ಅಫಜಲಪುರ: ಅಂಗವೈಕಲ್ಯ ಶಾಪವಲ್ಲ. ಅಂಗವಿಕಲರಿಗೆ ಹೆಚ್ಚು ಅವಕಾಶ ಕಲ್ಪಿಸುವ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕಾದ ಅನಿವಾರ್ಯತೆ ಇದೆ ಎಂದು ರಾಜ್ಯಸಭಾ ಸದಸ್ಯ ಬಸವರಾಜ ಪಾಟೀಲ ಸೇಡಂ ಹೇಳಿದರು.
ತಾಲೂಕಿನ ಮಣೂರ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಿವಿದೊದ್ದೇಶ ಸಂಘ ಹಾಗೂ ಸ್ವಾಮಿ ವಿವೇಕಾನಂದರ 154ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಅಂಗವಿಕಲರನ್ನು ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಅವರ ಸರ್ಕಾರ ಹೆಚ್ಚಿನ ಸವಲತ್ತು ನೀಡಬೇಕು.
ಅಲ್ಲದೆ ಹಲವಾರು ಕ್ಷೇತ್ರದಲ್ಲಿ ಸಾಧನೆ ಮಾಡಿದ ಅಂಗವಿಕಲರನ್ನು ಗುರುತಿಸುವ ಕೆಲಸವಾಗಬೇಕು. ಇಂದಿನ ಯುವ ಪೀಳಿಗೆ ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಪಾಲಿಸಿ ಉತ್ತಮ ನಾಗರಿಕರಾಗಿ ಬಾಳಬೇಕು ಎಂದು ಕಿವಿಮಾತು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಎಂ.ವೈ. ಪಾಟೀಲ ಮಾತನಾಡಿ, ಅಂಗವಿಕಲತೆ ಎನ್ನುವುದು ಶಾಪವಲ್ಲ.
ಅಂಗವಿಕಲರು ಕೂಡ ಎಲ್ಲರಂತೆ ಸಾಕಷ್ಟು ಸಾಧನೆ ಮಾಡಿದ್ದಾರೆ. ಹೀಗಾಗಿ ಅಂಗವಿಕಲರಿಗೆ ಅನುಕಂಪಕ್ಕಿಂತ ಅವಕಾಶ ಸೃಷ್ಟಿಸಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು. ಅಫಜಲಪುರ ಮಳೇಂದ್ರ ಮಠದ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು, ಶಂಭುಲಿಂಗ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಬಿಜೆಪಿ ತಾಲೂಕು ಅಧ್ಯಕ್ಷ ಸೂರ್ಯಕಾಂತ ನಾಕೇದಾರ, ತಾಪಂ ಉಪಾಧ್ಯಕ್ಷ ಭೀಮಾಶಂಕರ ಹೊನ್ನಕೇರಿ, ಪ್ರಮುಖರಾದ ಮಾದೇವಗೌಡ ಕರೂಟಿ, ಮತೀನ್ ಪಟೇಲ್, ಹಾಜಿಸಾಬ್ ಮುತವಲಿ, ಶಿವಾನಂದ ಗಾಡಿಸಾಹುಕಾರ, ಶಂಕರರಾವ ಹುಲ್ಲೂರ, ರಾಚಪ್ಪ ಕೊಪ್ಪ, ಸಿದ್ರಾಮಪ್ಪ ಹಿರೇಕುರುಬರ್, ಮಾಳಪ್ಪ ಪೂಜಾರಿ, ಕಾಳಪ್ಪ ಸೂತಾರ, ಟಿ.ಕೆ. ಮಲಗೊಂಡ, ಚನ್ನಬಸಯ್ಯ ಹಿರೇಮಠ, ಅಂಬರೀಷ ಮೇತ್ರೆ, ಬಾಬುರಾವ ಮಾಶಾಳ, ಅಂಬರೀಷ ಬುರಲಿ, ಸಿ.ಎಸ್. ಪಾಟೀಲ, ಮಲ್ಲಿಕಾರ್ಜುನ ಹಿಟ್ನಳ್ಳಿ ಇದ್ದರು.