Advertisement

ತಪ್ಪಿಸಿಕೊಂಡ ಸರಗಳ್ಳನ ಕಾಲಿಗೆ ಗುಂಡೇಟು

11:58 AM Jun 19, 2018 | Team Udayavani |

ಬೆಂಗಳೂರು: ಬ್ಲಾಕ್‌ ಪಲ್ಸರ್‌ನಲ್ಲಿ ಬಂದು ಮಹಿಳೆಯರ ಸರ ಕಸಿದು ಪರಾರಿಯಾಗುತ್ತಿದ್ದ ಮೋಸ್ಟ್‌ ವಾಂಟೆಡ್‌ ಹಾಗೂ ನೂರಕ್ಕೂ ಹೆಚ್ಚು ಸರಗಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಗೆ ಪೊಲೀಸರು ಗುಂಡೇಟಿನ ಉತ್ತರ ನೀಡಿ ಬಂಧಿಸಿದ್ದಾರೆ.

Advertisement

ಅಚ್ಯುತ್‌ಕುಮಾರ್‌ ಅಲಿಯಾಸ್‌ ಗಣಿ (31) ಬಂಧಿತ. ಭಾನುವಾರ ರಾತ್ರಿಯಿಂದ ಸೋಮವಾರ ಮುಂಜಾನೆವರೆಗೂ ಸತತ ಕಾರ್ಯಾಚರಣೆ ನಡೆಸಿದ ಪಶ್ಚಿಮ ವಿಭಾಗದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಸಫ‌ಲರಾಗಿದ್ದಾರೆ.

ಸರಗಳವು ಮಾಡಿ ಪರಾರಿಯಾಗುತ್ತಿದ್ದ ಅಚ್ಯುತ್‌ನನ್ನು ಪೊಲೀಸರು ಬೆನ್ನಟ್ಟಿ ಬಂಧಿಸಿದರಾದರೂ ಮೂತ್ರ ವಿಸರ್ಜನೆ ನೆಪದಲ್ಲಿ ಪೊಲೀಸರಿಂದ ತಪ್ಪಿಸಿಕೊಂಡಿದ್ದು ಮತ್ತೆ ಕಾರ್ಯಾಚರಣೆ ನಡೆಸಿ ಹಿಡಿಯಲು ಯತ್ನಿಸಿದಾಗ ಪೊಲೀಸರ ಮೇಲೆಯೇ ಹಲ್ಲೆಗೂ ಮುಂದಾದ. ಕಾಲಿಗೆ ಗುಂಡು ಹಾರಿಸಿ ಪೊಲೀಸರು ಆತನನ್ನು ಬಂಧಿಸಿದರು.

ಕೆಂಗೇರಿ ಸುತ್ತಮುತ್ತ ಮಹಿಳೆಯರಲ್ಲಿ ಆತಂಕ ಸೃಷ್ಟಿಸಿದ್ದ ಅಚ್ಯುತ್‌ ಮೊದಲಬಾರಿಗೆ ಪೊಲೀಸರ ಬಲೆಗೆ ಬಿದ್ದಿದ್ದು, ನಗರದಲ್ಲಿ ಅಷ್ಟೇ ಅಲ್ಲದೆ ತುಮಕೂರು, ರಾಮನಗರ ಸೇರಿ ಹಲವೆಡೆ ಕೃತ್ಯ ಎಸಗಿರುವ ಮಾಹಿತಿ ಲಭ್ಯವಾಗಿದೆ. ನೂರಕ್ಕೂ ಹೆಚ್ಚು ಸರಗಳವು ಪ್ರಕರಣಗಳಲ್ಲಿ ಭಾಗಿಯಾಗಿರುವ ಸಾಧ್ಯತೆಯಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

