ಸುರಪುರ: ಪ್ರತಿಯೊಬ್ಬ ವ್ಯಕ್ತಿಯ ಬೆಳವಣಿಗೆಯಲ್ಲಿ ಸಂಸ್ಕಾರ ಮತ್ತು ಶಿಕ್ಷಣ ಪ್ರಮುಖವಾಗಿವೆ. ಸಂಸ್ಕಾರವಿಲ್ಲದ ಶಿಕ್ಷಣ ನಿರರ್ಥಕ. ಮಠ-ಮಾನ್ಯಗಳು ಧಾರ್ಮಿಕ ಸೇವೆಯೊಂದಿಗೆ ಸಂಸ್ಕಾರವನ್ನು ಕಲಿಸುತ್ತವೆ. ಹೀಗಾಗಿ ಮಠಮಾನ್ಯಗಳು ಸಂಸ್ಕಾರ ನೀಡುವ ಶ್ರದ್ಧಾ ಕೇಂದ್ರಗಳು ಎಂದು ಕರ್ನಾಟಕ ಸಿಐಡಿ ವಿಭಾಗದ ಐಪಿಎಸ್ ಅಧಿಕಾರಿ ಡಿ. ರವಿ ಚನ್ನಣ್ಣನವರ ಅಭಿಪ್ರಾಯಪಟ್ಟರು.
ತಾಲೂಕಿನ ದೇವಾಪುರ ಗ್ರಾಮದ ಜಡಿಶಾಂತಲಿಂಗೇಶ್ವರ ಸಂಸ್ಥಾನ ಹಿರೇಮಠದ ವತಿಯಿಂದ ಕಾಯಕ ಶ್ರೀ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು. ದೇಶದ ಬಹುತೇಕ ಸಾಧಕರ ಹಿಂದೆ ಮಠಗಳ ಸಂಸ್ಕಾರವಿದೆ. ಮಠ-ಮಾನ್ಯಗಳು ಸಂಸ್ಕಾರ ನೀಡಿ ಆದರ್ಶ ವ್ಯಕ್ತಿಯನ್ನಾಗಿ ರೂಪಿಸುತ್ತಿವೆ. ಇದಕ್ಕೆ ನಾನು ಸೇರಿದಂತೆ ಅನೇಕರ ಉದಾಹರಣೆ ಇದೆ. ಹೀಗಾಗಿ ನಮ್ಮ ಸನಾತನ ಪರಂಪರೆಯಲ್ಲಿ ಮಠಗಳಿಗೆ ಹೆಚ್ಚಿನ ಆದ್ಯತೆ ಇದೆ ಎಂದರು.
ವಿದ್ಯಾರ್ಥಿಗಳು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳುವುದು ಅಗತ್ಯವಾಗಿದೆ. ಮೂಢನಂಬಿಕೆ ಮತ್ತು ಅಜ್ಞಾನದಿಂದ ಹೊರ ಬರಬೇಕು. ಬಡತನದ ಜಿಗುಪ್ಸೆ ಸರಿಯಲ್ಲ. ಈ ಮಾನಸಿಕ ಅಸ್ಥವಸ್ಥೆತೆಯಿಂದ ಹೊರ ಬರಬೇಕು. ಸಾಧಿಸಲು ಸಾಕಷ್ಟು ಅವಕಾಶಗಳಿವೆ. ದೃಢ ಸಂಕಲ್ಪ, ಅವಿರತ ಪ್ರಯತ್ನ, ಸಾಧಿಸುವ ಛಲ, ಕಠಿಣ ಪರಿಶ್ರಮಪಟ್ಟರೆ ಯಾವುದು ಅಸಾಧ್ಯವಲ್ಲ ಎಂದು ತಿಳಿಸಿದರು.
