Advertisement

CM DCM ಹೇಳಿಕೆ ನಿಲ್ಲಿಸದಿದ್ದರೆ ಶೋಕಾಸ್‌ ನೋಟಿಸ್‌: ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಎಚ್ಚರಿಕೆ

01:09 AM Jul 02, 2024 | Team Udayavani |

ಬೆಂಗಳೂರು: ದಿಲ್ಲಿಯಲ್ಲಿ ವರಿಷ್ಠರನ್ನು ಭೇಟಿಯಾಗಿ ಬರುತ್ತಿದ್ದಂತೆ ರಾಜ್ಯ ಕಾಂಗ್ರೆಸ್‌ನಲ್ಲಿ ಭುಗಿಲೆದ್ದಿರುವ ಬಣ ಬೇಗುದಿಗೆ ತಡೆ ಹಾಕಲು ರಾಜ್ಯ ಕಾಂಗ್ರೆಸ್‌ ನಾಯಕರು ಮುಂದಾಗಿದ್ದಾರೆ. ಸಿಎಂ-ಡಿಸಿಎಂ ಕುರಿತು ಬೇಕಾಬಿಟ್ಟಿ ಹೇಳಿಕೆ ನೀಡುವವರಿಗೆ ಶೋಕಾಸ್‌ ನೋಟಿಸ್‌ ಜಾರಿಗೊ ಳಿಸಲು ನಿರ್ಧರಿಸಿದ್ದಾರೆ.

Advertisement

ವಿವಾದದ ಹಿನ್ನೆಲೆಯಲ್ಲಿ ಸೋಮವಾರ ಕೆಪಿಸಿಸಿ ಕಚೇರಿಯಲ್ಲಿ ಪಕ್ಷದ ಪದಾಧಿಕಾರಿಗಳ ಸಭೆ ನಡೆಸಿದ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಬಾಯಿಗೆ ಬಂದಂತೆ ಹೇಳಿಕೆ ನೀಡುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಲೋಕಸಭಾ ಚುನಾವಣೆಯ ಅನಂತರ ಪಕ್ಷದಲ್ಲಿ ಬಣ ರಾಜಕಾರಣ ತೀವ್ರಗೊಂಡಿದ್ದು, ಎರಡೂ ಬಣಗಳ ಮುಖಂಡರು ತಮ್ಮ ಎದುರಾಳಿಗಳ ವಿರುದ್ಧ ಬಹಿರಂಗವಾಗಿಯೇ ಹೇಳಿಕೆ ನೀಡುತ್ತಿದ್ದಾರೆ. ಇದು ಪಕ್ಷಕ್ಕೆ ಮುಜುಗರ ಉಂಟುಮಾಡುವ ಹಂತಕ್ಕೆ ತಲುಪಿದೆ. ಈ ಬೆಳವಣಿಗೆಗಳು ಹೈಕಮಾಂಡ್‌ ಗಮನವನ್ನೂ ಸೆಳೆಯುತ್ತಿವೆ. ಹೀಗಾಗಿ ಹೇಳಿಕೆ ನೀಡುವವರಿಗೆ ಮೂಗುದಾರ ಹಾಕಲು ತೀರ್ಮಾನಿಸಲಾಗಿದೆ. ಅದರ ಭಾಗವಾಗಿ ಹೇಳಿಕೆ ನೀಡಿದವರೆಲ್ಲರಿಗೂ ನೋಟಿಸ್‌ ಜಾರಿಯಾಗಲಿದೆ.

ಸೋಮವಾರ ಕೆಪಿಸಿಸಿ ಕಚೇರಿಯಲ್ಲಿ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಡಿ.ಕೆ. ಶಿವಕುಮಾರ್‌, ಪಕ್ಷದ ಆಂತರಿಕ ವಲಯದಲ್ಲಿ ಆಗಬೇಕಾದ ಚರ್ಚೆಗಳ ಬಗ್ಗೆ ಬಹಿ ರಂಗ ಹೇಳಿಕೆ ನೀಡಿದವರಿಗೆ ಶೋಕಾಸ್‌ ನೋಟಿಸ್‌ ಜಾರಿ ಮಾಡಲಿದ್ದೇನೆ ಎಂದು ತಿಳಿಸಿದರು.

ನೀವು ಸಿಎಂ ಆಗಬೇಕು ಎಂದು ಶಾಸಕ ಬಸವರಾಜ ಶಿವಗಂಗಾ ಹೇಳಿದ್ದಾರೆ. ಸಚಿವ ಕೆ.ಎನ್‌. ರಾಜಣ್ಣ ಡಿಸಿಎಂ ಹುದ್ದೆಗಳ ಸೃಷ್ಟಿ ಬಗ್ಗೆ ಪದೇಪದೆ ಮಾತನಾಡುತ್ತಿದ್ದಾರೆ ಎಂದು ಕೇಳಿದಾಗ, ಶೀಘ್ರದಲ್ಲೇ ಕಾರಣ ಕೇಳಿ ನೋಟಿಸ್‌ ಜಾರಿ ಮಾಡಲಿ ದ್ದೇನೆ. ಯಾರಿಗೆಲ್ಲ ಜಾರಿಯಾಗುತ್ತದೆ ಎಂಬುದನ್ನು ನೋಡುತ್ತಿರಿ ಎಂದರು.