ಘಟನೆ ವಿವರ: ಭಾನುವಾರ ರಾತ್ರಿ 8 ಗಂಟೆ ಸುಮಾರಿಗೆ ಕೆಂಗೇರಿ ರೈಲ್ವೆ ಮೇಲ್ಸೇತುವೆ ಬಳಿ ಮಹಿಳೆಯೊಬ್ಬರಿಂದ ಸರ ಕಸಿದು ಪರಾರಿಯಾಗುತ್ತಿದ್ದ. ಈ ಕುರಿತು ಗಸ್ತಿನಲ್ಲಿದ್ದ ಜ್ಞಾನಭಾರತಿ ಪೊಲೀಸ್‌ ಠಾಣೆ ಮುಖ್ಯ ಪೇದೆ ಚಂದ್ರಕುಮಾರ್‌ಗೆ ಮಾಹಿತಿ ಲಭ್ಯವಾಗಿತ್ತು. ಚಂದ್ರಕುಮಾರ್‌, ನಾಗದೇವನಹಳ್ಳಿಯ ರಸ್ತೆಯಲ್ಲಿ ಪಲ್ಸರ್‌ ಬೈಕ್‌ನಲ್ಲಿ ಬರುತ್ತಿದ್ದ ಅಚ್ಯುತ್‌ಕುಮಾರ್‌ನನ್ನು ಅಡ್ಡಗಟ್ಟಿದ್ದ.

Advertisement

ಆದರೆ, ಆತ ಬೈಕ್‌ ನಿಲ್ಲಿಸದೆ ವೇಗವಾಗಿ ಹೋಗಲು ಮುಂದಾದ. ಪೇದೆ ತನ್ನ ಬೈಕ್‌ನಲ್ಲಿ ಸ್ವಲ್ಪ ದೂರ ಬೆನ್ನಟ್ಟಿ ದೂರ ಬೆನ್ನಟ್ಟಿ ಡಿಕ್ಕಿ ಹೊಡೆದು ಕೆಳಗೆ ಬಿದ್ದಾಗ ಹಿಡಿಯಲು ಮುಂದಾದ. ಆದರೆ ಅಚ್ಯುತ್‌, ಚಾಕುವಿನಿಂದ ಚಂದ್ರಕುಮಾರ್‌ ಕಾಲಿಗೆ ಇರಿದು ಪರಾರಿಯಾಗಲು ಯತ್ನಿಸಿದ. ಆ ವೇಳೆಗೆ ಸ್ಥಳಕ್ಕಾಗಮಿಸಿದ ಜ್ಞಾನಭಾರತಿ ಪೊಲೀಸರು ಬಂಧಿಸಿದರು.

ಮೂತ್ರವಿಸರ್ಜನೆ ನೆಪ: ಮಾಹಿತಿ ಕಲೆ ಹಾಕಲು ಕುಂಬಳಗೋಡು ಠಾಣೆಗೆ ಕರೆದೊಯ್ಯವ ಮಾರ್ಗಮಧ್ಯೆ ಮೂತ್ರವಿಸರ್ಜನೆ ಮಾಡುವ ನೆಪದಲ್ಲಿ ಕೆಂಗೇರಿ ಸ್ಯಾಟ್‌ಲೆçಟ್‌ ಕ್ಲಬ್‌ ಬಳಿ ಕೆಳಗೆ ಇಳಿದ ಅಚ್ಯುತ್‌ ತಪ್ಪಿಸಿಕೊಂಡಿದ್ದ. ತಕ್ಷಣ ಕೆಂಗೇರಿ ಠಾಣಾ ಇನ್ಸ್‌ಪೆಕ್ಟರ್‌ ಬಿ.ಕೆ ಶೇಖರ್‌, ಜ್ಞಾನಭಾರತಿ ಇನ್ಸ್‌ಪೆಕ್ಟರ್‌ ರಾಮಕೃಷ್ಣಯ್ಯ ನೇತೃತ್ವದಲ್ಲಿ ಮತ್ತೆ ಕಾರ್ಯಾಚರಣೆ ಪ್ರಾರಂಭಿಸಿದರು.

ಮುಂಜಾನೆ ಸಿಕ್ಕಿಬಿದ್ದ: ಮುಂಜಾನೆ 5-40ರ ಸುಮಾರಿಗೆ ಅಚ್ಯುತ್‌ಕುಮಾರ್‌ ಬನಶಂಕರಿ 6ನೇ ಹಂತ ಬಳಿ ಪೊಲೀಸರ ಕಣ್ಣಿಗೆ ಬಿದ್ದ. ಆಗ ಅಚ್ಯುತ್‌ಗೆ ಶರಣಾಗುವಂತೆ ಪೊಲೀಸರು ಸೂಚಿಸಿದರು. ಇದಕ್ಕೊಪ್ಪದ ಆತ ಎಎಸ್‌ಐ ವೀರಭದ್ರಯ್ಯ ಅವರ ಮೇಲೆ ಹಲ್ಲೆಗೆ ಯತ್ನಿಸಿ, ಕಲ್ಲುತೂರಾಟ ನಡೆಸಿದ್ದಾನೆ. ಗಾಳಿಗೆ ಗುಂಡು ಹಾರಿಸಿ ಎಚ್ಚರಿಸಿದರೂ ಶರಣಾಗದಿದ್ದಾಗ ಅಚ್ಯುತ್‌ ಬಲಗಾಲಿಗೆ ಗುಂಡು ಹೊಡೆದಿದ್ದಾರೆ.

ಆತ ಕೆಳಗೆ ಬಿದ್ದ ಕೂಡಲೇ ಬಂಧಿಸಿ ಚಿಕಿತ್ಸೆ ಕೊಡಿಸಲಾಯಿತು ಎಂದು ಪಶ್ಚಿಮ ವಲಯದ ಡಿಸಿಪಿ ರವಿ ಡಿ. ಚೆನ್ನಣ್ಣನವರ್‌ ತಿಳಿಸಿದರು. ಅಚ್ಯುತ್‌ಗೆ ಸದ್ಯ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಲಾಗಿದೆ. ಆತ, ಚೇತರಿಸಿಕೊಂಡ ಬಳಿಕ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗುವುದು ಎಂದು ಹೇಳಿದರು.

ವ್ಯಾಪ್ತಿ ಪ್ರದೇಶ: ಕುಂಬಳಗೋಡುವಿನ ಕಣ್‌ಮಿಣಕಿ ಕಾಲೋನಿಯ ನಿವಾಸಿಯಾಗಿರುವ ಅಚ್ಯುತ್‌ ಕುಮಾರ್‌, ಕಳೆದ ಐದು ತಿಂಗಳಿನಿಂದ ಸರಗಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಮುಂಜಾನೆ ಅಥವಾ ಸಂಜೆ ಹೆಲ್ಮೆಟ್‌ ಧರಿಸಿ ಕೆಂಗೇರಿ ರಿಂಗ್‌ ರಸ್ತೆ ಆಸುಪಾಸಿನಲ್ಲಿ ಸರಗಳವು ಮಾಡುತ್ತಿದ್ದ.

ಒಂಟಿಯಾಗಿ ನಡೆದುಕೊಂಡು ಹೋಗುವ ಮಹಿಳೆಯರು, ಕ್ಯಾಬ್‌ ಇಳಿದು ಬರುವವರನ್ನು ಟಾರ್ಗೆಟ್‌ ಮಾಡುತ್ತಿದ್ದ. ಒಮ್ಮೆ ರಸ್ತೆಗಿಳಿದರೆ ಕನಿಷ್ಠ ಮೂರರಿಂದ ನಾಲ್ಕು ಮಹಿಳೆಯರ ಬಳಿ ಸರಗಳವು ಮಾಡುತ್ತಿದ್ದ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

ಪೇದೆಗೆ ಲಕ್ಷ ರೂ. ಬಹುಮಾನ, ಪ್ರವಾಸ ಯೋಗ: ಕುಖ್ಯಾತ ಸರಗಳ್ಳನನ್ನು ಮೊದಲ ಬಾರಿಗೆ ಹಿಡಿಯುವಲ್ಲಿ ಯಶಸ್ವಿಯಾದ ಪಶ್ಚಿಮ ವಿಭಾಗದ ಡಿಸಿಪಿ ನೇತೃತ್ವದ ತಂಡದ ಕಾರ್ಯವನ್ನು ನಗರ ಪೊಲೀಸ್‌ ಆಯುಕ್ತರು ಶ್ಲಾ ಸಿದ್ದಾರೆ. ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದ ತಂಡಕ್ಕೆ ಒಂದು ಲಕ್ಷ ರೂ. ಬಹುಮಾನ ಘೋಷಿಸಿದ್ದಾರೆ.

