Advertisement

ಮೋರಟಗಿ ಪೊಲೀಸ್‌ ಠಾಣೆಗೆ ಸಿಬ್ಬಂದಿ ಕೊರತೆ

06:04 PM Jan 17, 2022 | Shwetha M |

ಮೋರಟಗಿ: ಗ್ರಾಮದ ಹೊರ ವಲಯದಲ್ಲಿರುವ ಹೊರ ಪೊಲೀಸ್‌ ಠಾಣೆಯಲ್ಲಿ ಸಿಬ್ಬಂದಿ ಕೊರತೆಯಿಂದ ಪೊಲೀಸರು ಪರದಾಡುವಂತಾಗಿದೆ.

Advertisement

ರಾಷ್ಟ್ರೀಯ ಹೆದ್ದಾರಿ 218 ಅಪಘಾತ ವಲಯವಾಗಿದ್ದು ದಿನ ನಿತ್ಯ ಒಂದಿಲ್ಲ ಒಂದು ದುರಂತಗಳು ನಡೆಯುತ್ತಿವೆ. ಇದನ್ನು ನಿಭಾಯಿಸುವಲ್ಲಿ ಇಲ್ಲಿರುವ ಮೂವರು ಪೊಲೀಸರು ಕಷ್ಟಪಡುತ್ತಿದ್ದಾರೆ. ಹೀಗಾಗಿ ಈ ಠಾಣೆಗೆ ಇನ್ನೂ ಎರಡು ಸಿಬ್ಬಂದಿ ನಿಯೋಜನೆ ಮಾಡಬೇಕು ಎಂದು ಗ್ರಾಮಸ್ಥರು ಅಗ್ರಹಿಸಿದ್ದಾರೆ.

ಮೋರಟಗಿ ಹೊರ ಪೊಲೀಸ್‌ ಠಾಣೆಯು ನಗಾವಿ (ಬಿಕೆ ), ಭಂಟನೂರ, ಗುತ್ತರಗಿ, ಗೊರವಗುಂಡಗಿ, ನಗಾವಿ (ಕೆಡಿ ), ಕೆರೂರ, ಗಾಬಸಾವಳಗಿ, ಹಂಚಿನಾಳ, ಜಾಟ್ನಾಳ, ಕಕ್ಕಳಮೆಲಿ, ಬಗಲೂರ್‌, ಶಿರಸಗಿ, ಕುಳೇಕುಮಟಗಿ, ಮೋರಟಗಿ ಸೇರಿದಂತೆ ಸುಮಾರು 15 ಹಳ್ಳಿಗಳಿಗೆ ಕೇಂದ್ರ ಬಿಂದುವಾಗಿದೆ. ಪ್ರತಿ ಮಂಗಳವಾರ ಇಲ್ಲಿ ಸಂತೆ ನಡೆಯುತ್ತದೆ. ಸಂತೆಯಲ್ಲಿ ಸುಮಾರು ಸಾವಿರಕ್ಕಿಂತ ಅಧಿಕ ಜನರು ವ್ಯಾಪಾರಕ್ಕೆ ಬರುತ್ತಾರೆ. ಸಂತೆಯಲ್ಲಿ ಮೊಬೈಲ್‌, ಕಿಸೆಗಳ್ಳತನ ಹೆಚ್ಚಾಗಿದೆ ಮತ್ತು ಸಂತೆಯ ದಿನದಂದು ರಾಷ್ಟ್ರೀಯ ಹೆದ್ದಾರಿಯಲ್ಲೇ ಆಟೋ ರಿಕ್ಷಾ, ಜಿಪ್‌, ದ್ವಿಚಕ್ರ ವಾಹನಗಳು ಸರತಿ ಸಾಲಿನಲ್ಲಿ ನಿಲ್ಲಿಸುತ್ತಿರುವುದರಿಂದ ಸಂಚಾರಕ್ಕೆ ತೀವ್ರ ತೊಂದರೆ ಆಗುತ್ತಿದೆ.