ಡಾ| ಬಾಬಾ ಸಾಹೇಬರು ಸಲಹೆಯಂತೆ ಮೊದಲು ಶಿಕ್ಷಣ ಪಡೆಯಿರಿ. ಶಿಕ್ಷಣದಿಂದ ಬದುಕು ಬದಲಾಗುತ್ತದೆ. ಕುಟುಂಬಗಳ ಆರ್ಥಿಕ ಸ್ಥಿತಿಗತಿ ಬದಲಾಗುತ್ತದೆ. ಅಷ್ಟೇ ಅಲ್ಲ ಎಲ್ಲವನ್ನು ಪಡೆದುಕೊಳ್ಳಲು ಸಾಧ್ಯ. ಇದಕ್ಕೆ ನಾನೇ ಉದಾಹರಣೆ. ದೇಶ ಭಾಷೆ, ರಾಷ್ಟ್ರೀಯತೆಯೊಂದಿಗೆ ಪ್ರಜಾಪ್ರಭುತ್ವ ಮತ್ತು ದೇಶದ ಅಖಂಡತೆ ಐಕ್ಯತೆ ಗಟ್ಟಿಗೊಳಿಸಲು ಪ್ರತಿಯೊಬ್ಬರು ಪಣತೊಡಬೇಕು. ಅಂದಾಗಲೇ ದೇಶವನ್ನು ವಿಶ್ವಗುರುಸ್ಥಾನಕ್ಕೆ ಕೊಂಡೊಯಲು ಸಾಧ್ಯ ಎಂದು ಸಲಹೆ ನೀಡಿದರು.
ಸಾನ್ನಿಧ್ಯ ವಹಿಸಿದ್ದ ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ಹುಟ್ಟು ಧರಿದ್ರವಾಗಿದ್ದರು ಸಾವು ಚರಿತ್ರೆಯಾಗಬೇಕು. ಈ ದಿಶೆಯಲ್ಲಿ ಎಸ್ಪಿ ಚನ್ನವಣ್ಣನವರು ತಮಗಾಗಿ ಬದುಕದೇ ಸಮಾಜಕ್ಕಾಗಿ ಬದುಕುತ್ತಿದ್ದಾರೆ. ಸರಕಾರಿ ಸೇವೆಯೊಂದಿಗೆ ನೂರಾರು ಐಪಿಎಸ್, ಐಎಎಸ್ ತರಬೇತಿ ವಿದ್ಯಾರ್ಥಿಗಳಿಗೆ ಸಂಪನ್ಮೂಲ ವ್ಯಕ್ತಿಯಾಗಿ ಮಾರ್ಗದರ್ಶನ ನೀಡುತ್ತಿದ್ದಾರೆ. ಅವರ ಸೇವೆ ಯುವಕರಿಗೆ ಮಾದರಿಯಾಗಿದೆ ಎಂದು ಪ್ರಶಂಸಿದರು. ರುಕ್ಮಾಪುರ ಹಿರೇಮಠದ ಗುರುಶಾಂತಮೂರ್ತಿ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು.
ದಲಿತ, ಹಿಂದುಳಿದ ಹಾಗೂ ಶ್ರಮಿಕರು ಆಳುವವರಾಗಬೇಕು ಅಧಿಕಾರ ಹಿಡಿಬೇಕು. ಈ ವರ್ಗದ ಪ್ರತಿಭಾವಂತರು ಉನ್ನತ ಶಿಕ್ಷಣ ಪಡೆದು ದೇಶದ ದೊಡ್ಡ ದೊಡ್ಡ ಹುದ್ದೆಗಳನ್ನು ಪಡೆಯಬೇಕು. ಅಂದಾಗಲೇ ಬಡತನ ನಿರ್ಮೂಲನೆ ಆಗುತ್ತದೆ. ದೇಶ ಆರ್ಥಿಕವಾಗಿ ಸದೃಢವಾಗುತ್ತದೆ. –
ರವಿ ಚನ್ನಣ್ಣವರ್, ಎಸ್‌ಪಿ ಸಿಐಡಿ ವಿಭಾಗ