ಹಾಗೆಯೇ ಆರೋಪಿಯನ್ನು ಹಿಡಿಯಲು ಕಾರಣವಾದ ಮುಖ್ಯ ಪೇದೆ ಚಂದ್ರಕುಮಾರ್‌ಗೆ ಒಂದು ಲಕ್ಷ ರೂ. ನಗದು ಬಹುಮಾನ ಹಾಗೂ ದಕ್ಷಿಣ ಭಾರತ ಪ್ರವಾಸದ ಪ್ಯಾಕೇಜ್‌, ಚಾಕು ಇರಿತಕ್ಕೆ ಒಳಗಾಗಿರುವದರಿಂದ ಚಿಕಿತ್ಸೆ ಹಾಗೂ ವಿಶ್ರಾಂತಿಗೆ ಒಂದು ತಿಂಗಳು ರಜೆ ನೀಡಿದ್ದಾರೆ.

ಗಂಡ ಕಳ್ಳ ಅಂತಾ ತಿಳಿದಿರಲಿಲ್ಲ: ಆರೋಪಿ ಕಳೆದ ಏಳು ತಿಂಗಳ ಹಿಂದಷ್ಟೆ ವಿಧವೆಯೊಬ್ಬರನ್ನು ಪ್ರೀತಿಸಿ ಮದುವೆಯಾಗಿದ್ದಾನೆ. ಘಟನೆ ಬಳಿಕ ಆತನ ಪತ್ನಿಯನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಲಾಯಿತು. ಮದುವೆಯಾದ ಬಳಿಕ ಎರಡು ಮೂರು ದಿನ ಮನೆಗೆ ಬರುತ್ತಿರಲಿಲ್ಲ. ಬೆಂಗಳೂರಿನಲ್ಲಿ ಕೆಲಸಕ್ಕೆ ಹೋಗುತ್ತೇನೆ ಎಂದಷ್ಟೇ ಹೇಳಿದ್ದ.

ಆದರೆ, ಸರಗಳವು ಮಾಡುತ್ತಿದ್ದ ಬಗ್ಗೆ ನನಗೆ ಮಾಹಿತಿಯಿಲ್ಲ ಎಂದು ಪತ್ನಿ ತಿಳಿಸಿದ್ದಾರೆ. ಇನ್ನು ಆರೋಪಿ ಅಚ್ಯುತ್‌ಗೆ ಸರಕದ್ದು ಮಾರಿದ ಹಣ ಏನು ಮಾಡಿದೆ ಎಂದು ಪ್ರಶ್ನಿಸಿದರೆ, ಹುಡುಗಿಯರ ಸಹವಾಸ ಜಾಸ್ತಿ ಸಾರ್‌, ವೇಶ್ಯೆಯರಿಗೆ ಬಹುತೇಕ ಹಣ ನೀಡಿದ್ದೇನೆ, ನಾನು ಉಳಿಸಿಕೊಂಡಿಲ್ಲ ಎನುತ್ತಾನೆ. ಹೀಗಾಗಿ, ಆರೋಪಿ ಕದ್ದ ಸರಗಳನ್ನು ಎಲ್ಲಿ ಇಟ್ಟಿದ್ದಾನೆ ತಿಳಿಯಬೇಕಿದೆ ಎಂದು ಪೊಲೀಸರು ತಿಳಿಸಿದರು.

ಗುಂಡೇಟು ಬಿದ್ದಿದ್ದು ಎಲ್ಲಿ?
ಸೋಮವಾರ ಮುಂಜಾನೆ 5-40
ಸ್ಥಳ: ಬನಶಂಕರಿ 6ನೇ ಹಂತ
ಗುಂಡು ಹಾರಿಸಿದ್ದು ಪಿಎಸ್‌ಐ ಪ್ರವೀಣ್‌ ಎಲಿಗಾರ್‌

Advertisement

Udayavani is now on Telegram. Click here to join our channel and stay updated with the latest news.

Next