Advertisement

ಹಬ್ಬಗಳ ಹೂರಣ ಶ್ರಾವಣ ಮಾಸ-ಭಜನಾ ಮೆರವಣಿಗೆ ವೈಭವ

05:11 PM Aug 12, 2024 | Team Udayavani |

ಉದಯವಾಣಿ ಸಮಾಚಾರ
ಗದಗ: ಈಗಾಗಲೇ ಆಷಾಢ ಮಾಸ ಕಳೆದು ಶ್ರಾವಣ ಮಾಸ ಆರಂಭಗೊಂಡಿದ್ದು, ಜಿಲ್ಲಾದ್ಯಂತ ದೇವಸ್ಥಾನ, ಮಠ-ಮಂದಿರ ಹಾಗೂ ಗುಡಿ-ಗುಂಡಾರಗಳಲ್ಲಿ ರುದ್ರಾಭಿಷೇಕ, ವಿಶೇಷ ಪೂಜೆ-ಪುನಸ್ಕಾರಗಳು, ಪೂಜಾ ವಿಧಿ ವಿಧಾನಗಳು ನಡೆಯುತ್ತಿವೆ. ಜೊತೆಗೆ ಗ್ರಾಮೀಣ ಪ್ರದೇಶಗಳಲ್ಲಿ ಭಜನಾ ಮೆರವಣಿಗೆ ಸೇರಿ ಪ್ರತಿ ಮನೆ-ಮನಗಳಲ್ಲಿ ಆಧ್ಯಾತ್ಮಿಕತೆಯ ಬೆಳಕು ಕಂಗೊಳಿಸುತ್ತಿದೆ.

Advertisement

ಶ್ರಾವಣ ಮಾಸ ಹಬ್ಬಗಳ ಪರ್ವಕಾಲವೆನಿಸಿದ್ದು, ಪ್ರತಿದಿನವೂ ಹಬ್ಬಗಳ ಹೂರಣವಾಗಿದೆ. ಶ್ರಾವಣ ಮಾಸದಲ್ಲಿ ಪ್ರತಿ ಸೋಮವಾರ ಶಿವನಿಗೆ ಅಭಿಷೇಕ ಮಾಡಿದರೆ ಸಂತುಷ್ಟಗೊಳ್ಳುತ್ತಾನೆ ಎಂಬ ನಂಬಿಕೆಯಿದೆ. ಜೊತೆಗೆ ಶ್ರಾವಣ ಮಾಸದಲ್ಲಿ ನಾಗಚತುರ್ಥಿ, ನಾಗ ಪಂಚಮಿ, ರಾಘವೇಂದ್ರ ಆರಾಧನಾ ಮಹೋತ್ಸವ, ಕೃಷ್ಣ ಜನ್ಮಾಷ್ಟಮಿ, ವರಮಹಾಲಕ್ಷ್ಮೀ, ಮಂಗಳ ಗೌರಿ ವ್ರತ ವಿಶೇಷವಾಗಿದೆ.

ಈಗಾಗಲೇ ರೊಟ್ಟಿ ಪಂಚಮಿ, ನಾಗ ಚತುರ್ಥಿ, ನಾಗರ ಪಂಚಮಿ ಹಬ್ಬಗಳು ಸಂಪನ್ನಗೊಂಡಿದ್ದು ಮಹಿಳೆಯರು, ಮಕ್ಕಳು ಪಂಚಮಿಯನ್ನು ಸಂಭ್ರಮದಿಂದ ಆಚರಿಸಿದ್ದಾರೆ. ವಿವಿಧ ಬಗೆಯ ಉಂಡಿಗಳು (ಲಾಡು), ಚಕ್ಕುಲಿ, ಚೂಡಾ ಸೇರಿ ತಹರೇವಾರಿ ತಿಂಡಿ-ತಿನಿಸು ಸವಿಯುತ್ತ ಹಬ್ಬದ ಮೂಡ್‌ನ‌ಲ್ಲಿ ಕಾಲ ಕಳೆಯುತ್ತಿದ್ದಾರೆ.

