ಬೆಂಗಳೂರು: ಪೂರ್ವನಿಯೋಜಿತವಾಗಿ ದೊಂಬಿ, ಲೂಟಿ ಮಾಡಲು ಮುಂದಾದರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಡಿ.ವಿ.ಸದಾನಂದ ಗೌಡ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದರು.
ಭಾರತೀಯ ಮಜೂದ್ದುರ್ ಸಂಘದಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂಥಹ ಘಟನೆ ನಡೆಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಬೇಕು. ಕರಾವಳಿ ಸಹಿತವಾಗಿ ರಾಜ್ಯದ ಯಾವ ಭಾಗದಲ್ಲೂ ಇಂತಹ ಘಟನೆ ನಡೆಯದಂತೆ ನೋಡಿಕೊಳ್ಳಬೇಕು. ತಪ್ಪಿತಸ್ತರನ್ನು ದೇಶದ್ರೋಹದ ಕಾನೂನಿನಡಿ ಪ್ರಕರಣ ದಾಖಲಿಸಿ, ಬಂಧಿಸಿ, ಕಾನೂನಿನ ಕ್ರಮ ತೆಗೆದುಕೊಳ್ಳಬೇಕು ಎಂದರು.
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಕರಾವಳಿಯಲ್ಲಿ ನಡೆದ ಪ್ರತಿಭಟನೆ ವೇಳೆ ಸಂಭವಿಸಿದ ಹಿಂಸಾಚಾರದ ಬಗ್ಗೆ ಯಾವುದೇ ಹೊಂದಾಣಿಕೆ ಇಲ್ಲ. ಸಿಸಿಟಿವಿ ದೃಶ್ಯವಳಿ ಹಾಗೂ ಇತರೆ ದಾಖಲೆಗಳನ್ನು ನೋಡಿಸ ಮೇಲೆ ಇದೊಂದು ಪೂರ್ವ ನಿಯೋಜಿತ ಕೃತ್ಯ ಹಾಗೂ ದೊಂಬಿ, ಲೂಟಿ ಹೊಡೆಯಲು ಇದನ್ನು ಮಾಡಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಾಣುತ್ತದೆ ಎಂದು ಹೇಳಿದರು.
ಕೇರಳದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕಾರ ಮೇಲೆ ನಡೆದ ದಾಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಎಲ್ಲೆಲ್ಲಿ ಕಮ್ಯೂನಿಸ್ಟ್ ಆಡಳಿತ ಇದೆ, ಅದು ಕೇರಳ ಆಗಿರಬಹುದು ಅಥವಾ ಪಶ್ಚಿಮ ಬಂಗಾಲ ಆಗಿರಬಹುದು. ಅವರಿಗೆ ಬೇರೇನೂ ಕೆಲಸ ಇಲ್ಲ. ಅಧಿಕಾರದಲ್ಲಿ ಇರಲಿ ಅಥವಾ ಇಲ್ಲದಿರಲಿ, ಕುಚೋದ್ಯವೇ ಅವರ ಬಂಡವಾಳ ಎಂದು ವಾಗ್ಧಾಳಿ ನಡೆಸಿದರು.
ಸಾಮಾನ್ಯವಾಗಿ ಸರ್ಕಾರಗಳು ಈ ರೀತಿ ಘಟನೆಯಾದಾಗ (ಮಂಗಳೂರು ಗಲಭೆ) ಮೃತಪಟ್ಟವರ ಕುಟುಂಬಕ್ಕೆ ಸಾಂತ್ವನ ಹೇಳುವುದು ಇರುತ್ತದೆ. ತಪ್ಪಿತಸ್ಥ ಸಾವನ್ನಪ್ಪಿದರೂ, ಅವರ ಕುಟುಂಬದವರು ಏನು ಮಾಡಿಲ್ಲ. ಕುಟುಂಬದವರು ಅವನನ್ನು ಕಳೆದುಕೊಂಡಿದ್ದಾರೆ. ಸತ್ತವ ಅಪರಾಧಿಯೋ ಅಲ್ಲವೋ ಎನ್ನುವುದನ್ನು ನೋಡುವ ಮೊದಲೇ ಸರ್ಕಾರದಿಂದ ಪರಿಹಾರ ಘೋಷಿಸಿದ್ದರು ಅಷ್ಟೆ.
– ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವ