Advertisement

ದುರ್ವಾಸನೆಯಿಂದ ಉಸಿರಾಟ ತೊಂದರೆ, ತಲೆನೋವು

01:30 AM Jul 20, 2019 | Sriram |

ಬಜಪೆ: ಒಂದು ವಾರದಿಂದ ಬಜಪೆ,ಪೆರ್ಮುದೆ, ಪೆರಾರ, ಕಂದಾವರ, ಗುರುಪುರ ಕೈಕಂಬ ಮತ್ತು ಆಸುಪಾಸಿನ ಪರಿಸರದಲ್ಲಿ ಸಹಿಸಲಸಾಧ್ಯವಾದ ದುರ್ವಾಸನೆ ಬರುತ್ತಿದ್ದು, ಸಾರ್ವಜನಿಕರಿಗೆ ಉಸಿರಾಟದ ಸಮಸ್ಯೆ, ತಲೆನೋವು,
ವಾಂತಿ ಮತ್ತಿತರ ತೊಂದರೆಗಳು ಉಂಟಾಗುತ್ತಿವೆ. ಕೈಗಾರಿಕೆಗಳು ಹೊರಸೂಸುವ ಅನಿಲ ಇದಕ್ಕೆ ಕಾರಣ ಎಂಬ ಸಂಶಯವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.
ವಾಸನೆಯಿಂದಾಗಿ ಗುರುವಾರ ಬಜಪೆ ಹೈಸ್ಕೂಲ್‌ ಒಂದರ 200ರಷ್ಟು ಮಂದಿ ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದು, ಪರಿಸರದ ಜನರು ತೀವ್ರ ಆತಂಕಗೊಂಡಿದ್ದಾರೆ.

Advertisement

ಈ ಹಿಂದೆ ಪೆಟ್ರೋಲ್‌ನಂತೆ ವಾಸನೆ ಬರುತ್ತಿತ್ತು. ಬಜಪೆ ಪರಿಸರದಲ್ಲಿ ಗಿಡಗಳ ಮೇಲೆ ಬೂದಿಯೂ ಕಂಡುಬಂದಿತ್ತು. ಈಗ ಯಾವುದೋ ಅನಿಲದಂತೆ ಕೆಟ್ಟ ವಾಸನೆ ಬರಲಾರಂಭಿಸಿದೆ. ಹೀಗಾಗಿ ಸಾರ್ವಜನಿಕರು ಗೊಂದಲದ ಜತೆಗೆ ಆತಂಕದಲ್ಲಿದ್ದಾರೆ.

ವಿದ್ಯಾರ್ಥಿಗಳು ಅಸ್ವಸ್ಥ
ರಾಸಾಯನಿಕ ವಾಸನೆಯಿಂದ ಗುರುವಾರ ಮಧ್ಯಾಹ್ನದ ವೇಳೆ ಬಜಪೆ ಹೈಸ್ಕೂಲ್‌ನ 150ರಿಂದ 200 ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ. ವಾಸನೆಯಿಂದಾಗಿ ತರಗತಿಯಲ್ಲಿ ಕುಳಿತುಕೊಳ್ಳಲು ಸಾಧ್ಯವಾಗದಂತಹ ಸ್ಥಿತಿ ಉಂಟಾಗಿದ್ದು, ಶಾಲಾ ಮುಖ್ಯೋಪಾಧ್ಯಾಯರು ಕೊಡಲೇ ಬಜಪೆ ಪ್ರಾ.ಆ. ಕೇಂದ್ರದ ವೈದ್ಯರನ್ನು ಕರೆಸಿದ್ದಾರೆ. ವೈದ್ಯರು ತಂಡದೊಂದಿಗೆ ಶಾಲೆಗೆ ಆಗಮಿಸಿ ವಿದ್ಯಾರ್ಥಿಗಳನ್ನು ಪರೀಕ್ಷಿಸಿ ಚಿಕಿತ್ಸೆ
ನೀಡಿದ್ದಾರೆ. ಜತೆಗೆ, ವಾಸನೆ, ಆರೋಗ್ಯ ಸಮಸ್ಯೆ ಬಗ್ಗೆ ಲಿಖೀತವಾಗಿ ದೂರು ಸಲ್ಲಿಸಲು ಸೂಚಿಸಿದ್ದಾರೆ.