ಗದುಗಿನ ವೀರೇಶ್ವರ ಪುಣ್ಯಾಶ್ರಮ, ಬಸವೇಶ್ವರ ದೇವಸ್ಥಾನ, ಬೆಟಗೇರಿಯ ವೀರಭದ್ರೇಶ್ವರ ದೇವಸ್ಥಾನ, ನರಸಾಪುರದ ಅಮರೇಶ್ವರ
ದೇವಸ್ಥಾನ, ರಂಗಪ್ಪಜ್ಜನ ಮಠ, ಗುಂಡದ ಮಾರುತಿ ದೇವಸ್ಥಾನ, ನಾಗಸಮುದ್ರದ ಶರಣಬಸವೇಶ್ವರ ದೇವಸ್ಥಾನ, ಗಜೇಂದ್ರಗಡದ
ಕಾಲಕಾಲೇಶ್ವರ ದೇವಸ್ಥಾನ, ಲಕ್ಷ್ಮೇಶ್ವರದ ಸೋಮೇಶ್ವರ ದೇವಸ್ಥಾನ, ನರೇಗಲ್‌ ಪಟ್ಟಣದ ಕೋಡಿಕೊಪ್ಪ ವೀರಪ್ಪಜ್ಜನ ಮಠ ಸೇರಿದಂತೆ ಬಹುತೇಕ ದೇವಸ್ಥಾನ, ಮಠ-ಮಂದಿರಗಳಲ್ಲಿ ಪ್ರತಿನಿತ್ಯ ಮಹಾರುದ್ರಾಭಿಷೇಕ ಸೇರಿ ವಿಶೇಷ ಪೂಜಾ ವಿಧಿ ವಿಧಾನಗಳು ಜರುಗುತ್ತವೆ. ಶ್ರಾವಣ ಮಾಸದ ಕೊನೆಯಲ್ಲಿ ಅನ್ನಸಂತರ್ಪಣೆ ನೆರವೇರಿಸಲಾಗುತ್ತದೆ.

ಭಜನಾ ಮೆರವಣಿಗೆ ವೈಭವ: ಶ್ರಾವಣ ಮಾಸ ಆರಂಭವಾದರೆ ಸಾಕು ಗ್ರಾಮೀಣ ಪ್ರದೇಶಗಳಲ್ಲಿ ಭಜನಾ ಮಂಡಳಿಗಳ ಭಜನಾ ಮೆರವಣಿಗೆಯ ಕಲವರ ಶುರುವಾಗುತ್ತದೆ. ಗ್ರಾಮಗಳಲ್ಲಿನ ಮಕ್ಕಳು, ಯುವಕರು ಹಾಗೂ ಹಿರಿಯರು ನಸುಕಿನ ಜಾವ ಎದ್ದು ನಿತ್ಯಕರ್ಮ ಮುಗಿಸಿ, ಸ್ನಾನ ಮಾಡಿ ದೇವಸ್ಥಾನಗಳಿಗೆ ಆಗಮಿಸುತ್ತಾರೆ. ದೇವಸ್ಥಾನಕ್ಕೆ ಆಗಮಿಸಿದ 25ರಿಂದ 30 ಜನರ
ತಂಡ ದೇವರ ದರ್ಶನ ಪಡೆದು ತಾಳ-ಮೇಳ- ವಾದ್ಯಗಳೊಂದಿಗೆ ದೇವರ ಭಾವಚಿತ್ರ ಸಮೇತ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸುತ್ತ ಭಜನಾ ಪದ ಹಾಡುತ್ತ ಭಕ್ತಿಭಾವ ಮೆರೆಯುತ್ತಾರೆ.

