ಚಿತ್ರದುರ್ಗ: ಹಸಿ ಸುಳ್ಳಿನ ಸರದಾರ ಹಾಗೂ ಮಾತಿನ ಮೋಡಿಗಾರ ಮೋದಿಯವರನ್ನು ಸೋಲಿಸಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು. ಚುನಾವಣೆಯಲ್ಲಿ ಮೋದಿ ಗೆದ್ದರೆ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಹತ್ತಿಕ್ಕುವ ಕೆಲಸ ಮಾಡಲಿದ್ದಾರೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಮುಖ್ಯಮಂತ್ರಿ ಚಂದ್ರು ಆತಂಕ ವ್ಯಕ್ತಪಡಿಸಿದರು.
ಇಲ್ಲಿನ ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ
ಮೋದಿ ಸರ್ವಾಧಿ ಕಾರಿಯಾಗಿದ್ದು ಚುನಾವಣೆಯಲ್ಲಿ ಅವರಿಗೆ ಸೋಲಿನ ರುಚಿ ತೋರಿಸಕಿದೆ. ಈ ದೇಶವನ್ನು ಕಾಂಗ್ರೆಸ್ ಉಳಿಸಿದ್ದರಿಂದಲೇ ಮೋದಿ ಪ್ರಧಾನಿಯಾಗಲು ಸಾಧ್ಯವಾಗಿದೆ. ಸಂವಿಧಾನದ ಆಶಯ ಮತ್ತು ಅರ್ಥವೇ ಬಿಜೆಪಿ ಮತ್ತು ಮೋದಿಗೆ ಗೊತ್ತಿಲ್ಲ.
ರಾಜ್ಯದ 28 ಕ್ಷೇತ್ರಗಳಲ್ಲಿ ಹಿಂದುಳಿದವರಿಗೆ ಸ್ಪರ್ಧಿಸಲು ಒಂದು ಕ್ಷೇತ್ರದಲ್ಲಿಯೂ ಮೋದಿ ಅವಕಾಶ ಕೊಟ್ಟಿಲ್ಲ. ಶ್ರೀಮಂತರ ಪರವಾಗಿರುವ ಮೋದಿಯಿಂದ ದೇಶದ ಬಡವರು, ರೈತರು, ದಲಿತರು, ಕೂಲಿ ಕಾರ್ಮಿಕರಿಗೆ ಎಂದಿಗೂ ಒಳ್ಳೆಯದಾಗುವುದಿಲ್ಲ ಎಂದು ಎಚ್ಚರಿಸಿದರು. ಚುನಾವಣೆಯಲ್ಲಿ ಆಯಾ ಪಕ್ಷದ ಸಾಧನೆ ಮುಂದಿಟ್ಟು ಮತ ಕೇಳಲಿ. ಆದರೆ ಬಿಜೆಪಿ ವ್ಯಕ್ತಿಗತ ನಿಂದನೆ, ಅಶ್ಲೀಲ ಪದಗಳ ಬಳಕೆ, ಅಸಂಸ್ಕೃತ ನಡವಳಿಕೆ ತೋರುತ್ತಿರುವುದನ್ನು ಖಂಡಿಸುತ್ತೇವೆ. ಯುಪಿಎ ಸರ್ಕಾರ ರೈತರ 72 ಸಾವಿರ ಕೋಟಿ ರೂ. ಸಾಲವನ್ನು ಒಂದೇ ಸಲ ಮನ್ನಾ ಮಾಡಿದರೆ, ಮೋದಿ ಶ್ರೀಮಂತರು ಮತ್ತು ಉದ್ಯಮಿಗಳ 2.31 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಿದ್ದಾರೆ ಎಂದು ಆರೋಪಿಸಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ| ಎಸ್.ಜಿ. ಸಿದ್ದರಾಮಯ್ಯ ಮಾತನಾಡಿ, ಇಂದಿರಾ ಗಾಂಧಿ ಕಾಲದ ತುರ್ತು ಪರಿಸ್ಥಿತಿಗಿಂತಲೂ ಈಗಿನ ಅಘೋಷಿತ ತುರ್ತು ಪರಿಸ್ಥಿತಿ ಘೋರವಾಗಿದೆ. ಇದಕ್ಕೆ ಹಿಟ್ಲರ್ ಧೋರಣೆಯ ಪ್ರಧಾನಿ ಮೋದಿಯೇ ಕಾರಣ. ಬಡವರನ್ನು ಕಡೆಗಣಿಸಿರುವ ಮೋದಿ ಬಂಡವಾಳಶಾಹಿ, ಕಾರ್ಪೊರೆಟ್ ಕಂಪನಿಗಳ ಪರವಾಗಿದ್ದಾರೆ. ಸುಳ್ಳುಗಳ ಸರದಾರನ ಮುಖವಾಡ ಕಳಚಬೇಕಿದೆ ಎಂದರು.