ಇಂತಹ ಕೆಟ್ಟ ವಾಸನೆ ಲಘು ಪ್ರಮಾಣದಲ್ಲಿ ಒಂದು ವರ್ಷದಿಂದಲೇ ಇದೆ. ಆದರೆ ಯಾರೂ ಈ ಬಗ್ಗೆ ಗಮನ ನೀಡಿಲ್ಲ. ಒಂದು ವಾರದಿಂದ ವಾಸನೆಯ ತೀಕ್ಷ್ಣತೆ ಹೆಚ್ಚಿದೆ. ವಾಸನೆ ಕೊಳೆತ ಮೊಟ್ಟೆ, ಸಗಣಿ, ಮಲ ಇತ್ಯಾದಿಗಳ ವಾಸನೆಯ ಮಿಶ್ರಣದಂತಿದ್ದು, ಸಹಿಸಲು ಸಾಧ್ಯವಿಲ್ಲ. ಅದರ ಮೂಲವೂ ಗೊತ್ತಾಗುತ್ತಿಲ್ಲ. ಮಧ್ಯಾಹ್ನ ಮತ್ತು ಸಂಜೆ ತೀಕ್ಷ್ಣತೆ ಹೆಚ್ಚು. ಶಾಲೆಯಲ್ಲಿ ಮಕ್ಕಳು ಮೂಗಿಗೆ ಕೈ ಹಿಡಿದು ಕೂರುವ ಪರಿಸ್ಥಿತಿ ಇದೆ. ಈ ಬಗ್ಗೆ ಬಜಪೆ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಬಜಪೆ ಗ್ರಾ.ಪಂ.ಗೆ ಲಿಖೀತ ಮನವಿ ನೀಡಲಾಗುತ್ತದೆ ಎಂದು ಬಜಪೆ ಸೈಂಟ್‌ ಜೋಸೆಫ್Õ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಅಲ್ವಿನ್‌ ನೊರೊನ್ಹಾ ಹೇಳಿದ್ದಾರೆ.

ಕಲಿಕೆಗೂ ತೊಂದರೆ
ಈ ಕೆಟ್ಟ ವಾಸನೆಯಿಂದ ಪರಿಸರದ ಜನರಿಗೆ ಉಸಿರಾಟದ ತೊಂದರೆ, ವಾಂತಿ, ವಾಕರಿಕೆ, ಹೊಟ್ಟೆ ತೊಳಸಿದಂತಾಗುತ್ತದೆ. ನಮಗೆ ಕಲಿಕೆಯಲ್ಲಿ ಏಕಾಗ್ರತೆಗೆ ಅಡ್ಡಿಯಾಗುತ್ತದೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.

