ಮುಳಬಾಗಿಲು: ತಾಲೂಕಿನ ಗಡಿ ಗ್ರಾಮ ಹೆಬ್ಬಣಿ ಡಾ.ಬಿ.ಆರ್.ಅಂಬೇಡ್ಕರ್ ಕಾಲೋನಿಯಲ್ಲಿ 15 ದಿನಗಳಿಂದ ಕುಡಿಯುವ ನೀರಿಗೆ ಸಮಸ್ಯೆ ಉಂಟಾಗಿದೆ. ಪಿಡಿಒ ಚೌಹಾಣ್‌ಗೆ ಮನವಿ ನೀಡಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ದಲಿತ ಕುಟುಂಬಗಳು ಆರೋಪಿಸಿವೆ.
ಗ್ರಾಮದಲ್ಲಿ 450 ಮನೆಗಳಿದ್ದು, ಒಂದೂವರೆ ಸಾವಿರ ಜನಸಂಖ್ಯೆ ಇದೆ. ಕುಡಿಯುವ ನೀರಿಗಾಗಿ ಹಲವು ವರ್ಷಗಳ ಹಿಂದೆ ಕೊಳವೆಬಾವಿ ಕೊರೆಸಿದ್ದರೂ ಡಾ.ಬಿ.ಆರ್.ಅಂಬೇಡ್ಕರ್ ಕಾಲೋನಿಗೆ ಸರಿಯಾಗಿ ನೀರು ಪೂರೈಸುತ್ತಿಲ್ಲ. ಕಾಲೋನಿಯಲ್ಲಿ 20 ಮನೆಗಳಿದ್ದು, 3 ವರ್ಷಗಳ ಹಿಂದೆ ಟ್ಯಾಂಕ್ ಇಟ್ಟು, ವಾರಕ್ಕೆರಡು ಬಾರಿ ನೀರು ಸರಬರಾಜು ಮಾಡಲಾಗುತ್ತಿತ್ತು. ವರ್ಷದಿಂದ ವಾರಕ್ಕೊಮ್ಮೆ ಮಾತ್ರ ಟ್ಯಾಂಕ್‌ಗೆ ನೀರು ಹರಿಸುತ್ತಿದ್ದಾರೆ. ಅದರಲ್ಲಿನ ನೀರು ಪ್ರತಿ ಮನೆಗೆ ತಲಾ 2 ಬಿಂದಿಗೆ ಸಿಗುತ್ತದೆ.
ಪೈಪ್‌ಲೈನ್ ಹಾಕಿಲ್ಲ: ಗ್ರಾಮದಲ್ಲಿ ಎಲ್ಲಾ ಕುಟುಂಬಗಳಿಗೆ ಪೈಪ್‌ಲೈನ್ ಹಾಕಲಾಗಿದ್ದರೂ ದಲಿತ ಕಾಲೋನಿಗೆ ಮಾತ್ರ ಹಾಕಿಲ್ಲ. ಈ ಸಮಸ್ಯೆ ಬಗೆಹರಿಸಲು 15 ದಿನಗಳ ಹಿಂದೆ ಪಿಡಿಒಗೆ ಮನವಿ ಸಲ್ಲಿಸಿದ್ದರಿಂದ ಅಧ್ಯಕ್ಷ ರೆಡ್ಡಪ್ಪ ಮತ್ತು ಪಿಡಿಒ ಚೌಹಾಣ್ ಕಾಲೋನಿಗೆ ಭೇಟಿ ನೀಡಿ ಪರಿಶೀಲಿಸಿ ತೆರಳಿದ್ದರೂ ಯಾವುದೇ ಪ್ರಯೋಜನೆಯಾಗಿಲ್ಲ ಎಂದು ಮಹಿಳೆಯರು ಆರೋಪಿಸಿದ್ದಾರೆ.
ಕಳೆದ 15 ದಿನಗಳಿಂದ ಸಂಪೂರ್ಣವಾಗಿ ನೀರು ಬಾರದೇ ಇರುವುದರಿಂದ ಕುಡಿಯುವ ನೀರಿಗಾಗಿ ಬಿಂದಿಗೆ ಹಿಡಿದು ಗ್ರಾಮದ ಖಾಸಗಿ ಬೋರ್‌ವೆಲ್ಗಳ ಬಳಿಗೆ ಹೋಗಬೇಕಿದೆ. ಇಲ್ಲಿನ ಸಮಸ್ಯೆ ಕುರಿತು ನೀರುಗಂಟಿಗೆ ತಿಳಿಸಿದ್ರೆ 20 ಬಿಂದಿಗೆ ನೀರನ್ನು ಟ್ಯಾಂಕ್‌ಗೆ ಸರಬರಾಜು ಮಾಡಿ, ಕೊಳವೆಬಾವಿಯಲ್ಲಿ ನೀರು ಕಡಿಮೆಯಾಗಿದೆ ಎಂಬ ನೆಪವೊಡ್ಡಿ ಸ್ಥಗಿತಗೊಳಿಸುತ್ತಾರೆ. ಇದರಿಂದ ಕಾಲೋನಿಯಲ್ಲಿ ನೀರಿಗೆ ಹಾಹಾಕಾರ ಉಂಟಾಗಿ ಕುಟುಂಬಗಳ ಪರದಾಡುವಂತಾಗಿದೆ. ಅಲ್ಲದೇ, ಟ್ಯಾಂಕ್‌ಗೆ ಮುಚ್ಚಳವೂ ಇಲ್ಲದೇ ಇರುವುದರಿಂದ ಕಸಕಡ್ಡಿಯೂ ನೀರಿನಲ್ಲಿ ತುಂಬಿದೆ. ಆದ್ದರಿಂದ ಮೇಲಧಿಕಾರಿಗಳು ಇತ್ತ ಕಡೆ ಗಮನಹರಿಸಿ ನೀರಿನ ಸಮಸ್ಯೆ ಬಗೆಹರಿಸಬೇಕೆಂದು ಮಹಿಳೆಯರು ಒತ್ತಾಯಿಸಿದರು.