ಕುಂಬಳೆ: ಕುಂಬಳೆ ಮುಟ್ಟಂ ನಿವಾಸಿ, ತಲಪಾಡಿಯಲ್ಲಿ ಬಾರ್ ನಡೆಸುತ್ತಿರುವ ಶ್ರೀಧರ ಶೆಟ್ಟ ಅವರಿಗೆ ಕೆಲವು ದಿನಗಳ ಹಿಂದೆ ಕೋಟಿ ರೂ. ನೀಡಬೇಕೆಂದು ದೂರವಾಣಿ ಕರೆಯ ಮೂಲಕ ಹಾಗೂ ನಾಲ್ವರ ತಂಡ ಮನೆಗೆ ಬಂದು ಬಂದೂಕು ತೋರಿಸಿ ಬೆದರಿಕೆಯೊಡ್ಡಿದ ಘಟನೆ ಸಂಬಂಧಿಸಿದಂತೆ ಕುಂಬಳೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಕುಂಬಳೆ ಮುಟ್ಟಂ ನಿವಾಸಿ ಶ್ರೀಧರ ಶೆಟ್ಟಿ (67) ಅವರಿಗೆ ಭೂಗತ ತಂಡದಿಂದ ಬೆದರಿಕೆ ಬಂದಿದ್ದು, ಕಳೆದ ಒಂದು ತಿಂಗಳಿಂದ ಬ್ಯಾಂಕಾಕ್‌ನಿಂದ ಎಂದು ಹೇಳಿ ನಿರಂತರ ಫೋನ್ ಕರೆ ಬರುತ್ತಲೇ ಇದೆ. ಕೋಟಿ ರೂಪಾಯಿ ನೀಡಬೇಕೆಂದು ಬೇಡಿಕೆ ಇಟ್ಟಿರುವುದಾಗಿ ಪೊಲೀಸರಿಗೆ ತಿಳಿಸಿದ ದೂರಿನಲ್ಲಿ ತಿಳಿಸಲಾಗಿದೆ.
ಫೋನ್ ಕರೆಯ ಬೆನ್ನಿಗೆ ಮಾ. 3ರಂದು ಸ್ವಿಫ್ಟ್ ಕಾರಿನಲ್ಲಿ ಮನೆಗೆ ಬಂದ ನಾಲ್ವರ ತಂಡ ಬಂದೂಕು ತೋರಿಸಿ ಬೆದರಿಕೆ ನೀಡಿದ್ದಾಗಿ ಕುಂಬಳೆ ಪೊಲೀಸರಿಗೆ ದೂರು ನೀಡಿದ್ದಾರೆ.
ಕಾರಿನಲ್ಲಿ ಬಂದ ವ್ಯಕ್ತಿಗಳು ಕನ್ನಡ ಭಾಷೆಯಲ್ಲಿ ಮಾತನಾಡಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ. ಆರೋಪಿಗಳ ಫೋಟೋ ಮತ್ತು ಸಿಸಿಟಿವಿ ದೃಶ್ಯಗಳು ಪೊಲೀಸರಿಗೆ ಲಭಿಸಿವೆ. ಕೇರಳ ನೋಂದಣಿಯ ಸ್ವಿಫ್ಟ್ ಕಾರಿನಲ್ಲಿ ಈ ತಂಡ ಬಂದಿರುವುದಾಗಿ ಮಾಹಿತಿ ಲಭಿಸಿದೆ. ಕಾರನ್ನು ಬಾಡಿಗೆಗೆ ಪಡೆದುಕೊಂಡಿದ್ದಾಗಿ ತನಿಖೆಯಿಂದ ಪೊಲೀಸರಿಗೆ ಮಾಹಿತಿ ಲಭಿಸಿದೆ.
ಬೆದರಿಕೆಯ ಬಗ್ಗೆ ಮಂಗಳೂರು ಪೊಲೀಸರಿಗೂ ದೂರು ನೀಡಲಾಗಿದೆ. ಕುಂಬಳೆ ಸಿಐ ವಿ.ವಿ. ಮನೋಜ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ತಿಂಗಳ ಹಿಂದೆ ಕೊಲೆಗೀಡಾದ ಕಾಲಿಯಾ ರಫೀಕ್ ಹಣಕ್ಕಾಗಿ ಶ್ರೀಧರ ಶೆಟ್ಟಿ ಅವರಿಗೆ ಬೆದರಿಕೆಯೊಡ್ಡಿರುವುದಾಗಿ ಪೊಲೀಸರಿಗೆ ತಿಳಿಸಲಾಗಿದೆ.