Advertisement

ಎತ್ತರ ಪ್ರದೇಶಗಳಿಗೆ ಹೆಚ್ಚು
ಕೆಟ್ಟ ವಾಸನೆ ಎತ್ತರ ಪ್ರದೇಶಗಳಲ್ಲಿ ಕಾಡುವುದು ಹೆಚ್ಚು. ಆಸುಪಾಸಿನಲ್ಲಿ ಹಲವಾರು ಕಂಪೆನಿಗಳಿದ್ದು, ವಿಶೇಷ ಆರ್ಥಿಕ ವಲಯವೂ ಇದೆ. ಯಾವ ಕಂಪೆನಿಯಿಂದ ಈ ದುರ್ವಾಸನೆ ಗಾಳಿಯನ್ನು ಸೇರುತ್ತಿದೆ ಎಂಬುದನ್ನು ಜಿಲ್ಲಾಡಳಿತವು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂಬುದಾಗಿ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಬಜಪೆ ಮತ್ತು ಆಸುಪಾಸಿನ ಪ್ರದೇಶದಲ್ಲಿ ಈ ಕೆಟ್ಟ ವಾಸನೆ ಬರುತ್ತಿದೆ. ಈ ಬಗ್ಗೆ ಗ್ರಾಮ ಪಂಚಾಯತ್‌ಗೆ ಮೌಖೀಕವಾಗಿ ದೂರು ನೀಡಲು ಸೂಚಿಸಲಾಗಿದೆ. ಆದರೆ ಇದುವರೆಗೆ ಯಾರೂ ಲಿಖೀತವಾಗಿ ದೂರು ನೀಡಿಲ್ಲ.
– ಸಾಯೀಶ್‌ ಚೌಟ, ಪಿಡಿಒ, ಬಜಪೆ

ವಾಸನೆ ಎಲ್ಲಿಂದ, ಹೇಗೆ ಬರುತ್ತದೆ ಎಂದು ಗೊತ್ತಿಲ್ಲ. ಶಾಲೆಯವರು ಮಕ್ಕಳ ಆರೋಗ್ಯ ದೃಷ್ಟಿಯಿಂದ ನನ್ನನ್ನು ಕರೆಸಿದ್ದಾರೆ. ಶಾಲೆಗೆ ಹೋಗಿ ಮಕ್ಕಳ ಆರೋಗ್ಯದ ಬಗ್ಗೆ ವಿಚಾರಿಸಿದ್ದೇನೆ. ವಾಸನೆ ಬರುತ್ತದೆ, ತೊಂದರೆ ಆಗುತ್ತಿದೆ ಎಂದು ತಮ್ಮ ಸಮಸ್ಯೆ ಹೇಳಿದ್ದಾರೆ. ಲಿಖೀತವಾಗಿ ಬಜಪೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮತ್ತು ಬಜಪೆ ಗ್ರಾಮ ಪಂಚಾಯತ್‌ಗೆ ದೂರು ನೀಡಿ ಎಂದು ಶಾಲೆಯವರಿಗೆ ತಿಳಿಸಲಾಗಿದೆ. ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು.
– ಡಾ| ಚೇತನ್‌
ಬಜಪೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ

ಗಂಜಿಮಠ, ಕಂದಾವರ, ಪೆರಾರ, ಮಳಲಿ, ಕಾಜಿಲ ಪ್ರದೇಶಕ್ಕೂ ಈ ವಾಸನೆ ಬರುತ್ತಿದ್ದು, ಯಾವುದೋ ಅನಿಲದಂತಿದೆ. ಇದರಿಂದ ಕೆಮ್ಮು, ಉಸಿರಾಟಕ್ಕೆ ತೊಂದರೆ ಆಗುತ್ತಿದೆ. ಜಿಲ್ಲಾಡಳಿತ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು.
-ನವೀನ್‌, ಕೈಕಂಬ ನಿವಾಸಿ

ಸುಂಕದಕಟ್ಟೆ ಪರಿಸರದಲ್ಲಿಯೂ ಈ ಕೆಟ್ಟ ವಾಸನೆ ಬರುತ್ತಿದೆ. ಮಧ್ಯಾಹ್ನ ವೇಳೆ ಹೆಚ್ಚು. ತಡೆಲಾಗದ ದುರ್ವಾಸನೆಯಿಂದ ಒಂದು ಬದಿ ತಲೆ ನೋವು ಆರಂಭವಾಗುತ್ತದೆ.
– ಹರೀಶ್‌ ಪೈ, ಕತ್ತಲ್‌ಸಾರ್‌ ನಿವಾಸಿ

Advertisement

Udayavani is now on Telegram. Click here to join our channel and stay updated with the latest news.

Next