Advertisement

ಅಷ್ಟೊತ್ತಿಗಾಗಲೇ ಮಹಿಳೆಯರು ತಮ್ಮ ಮನೆಗಳ ಮುಂದೆ ಕಸ ಗೂಡಿಸಿ, ರಂಗೋಲಿ ಹಾಕಿ ಭಜನಾ ಮೆರವಣಿಗೆ ಆಗಮನಕ್ಕಾಗಿ ಕಾಯುತ್ತಿರುತ್ತಾರೆ. ಈ ವೇಳೆ ಮನೆ ಮುಂದೆ ಆಗಮಿಸಿದ ಭಜನಾ ಮೆರವಣಿಗೆ ಮುಂಭಾಗದಲ್ಲಿರುವ ನಂದಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಕೃತಜ್ಞರಾಗುತ್ತಾರೆ. ಭಜನಾ ಮೆರವಣಿಗೆ ಗ್ರಾಮದ ಪ್ರತಿ  ದೇವಸ್ಥಾನಗಳಿಗೆ ಸಂಚರಿಸಿ, ಪೂಜೆ ಸಲ್ಲಿಸಿದ ನಂತರ ಭಜನೆ ಆರಂಭಿಸಿದ ದೇವಸ್ಥಾನಕ್ಕೆ ಮರಳಿ ವಿಶೇಷ ಪೂಜೆ ಸಲ್ಲಿಸಿ ಭಜನಾ ಮೆರವಣಿಗೆ ಪೂರ್ಣಗೊಳಿಸುತ್ತಾರೆ. ಹೀಗೆ ಶ್ರಾವಣ ಮಾಸ
ಪೂರ್ಣಗೊಳ್ಳುವವರೆಗೆ ಪ್ರತಿನಿತ್ಯ ಭಜನಾ ತಂಡಗಳ ಮೆರವಣಿಗೆ ಸಾಗುತ್ತದೆ.

ನಾಗಸಮುದ್ರ ಗ್ರಾಮದಲ್ಲಿ ಭಜನಾ ಮೆರವಣಿಗೆ:
ಗದಗ ತಾಲೂಕಿನ ನಾಗಸಮುದ್ರ ಗ್ರಾಮದಲ್ಲಿ ಶ್ರೀ ಶರಣ ಬಸವೇಶ್ವರ ಪುರಾಣ, ಭಜನಾ ಸಮಿತಿ ಕಳೆದ ಹಲವು ದಶಕಗಳಿಂದ ಪ್ರತಿ ವರ್ಷ ಶ್ರಾವಣ ಮಾಸದ ನಿಮಿತ್ತ ಭಜನಾ ಮೆರವಣಿಗೆ ನಡೆಸಿಕೊಂಡು ಬಂದಿದೆ. ಪ್ರತಿನಿತ್ಯ ಗ್ರಾಮದ ಶರಣಬಸವೇಶ್ವರ ದೇವಸ್ಥಾನದದಿಂದ ಆರಂಭವಾಗುವ ಭಜನಾ ಮೆರವಣಿಗೆಯಲ್ಲಿ 25ರಿಂದ 30 ಜನರು ತಾಳ, ಮೇಳ, ಹಾರ್ಮೋನಿಯಂ, ತಬಲಾ, ಗುಳಗುಳಿ ವಾದ್ಯ ಹಿಡಿದು ಭಜನಾ ಪದ ಹಾಡುತ್ತ ಸಾಗುತ್ತಾರೆ. ಮಾರ್ಗಮಧ್ಯೆ ಗ್ರಾಮಸ್ಥರು ಮೆರವಣಿಗೆಯಲ್ಲಿ ಸಾಗಿಬಂದ ಶರಣಬಸವೇಶ್ವರ ದೇವರ ಭಾವಚಿತ್ರ ಮತ್ತು ಬಸವಣ್ಣನಿಗೆ (ನಂದಿ) ಪೂಜೆ ಸಲ್ಲಿಸುತ್ತಾರೆ.