ಬಹುತ್ವ ಭಾರತದ ಅನನ್ಯತೆ, ವಿಶೇಷತೆ, ಬಹುಭಾಷೆಯ ಸಂಸ್ಕೃತಿ ನಾಶವಾಗುತ್ತಿದೆ. ದೇಶದದಲ್ಲಿ ತುರ್ತು ಪರಿಸ್ಥಿತಿ ಇದ್ದಾಗ ದೇಶದ ಬಹುತ್ವ ನಾಶವಾಗಿರಲಿಲ್ಲ. ಐದು ವರ್ಷಗಳಿಂದ ಮೋದಿಯಿಂದ ಪ್ರಭುತ್ವವೇ ನಾಶವಾಗಿದೆ. ದೇಶ ರಾಷ್ಟ್ರೀಕರಣದಿಂದ ಖಾಸಗೀಕರಣದತ್ತ ಹೆಜ್ಜೆ ಹಾಕುತ್ತಿದೆ. ಇಪ್ಪತ್ತು ಅಂಶಗಳ ಕಾರ್ಯಕ್ರಮ, ಭೂಸುಧಾರಣೆ, ಉಚಿತ ಶಿಕ್ಷಣ, ಕಡ್ಡಾಯ ಶಿಕ್ಷಣ ಇವುಗಳೆಲ್ಲ ಕಾಂಗ್ರೆಸ್ ಕೊಡುಗೆ ಎನ್ನುವುದನ್ನು ಮರೆಯಬಾರದು ಎಂದು ತಿಳಿಸಿದರು.
ನಿವೃತ್ತ ಐಎಎಸ್ ಅಧಿಕಾರಿ ರುದ್ರಪ್ಪ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಫಾತ್ಯರಾಜನ್ ಇತರರು ಇದ್ದರು. ಚುನಾವಣೆಯಲ್ಲಷ್ಟೇ ಬಿಜೆಪಿಗೆ ರಾಮಮಂದಿರ ನೆನಪು ಬಿಜೆಪಿಯವರು ಐದು ವರ್ಷ ಸುಮ್ಮನಿದ್ದು ಚುನಾವಣೆ ಸಮಯದಲ್ಲಿ ರಾಮ ಮಂದಿರ ಜಪ ಮಾಡುತ್ತಾರೆ. ಏಕೆ ರಾಮಮಂದಿರ ಕಟ್ಟಲಿಲ್ಲ, ರಾಮಮಂದಿರ ಕಟ್ಟಲು ಬೇಡ ಎಂದವರು ಯಾರು, ಈಗ ಏಕೆ ರಾಜ್ಯದಲ್ಲಿ ಐಟಿ ದಾಳಿ ನಡೆಯುತ್ತಿದೆ, ಜಿಎಸ್‌ಟಿ ವಿರೋ ಧಿಸಿದವರು ಅದನ್ನೇ ಏಕೆ ಜಾರಿಗೆ ತಂದಿದ್ದಾರೆ ಎಂದು ಮುಖ್ಯಮಂತ್ರಿ ಚಂದ್ರು ಪ್ರಶ್ನೆಗಳ ಸುರಿಮಳೆಗೈದರು. ಐದು ವರ್ಷದಲ್ಲಿ ಮೋದಿ ಕೇವಲ 19 ದಿನ ಮಾತ್ರ ಸಂಸತ್‌ನಲ್ಲಿದ್ದರು. 106 ಬಾರಿ ವಿದೇಶಕ್ಕೆ ಹೋಗಿ ಎರಡು ಸಾವಿರ ಕೋಟಿ ರೂ. ಖರ್ಚು ಮಾಡಿದ್ದಾರೆ. ಇವರು ಪ್ರಜಾತಂತ್ರ ವ್ಯವಸ್ಥೆ ಹಾಳು ಮಾಡುವವರು ಎಂದು ಕಿಡಿ ಕಾರಿದರು.