ನವದೆಹಲಿ: ಗುರುವಾರ ಕೇಂದ್ರ ಸರ್ಕಾರ ಶ್ವೇತಪತ್ರ ಹೊರಡಿಸುವುದಕ್ಕೆ ಕೆಲವು ಗಂಟೆಗಳ ಮುನ್ನ, ಕಾಂಗ್ರೆಸ್ ಗುರುವಾರ “ಕಪ್ಪುಪತ್ರ’ವನ್ನು ಬಿಡುಗಡೆ ಮಾಡಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗುರುವಾರ “ಹತ್ತು ವರ್ಷಗಳ ಅವಧಿ- ಅನ್ಯಾಯ ಕಾಲ’ ಎಂಬ ಶೀರ್ಷಿಕೆಯ “ಕಪ್ಪುಪತ್ರ’ವನ್ನು ಬಿಡುಗಡೆ ಮಾಡಿದ್ದಾರೆ. ಹತ್ತು ವರ್ಷಗಳ ಅವಧಿಯಲ್ಲಿ ದೇಶದ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ನಿರುದ್ಯೋಗ ಪ್ರಮಾಣ ಏರಿಕೆಯಾಗಿದೆ, ಕೃಷಿ ವಲಯ ನಾಶವಾಗಿದೆ ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಿದೆ ಎಂದು ಆಕ್ಷೇಪಿಸಲಾಗಿದೆ.
ಮೋದಿ ಸರ್ಕಾರದ ಅವಧಿಯಲ್ಲಿ “ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ ಅನ್ಯಾಯ’ ಉಂಟಾಗಿದೆ. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಿಗೆ ಅನುದಾನ ಹಂಚಿಕೆಯಲ್ಲೂ ತಾರತಮ್ಯವಾಗಿದೆ ಎಂದು 54 ಪುಟಗಳ ಕಪ್ಪುಪತ್ರದಲ್ಲಿ ಆರೋಪಿಸಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಖರ್ಗೆ, ಮೋದಿ ಅವರು ತಮ್ಮ ವೈಫಲ್ಯಗಳನ್ನು ಎಲ್ಲಿಯೂ ಒಪ್ಪಿಕೊಳ್ಳುತ್ತಿಲ್ಲ. ನಾವು ಸರ್ಕಾರದ ವೈಫಲ್ಯಗಳನ್ನು ಎತ್ತಿ ತೋರಿಸಿದರೆ ಅದಕ್ಕೆ ಮಹತ್ವ ನೀಡುವುದಿಲ್ಲ. ಹೀಗಾಗಿ ನಾವು ಈ ಕಪ್ಪುಪತ್ರ ತರಬೇಕಾಯಿತು ಎಂದು ಹೇಳಿದರು. ಎನ್‌ಡಿಎ ಸರ್ಕಾರ ಅವಧಿಯಲ್ಲಿ ಪ್ರಜಾಪ್ರಭುತ್ವ ಸಂಪೂರ್ಣ ನಾಶವಾಗಿದೆ. ಹತ್ತು ವರ್ಷಗಳಲ್ಲಿ 411 ಜನ ವಿರೋಧಿ ಶಾಸಕರನ್ನು ಬಿಜೆಪಿ ಖರೀದಿಸಿ, ಹಲವು ಸರ್ಕಾರಗಳನ್ನು ಉರುಳಿಸಿದೆ ಎಂದು ಖರ್ಗೆ ಕಿಡಿಕಾರಿದರು.
ದುಷ್ಟಶಕ್ತಿ ನಿವಾರಣೆಗೆ ಇಟ್ಟ ದೃಷ್ಟಿಬೊಟ್ಟು ಇದು: ಮೋದಿ ವ್ಯಂಗ್ಯ
ನವದೆಹಲಿ: ಕಾಂಗ್ರೆಸ್ ಕಪ್ಪುಪತ್ರ ಬಿಡುಗಡೆ ಮಾಡಿದ್ದಕ್ಕೆ ವ್ಯಂಗ್ಯವಾಡಿರುವ ಪ್ರಧಾನಿ ನರೇಂದ್ರ ಮೋದಿ, ದುಷ್ಟಶಕ್ತಿಗಳ ನಿವಾರಣೆಗೆ ಬಳಸುವ “ಕಪ್ಪು ಬೊಟ್ಟು’ ಇದು ಎಂದು ಕುಟುಕಿದರು.
ರಾಜ್ಯಸಭೆಯಲ್ಲಿ ಮಾತನಾಡಿದ ಮೋದಿ, ಕಳೆದ ಹತ್ತು ವರ್ಷಗಳಲ್ಲಿ ದೇಶ ಅತ್ಯುನ್ನತ ಅಭಿವೃದ್ಧಿ ಪಥಕ್ಕೆ ಏರಿದೆ. ಈ ಪ್ರಗತಿಗೆ ದೃಷ್ಟಿ ಬೀಳಬಾರದೆಂದು ಖರ್ಗೆ ಅವರು ಕಪ್ಪು ಬೊಟ್ಟು ಇಟ್ಟಿದ್ದಾರೆ ಎಂದು ನಾವು ಭಾವಿಸುತ್ತೇವೆ. ಕೆಲವು ರಾಜ್ಯಸಭಾ ಸದಸ್ಯರು ಕಪ್ಪು ಬಟ್ಟೆ ಧರಿಸಿ ಬಂದಿರುವುದನ್ನು ಪ್ರಸ್ತಾಪಿಸಿದ ಮೋದಿ. “ರಾಜ್ಯಸಭೆಯಲ್ಲಿ ಫ್ಯಾಷನ್ ಪರೇಡ್ ಸಹ ನೋಡಿದ್ದೇವೆ’ ಎಂದು ಚುಚ್ಚಿದರು.