ಹೀಗೆ ಮುಂದೆ ಸಾಗಿದ ಮೆರವಣಿಗೆ ಹನುಮಂತ ದೇವಸ್ಥಾನ, ಹುಡೇದ ಲಕ್ಷ್ಮಮ್ಮ ದೇವಸ್ಥಾನಕ್ಕೆ ತೆರಳಿ ನಂತರ ಶರಣಬಸವೇಶ್ವರ ದೇವಸ್ಥಾನಕ್ಕೆ ಆಗಮಿಸಿ ಭಜನಾ ಮೆರವಣಿಗೆ ಪೂರ್ಣಗೊಳಿಸುತ್ತಾರೆ. ಹೀಗೆ ಜಿಲ್ಲೆಯ ಪ್ರತಿ ಗ್ರಾಮಗಳಲ್ಲಿ ವಿವಿಧ ದೇವಸ್ಥಾನಗಳಲ್ಲಿ ಭಜನಾ ಮಂಡಳಿಗಳು ಮೆರವಣಿಗೆ ಮೂಲಕ ಭಜನಾ ಪದ ಹಾಡುತ್ತ ಗ್ರಾಮೀಣ ಪ್ರದೇಶಗಳಲ್ಲಿ ಆಧ್ಯಾತ್ಮಿಕತೆ ಉಳಿಸಿ-ಬೆಳೆಸಿಕೊಂಡು ಹೋಗುತ್ತಿದ್ದಾರೆ.

ಮಾಯವಾಗುತ್ತಿದೆ ಭಜನಾ ಮೆರವಣಿಗೆ ಸೊಗಡು
ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ಭಜನಾ ಮಂಡಳಿಗಳ ಮೆರವಣಿಗೆ, ದೇವರ ಭಜನಾ ಪದಗಳು ಮಕ್ಕಳಲ್ಲಿ, ಯುವಕರಲ್ಲಿ ದೇವರಲ್ಲಿ ಭಕ್ತಿ-ಭಾವ ಹಾಗೂ ನಂಬಿಕೆಯ ಜಾಗೃತಿಯುಂಟು ಮಾಡುತ್ತಿದ್ದವು. ಆದರೆ ಇಂದಿನ ಆಧುನಿಕತೆ ಭರಾಟೆಯಲ್ಲಿ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಯುವಕರ ನಿರಾಸಕ್ತಿಯಿಂದ ಭಜನಾ ಮಂಡಳಿಗಳ ಭಜನಾ ಪದಗಳ ಮೆರವಣಿಗೆ ಸೊಗಡು ಮರೆಯಾಗುತ್ತಿದೆ. ಅವುಗಳನ್ನು ಉಳಿಸಿ-ಬೆಳೆಸುವ ಜವಾಬ್ದಾರಿ ಇಂದಿನ ಯುವಕರ ಮೇಲಿದೆ ಎನ್ನುತ್ತಾರೆ ನಸರಾಪುರ ಗ್ರಾಮದ ಭಜನಾ ಮಂಡಳಿ ಸದಸ್ಯರು.

ನಾಗಸಮುದ್ರ ಗ್ರಾಮದಲ್ಲಿ ಶ್ರಾವಣದಲ್ಲಿ ಶರಣಬಸವೇಶ್ವರರಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಪ್ರತಿ ಶ್ರಾವಣ ಸೋಮವಾರ ದೇವರಿಗೆ ರುದ್ರಾಭಿಷೇಕ ನಡೆಯುತ್ತದೆ. ಶ್ರಾವಣ ಮಾಸದ ಕೊನೆ ದಿನದಂದು ಚಕ್ಕಡಿಯಲ್ಲಿ ಶರಣಬಸವೇಶ್ವರರ ಮೂರ್ತಿಯನ್ನಿಟ್ಟು ಗ್ರಾಮದ ಪ್ರತಿ ಬೀದಿಗಳಲ್ಲಿ ಧ್ವನಿವರ್ಧಕದ ಮೂಲಕ ಭಜನಾ ಮೆರವಣಿಗೆ ನಡೆಯುತ್ತದೆ. ನಂತರ ಮಧ್ಯಾಹ್ನ ಅನ್ನಪ್ರಸಾದ ನಡೆಯುತ್ತದೆ.
*ದ್ಯಾಮಣ್ಣ ಇನಾಮತಿ,
ಶ್ರೀ ಶರಣಬಸವೇಶ್ವರ ಪುರಾಣ ಸಮಿತಿ ಸದಸ್ಯ, ನಾಗಸಮುದ್ರ

*ಅರುಣಕುಮಾರ ಹಿರೇಮಠ

Advertisement

Udayavani is now on Telegram. Click here to join our channel and stay updated with the latest news.

Next