್ಟಿದ ಮಾಸ |
ಕಟ್ಟಿ ನೂರು ವೇಷ | ಕೊಟ್ಟ ಸಂತೋಷ |
ಕುಣಿತದ ತಾನದ ದಣಿತದ|

ಶ್ರಾವಣ ಮಾಸದಿಂದ ಪ್ರಾರಂಭಗೊಂಡ ಹಬ್ಬಗಳು ಕಾರ್ತಿಕ ಮಾಸದ ಅಂತ್ಯಕ್ಕೆ ಕೊನೆಗೊಳ್ಳುತ್ತವೆ. ದುಷ್ಟ ಶಕ್ತಿಯ ಸಂಹಾರಗೈದ ದುರ್ಗೆಯನ್ನು ಆರಾಧಿಸುವ ದಸರಾ ಹಬ್ಬವಂತೂ ಸಮೃದ್ಧ ಒಂಬತ್ತು ದಿನಗಳ ಸಂಭ್ರಮ. ಈಗಂತೂ ಕಾಲೇಜು ಮತ್ತು ಆಫೀಸ್‌ಗಳಲ್ಲಿ ಒಂಬತ್ತು ದಿನಗಳು ದಿನಕ್ಕೊಂದು ಬಣ್ಣ ನಿಗದಿಪಡಿಸಿಕೊಂಡು ಅದೇ ಬಣ್ಣದ ಬಟ್ಟೆಯನ್ನು, ಹೆಚ್ಚಾಗಿ ಹುಡುಗಿಯರು ಮತ್ತು ಮಹಿಳೆಯರು ಆ ಬಣ್ಣದ ಸೀರೆ , ಇಲ್ಲವೇ ಸಲ್ವಾರ್‌ ಧರಿಸಿ ನಲಿಯುವುದುಂಟು.

ಜಗತ್ತಿನಾದ್ಯಂತ ಜನರು ತಮ್ಮದೇ ವೈಖರಿಯಲ್ಲಿ ಆಚರಿಸುವ, ಮನೋಲ್ಲಾಸ ತುಂಬುವ ಸಂಸ್ಕೃತಿಯ ಪ್ರತೀಕವಾದ ದೀಪ ಬೆಳಗಿಸುವ ಹಬ್ಬ ದೀಪಾವಳಿ. ಹಿಂದೂ ಸಂಪ್ರದಾಯದಲ್ಲಿ ಹಬ್ಬಗಳೆಂದರೆ ದೇವರನ್ನು ಪೂಜಿಸುವ ಜತೆಗೆ , ಬಂಧು-ಬಾಂಧವರ ಸಮ್ಮಿಲನವೆಂದೇ ಹೇಳಬಹುದು. ಬಗೆ ಬಗೆಯ ಸಿಹಿ, ಪಕ್ವಾನ್ನಗಳಿಂದ ದೇವರ ನೈವೇದ್ಯ ಮತ್ತು ಅತಿಥಿಗಳ ಸತ್ಕಾರ. ಮಾತೃತ್ವ ಬೆಸೆಯುವ ವರಮಹಾಲಕ್ಷ್ಮೀ, ಭಾತೃತ್ವ ಬೆಸೆಯುವ ರûಾಬಂಧನ. ಹಬ್ಬಗಳೆಂದರೆ ಸಂಬಂಧಗಳನ್ನು ಬೆಸೆಯುವ, ಪೋಷಿಸುವ, ಗಟ್ಟಿಗೊಳಿಸುವ ಮಧುರ ಬಾಂಧವ್ಯ.

ಇಂದು ಭಾರತ ಮಾತ್ರವಲ್ಲದೇ, ವಿದೇಶಗಳಲ್ಲಿಯೂ ಪ್ರಮುಖ ಹಬ್ಬಗಳನ್ನು ಹಿಂದೂ ದೇವಸ್ಥಾನಗಳಲ್ಲಿ , ತಮ್ಮದೇ ಸಮೂಹಗಳಲ್ಲಿ ,ಸ್ನೇಹಿತರೊಟ್ಟಿಗೆ ಆಚರಿಸುತ್ತಾರೆ. ನಮ್ಮ ಸನಾತನ ಧರ್ಮದ ಅವಿಭಾಜ್ಯ ಅಂಗವಾದ ಹಬ್ಬಗಳನ್ನು ಆಚರಿಸಿ ಮುನ್ನಡೆಸಿ ಮುಂದಿನ ಪಿಳಿಗೆಗೆ ತಲುಪಿಸುವ ಜವಾಬ್ದಾರಿ ನಮ್ಮದು.

*ಶಿಲ್ಪಾ ಕುಲಕರ್ಣಿ, ಜರ್ಮನಿ

 

Advertisement

Udayavani is now on Telegram. Click here to join our channel and stay updated with the latest news.

Next