ನಾಶಿಕ್ : ಭಾರತ – ಪಾಕಿಸ್ಥಾನ ನಡುವೆ ಪೂರ್ಣ ಪ್ರಮಾಣದ ಯುದ್ದ ನಡೆಯಬೇಕೆಂದು ಹಂಬಲಿಸುವ ಸಾಮಾಜಿಕ ಜಾಲ ತಾಣಗಳ ಶೂರರು ಸಕಲ ಸೌಕರ್ಯಗಳ ತಮ್ಮ ಮನೆಯಿಂದ ಹೊರಬಂದು ದೇಶದ ಗಡಿಗೆ ತೆರಳಿ ಅಲ್ಲಿ ಪಾಕ್ ವಿರುದ್ಧ ಹೋರಾಡಬೇಕು ಎಂದು ಭಾರತೀಯ ವಾಯು ಪಡೆಯ ಹುತಾತ್ಮ ಪೈಲಟ್ ಸ್ಕ್ವಾಡ್ರನ್ ಲೀಡರ್ ನಿನಾದ್ ಮಂದವಗನನೆ ಅವರ ಪತ್ನಿ ವಿಜೇತಾ ಅವರು ತಮ್ಮ ವಿಡಿಯೋ ದಲ್ಲಿ ಕರೆ ನೀಡಿದ್ದಾರೆ.
ಐಎಎಫ್ ಪೈಲಟ್ ನಿನಾದ್ ಅವರು ಕಳೆದ ಫೆ.27ರಂದು ಜಮ್ಮು ಕಾಶ್ಮೀರದ ಬಡಗಾಂವ್ ನಲ್ಲಿ ಸಂಭವಿಸಿದ್ದ ಎಂಐ 17 ಹೆಲಿಕಾಪ್ಟರ್ ಪತನದಲ್ಲಿ ಇತರ ಐವರು ಸೈನಿಕರದೊಂದಿಗೆ ಹುತಾತ್ಮರಾಗಿದ್ದರು.
ನಿನಾದ್ ಅವರ ಪತ್ನಿ ವಿಜೇತಾ ಅವರು ತಮ್ಮ ವಿಡಿಯೋದಲ್ಲಿ ಸಾಮಾಜಿಕ ಜಾಲ ತಾಣಗಳಲ್ಲಿ ಧೈರ್ಯ, ಶೌರ್ಯವನ್ನು ಕೊಚ್ಚಿಕೊಳ್ಳುವ ಆರಾಮದಾಯಕ ಶೂರರು ಪ್ರಕೃತ ಪರಾಕಾಷ್ಠೆ ತಲುಪಿರುವ ಭಾರತ-ಪಾಕ್ ಉದ್ವಿಗ್ನತೆಯ ಮೇಲೆ ತಮ್ಮ ರೋಷದ ಭಾವನೆಗಳನ್ನು ಹರಿಯಬಿಡಬಾರದು; ಭಾರತ – ಪಾಕ್ ನಡುವೆ ಪೂರ್ಣ ಪ್ರಮಾಣದ ಯುದ್ಧವನ್ನು ಬಯಸುವ ಸಾಮಾಜಿಕ ಜಾಲ ತಾಣದ ಶೂರ ಯೋಧರು ತಮ್ಮ ಆರಾಮದಾಯಕ ನಿವಾಸಗಳಿಂದ ಹೊರ ಬಂದು ಭಾರತದ ಗಡಿಗೆ ತೆರಳಿ ಅಲ್ಲಿ ಪಾಕ್ ವಿರುದ್ಧ ಹೋರಾಡುವ ಧೈರ್ಯ, ಶೌರ್ಯ, ಉತ್ಸಾಹವನ್ನು ತೋರಬೇಕು ಎಂದು ಹೇಳಿದ್ದಾರೆ.
ವಿಜೇತಾ ಅವರ ಈ ವಿಡಿಯೋ ಚಿತ್ರಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು ಪೂರ್ಣ ಪ್ರಮಾಣದ ಯುದ್ಧವನ್ನು ಬಯಸುವವರಿಗೆ ಸರಿಯಾದ ರೀತಿಯಲ್ಲಿ ಬುದ್ಧಿವಾದ ಹೇಳಿದ್ದಾರೆ.
ಭಾರತೀಯ ವಾಯು ಪಡೆಯ ಪೈಲಟ್ ನಿನಾದ್ ಓರ್ವ ಸೈನಿಕ ಮತ್ತು ಒಬ್ಬ ಮಹೋನ್ನತ ದೇಶಪ್ರೇಮಿ. ಪಾಕ್ ವಿರುದ್ದ ಮುಯ್ಯಿ ತೀರಿಸಿಕೊಂಡು ದೇಶಕ್ಕಾಗಿ ಏನನ್ನಾದರೂ ಮಾಡಬೇಕೆಂದು ಬಯಸುವ ಸಾಮಾಜಿಕ ಮಾಧ್ಯಮಗಳ ಶೂರರು ಗಡಿಗೆ ತೆರಳಿ ಅಲ್ಲಿ ಸೇನೆಯನ್ನು ಸೇರಿಕೊಂಡು ದೇಶಕ್ಕಾಗಿ ಹೋರಾಡುವ ಕೆಲಸ ಮಾಡಬೇಕು ಎಂದು ವಿಜೇತಾ ತಮ್ಮ ವಿಡಿಯೋ ದಲ್ಲಿ ಕರೆ ನೀಡಿರುವುದನ್ನು ಹಲವರಿಗೆ ಅರಗಿಸಿಕೊಳ್ಳಲು ಕಷ್ಟವಾಗಿರುವುದು ಸತ್ಯ ಎಂಬ ಅಭಿಪ್ರಾಯ ಮೂಡಿ ಬಂದಿದೆ.