Advertisement

ಆಮೇಲೆ ಅದರ ಬಗ್ಗೆ ಕೇಳಿ ಎನ್ನುವ ಮೂಲಕ ವಿವಾದಿತ ಹೇಳಿಕೆ ನೀಡುವವರಿಗೆ ಎಚ್ಚರಿಕೆ ನೀಡಿದರು.

ಕಾರ್ಯಕರ್ತರ ಸಭೆ ಶಾಸಕರ ಮನೆಯಲ್ಲಿಲ್ಲ
ಸಚಿವರ ಸಹಿತ ಪಕ್ಷದ ಶಾಸಕರು ತಮ್ಮ ಮನೆಗಳಲ್ಲಿ ಕಾರ್ಯಕರ್ತರ ಸಭೆಗಳನ್ನು ನಡೆಸುವಂತಿಲ್ಲ. ಬೇಕಿದ್ದರೆ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಲಿ. ಆದರೆ ಕಾರ್ಯಕರ್ತರ ಸಭೆಗಳನ್ನು ಮಾತ್ರ ಕಡ್ಡಾಯವಾಗಿ ಪಕ್ಷದ ಕಚೇರಿಗಳಲ್ಲಿ ಮಾಡಬೇಕು. ಒಂದು ವೇಳೆ ಪಕ್ಷದ ಸಭಾಂಗಣ ಸಾಲದಿದ್ದರೆ ಸಮುದಾಯ ಭವನ ಬಾಡಿಗೆ ತೆಗೆದುಕೊಂಡು ಅಲ್ಲಿ ಸಭೆಗಳನ್ನು ನಡೆಸಲಿ. ಈ ಸಂಬಂಧ ಪದಾಧಿಕಾರಿಗಳ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದರು.

ಇದಕ್ಕೂ ಮುನ್ನ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಶಿವಕುಮಾರ್‌, ಸಿಎಂ-ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ವದಂತಿಗೆಲ್ಲ ಕಿವಿಗೊಡಬೇಡಿ. ಅದರಲ್ಲಿ ಯಾವುದೇ ಹುರುಳಿಲ್ಲ. ಪಕ್ಷ ಸಂಘಟನೆ ಕಡೆಗೆ ಲಕ್ಷ್ಯ ವಹಿಸಿ. ಮುಂಬರುವ ಚುನಾವಣೆಗಳಲ್ಲಿ ನಿರೀಕ್ಷಿತ ಗೆಲುವು ಸಾಧಿಸಬೇಕು ಎಂದು ಸೂಚಿಸಿದರು ಎನ್ನಲಾಗಿದೆ.

ನೀವು ಮೊದಲು ಓದಿದ್ದು ಇಲ್ಲೇ
ಕಾಂಗ್ರೆಸ್‌ನಲ್ಲಿ ಒಳಬೇಗುದಿ ಇರುವ ಹಿನ್ನೆಲೆಯಲ್ಲಿ ಸೋಮವಾರ ಕೆಪಿಸಿಸಿ ಸಭೆ ನಡೆಯಲಿದೆ ಎಂದು ಉದಯವಾಣಿ ನಿನ್ನೆಯೇ ವರದಿ ಮಾಡಿತ್ತು.

ಸೋಲಿನ ಪರಾಮರ್ಶೆಗೆ ಸತ್ಯಶೋಧನ ಸಮಿತಿ: ಡಿಕೆಶಿ
ಬೆಂಗಳೂರು: ಲೋಕಸಭಾ ಚುನಾವ ಣೆಯ ಸೋಲಿನ ಪರಾಮರ್ಶೆಗೆ ಮುಂದಾಗಿ ರುವ ಕೆಪಿಸಿಸಿಯು ಈ ಸಂಬಂಧ ಹಿರಿಯ ನಾಯಕರನ್ನು ಒಳಗೊಂಡ ಸತ್ಯಶೋಧನ ಸಮಿತಿ ರಚಿಸಲು ನಿರ್ಧರಿಸಿದೆ. ಈಗಾಗಲೇ ಎಐಸಿಸಿಯು ಸಮಿತಿ ರಚಿಸಿದ್ದು, ಅದು ಎಲ್ಲ ಜಿಲ್ಲೆಗಳಿಗೆ ಭೇಟಿ ನೀಡಿ ವರದಿ ಸಂಗ್ರಹಿಸುತ್ತಿದೆ. ಈ ವರದಿಯನ್ನು ಎಐಸಿಸಿ ಸಮಿತಿಗೆ ಸಲ್ಲಿಸಲಾಗುವುದು ಎಂದು ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ನಾನು ಯಾವುದೇ
ಕಾರಣಕ್ಕೂ ಸಿಎಂ, ಡಿಸಿಎಂ ಬದಲಾವಣೆ ಬಗ್ಗೆ ಬಹಿರಂಗ ಹೇಳಿಕೆಗಳಿಗೆ ಬೆಂಬಲ ನೀಡುವುದಿಲ್ಲ. ಪಕ್ಷದ ನಿಯಮ ಮೀರಿ ಸಿಎಂ, ಡಿಸಿಎಂ ಬದಲಾವಣೆ ಬಗ್ಗೆ ಮಾತನಾಡುವವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು.
-ಡಿ.ಕೆ. ಶಿವಕುಮಾರ್‌, ಕೆಪಿಸಿಸಿ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next