ಪುತ್ತೂರು: ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಿಕೊಂಡು ಬೆಳೆಸುವ ನಿಟ್ಟಿನಲ್ಲಿ ಸರಕಾರ ಇಚ್ಛಾಶಕ್ತಿ ತೋರಬೇಕು ಎಂದು ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ಪೂರ್ವಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಹೇಳಿದರು.
ಮೂರು ದಿನಗಳಿಂದ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕ ಹಾಗೂ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಶ್ರಯದಲ್ಲಿ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ನಡೆದ ಪುಸ್ತಕ ಮೇಳ, ಸಾಹಿತ್ಯ ಉತ್ಸವ, ಮಕ್ಕಳಿಗೆ ಅಭಿನಂದನೆ ಹಾಗೂ ಕೃತಿಗಳ ಬಿಡುಗಡೆ ಕಾರ್ಯಕ್ರಮದ ಸಮಾರೋಪ ಸಮಾ ರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕನ್ನಡಿಗರಿಗೆ ತಮ್ಮನ್ನು ಕನ್ನಡಿಗರು ಎಂದು ಹೇಳಿಕೊಳ್ಳುವುದಕ್ಕೇ ನಾಚಿಕೆ ಪಡುವ ಪರಿಸ್ಥಿತಿ ಉಂಟಾಗಿದೆ. ಹೀಗಾದರೆ ಕನ್ನಡ ಭಾಷೆಯನ್ನು ಉಳಿಸುವುದು ಹೇಗೆ? ಕರ್ನಾಟಕದಲ್ಲಿ ಕನ್ನಡಕ್ಕೆ ಮೊದಲ ಪ್ರಾಶಸ್ತ್ಯ ನೀಡಬೇಕು. ಈ ವಿಷಯದಲ್ಲಿ ಸರಕಾರಕ್ಕೆ ಇಚ್ಚಾಶಕ್ತಿ ಬೇಕು. ಆದರೂ ಸರಕಾರ ಮಾಡದ ಕೆಲಸವನ್ನು ಕನ್ನಡ ಸಾಹಿತ್ಯ ಪರಿಷತ್‌ಗಳು ಮಾಡುತ್ತಿರುವುದು ಶ್ಲಾಘನೀಯ ಎಂದರು.
ಸಾಹಿತ್ಯಕ್ಕೆ ಕಿವಿ ಕೊಡಿ
ಸಮಾರೋಪ ಭಾಷಣ ಮಾಡಿದ ಪುತ್ತೂರು ಸ.ಪ್ರ.ದ. ಮಹಿಳಾ ಕಾಲೇಜು ಸಹಪ್ರಾಧ್ಯಾಪಕ ಡಾ| ನರೇಂದ್ರ ರೈ ದೇರ್ಲ, ಸಂಬಂಧಗಳು ಸಹವಾಸದ ನೆಲೆಯಲ್ಲಿ ಅಂಟಿಕೊಂಡಿಲ್ಲ. ಸಾಹಿತ್ಯ, ಕನ್ನಡ ಭಾಷೆಯನ್ನು ಉಳಿಸಬೇಕಾದರೆ ಪುಸ್ತಕಕ್ಕೆ, ಸಾಹಿತ್ಯಕ್ಕೆ ಕಿವಿಗೊಡಬೇಕು. ಆಗ ಬದುಕುವುದು ಹೇಗೆ ಎಂಬುದು ಗೊತ್ತಾಗುತ್ತದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಕಲಾ ಪೋಷಕ ಬಲರಾಮ ಆಚಾರ್ಯ ಮಾತನಾಡಿದರು. ಮುಖ್ಯ ಅತಿಥಿಯಾಗಿ ಸ್ವರ್ಣೋದ್ಯಮಿ, ಸಾಹಿತ್ಯ ಪೋಷಕ ಮುಳಿಯ ಶ್ಯಾಮ್ ಭಟ್ ಪಾಲ್ಗೊಂಡಿದ್ದರು. ತಾಲೂಕು ಕಸಾಪ ಅಧ್ಯಕ್ಷ ಬಿ. ಐತ್ತಪ್ಪ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಕಾಶ್ ಕೊಡಂಕಿರಿ, ಸುಹಾಸ್ ಮರಿಕೆ, ಎ.ವಿ. ನಾರಾಯಣ, ವಿ.ಬಿ. ಅರ್ತಿಕಜೆ, ಸಿದ್ದು ಅತಿಥಿಗಳನ್ನು ಗೌರವಿಸಿದರು. ವಿದ್ಯಾರ್ಥಿನಿ ಜ್ಯೋತಿ ರಾವ್ ಎಚ್. ಸ್ವಾಗತಿಸಿ, ನಿವೃತ್ತ ಅಧ್ಯಾಪಕಿ ಪ್ರೊ| ವತ್ಸಲಾರಾಜಿ ವಂದಿಸಿದರು. ವಿದ್ಯಾರ್ಥಿನಿ ಸೌಜನ್ಯಾ ನಿರ್ವಹಿಸಿದರು.