ದಿನ ಬೆಳಗಾದರೆ ಸಾರ್ವಜನಿಕರು ನೂರಾರು ಸಮಸ್ಯೆ ಹೊತ್ತು ಪೊಲೀಸ್‌ ಠಾಣೆಗೆ ಬರುತ್ತಾರೆ. ಕೆಲವೊಮ್ಮೆ ಅಹವಾಲು ಸ್ವೀಕರಿಸಲು ಠಾಣೆಯಲ್ಲಿ ಸಿಬ್ಬಂದಿಗಳು ಕೂಡಾ ಇರುವುದಿಲ್ಲ. ಇರುವ ಮೂವರು ಸಿಬ್ಬಂದಿ ಕೆಲಸದ ನಿಮಿತ್ತ ಪಕ್ಕದ ಹಳ್ಳಿಗೆ ಬಂದಿದ್ದೇವೆ ಎಂದು ಹೇಳುವುದು ಸಾಮಾನ್ಯವಾಗಿದೆ.

ಅಕ್ರಮ ದಂಧೆಗಳಿಗಿಲ್ಲ ಬ್ರೇಕ್‌

Advertisement

ಅಕ್ರಮ ಮರಳು ಸಾಗಾಣಿಕೆಗೆ ಹೆಸರಾದ ಘತ್ತರಗಿ ಗ್ರಾಮ ಇಲ್ಲಿಂದ ಕೇವಲ 8 ಕಿ.ಮೀ ಮಾತ್ರ ದೂರವಿದೆ. ಮಧ್ಯರಾತ್ರಿ ಅಡ್ಡ ರಸ್ತೆಯಿಂದ ಮರಳು ಸಾಗಿಸುತ್ತಾರೆ. ಇದನ್ನು ತಡೆಗಟ್ಟಲು ಪೊಲೀಸರು ಹರಸಾಹಸ ಪಟ್ಟರು ವಾಹನಗಳು ಸಿಗುತ್ತಿಲ್ಲ. ಸಿಬ್ಬಂದಿ ಕೊರತೆಯಿಂದ ಅಕ್ರಮಕೋರರು ಲಾಭ ಪಡೆದುಕೊಳ್ಳುತ್ತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಕ್ರಮ ಮರಳು ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಮಟಕಾ, ಇಸ್ಪೀಟ್‌, ಜೂಜಾಟ ದಿನೇ ದಿನೇ ಹೆಚ್ಚಾಗುತ್ತಿದೆ. ಇದನ್ನು ತಡೆಗಟ್ಟುವಲ್ಲಿ ಪೊಲೀಸ್‌ ಸಿಬ್ಬಂದಿಗಳು ಸಂಪೂರ್ಣ ವಿಫಲವಾಗುತ್ತಿದ್ದಾರೆ ಎಂದು ಜನ ಆರೋಪಿಸಿದ್ದಾರೆ. ಕೂಡಲೇ ಅಕ್ರಮ ದಂಧೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮೇಲಧಿಕಾರಿಗಳು ಹೆಚ್ಚಿನ ಸಿಬ್ಬಂದಿ ನಿಯೋಜನೆ ಮಾಡಬೇಕು ಎಂದು ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ.

ರಾತ್ರಿ ಪೊಲೀಸರು ಹಳ್ಳಿಗಳಲ್ಲಿ ಏನ್‌ ಬರತಾರೆ ಬಿಡಿ ಎಂದು ಹಳ್ಳಿ ಜನ ಕಡೆಗಣಿಸುವುದು ಸರ್ವೇ ಸಾಮಾನ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಭಾಗದಲ್ಲೇ ಇಸ್ಪೀಟ್‌, ಮಟಕಾ, ಸಾರಾಯಿ ಅಕ್ರಮ ದಂಧೇಗಳು ನಡೆಯುತ್ತಿರುವುದು ಹೆಚ್ಚಾಗಿ ಕಂಡು ಬರುತ್ತಿವೆ. ಇದನ್ನು ತಡೆಗಟ್ಟಲು ಮೋರಟಗಿ ಠಾಣೆಗೆ ಹೆಚ್ಚಿನ ಸಿಬ್ಬಂದಿ ನೇಮಕ ಮಾಡಲೇಬೇಕು. -ಪ್ರಧಾನಿ ಮೂಲಿಮನಿ, ಭಂಟನೂರ ಗ್ರಾಮಸ್ಥ

ಈಗಾಗಲೇ ಮೋರಟಗಿ ಹೊರ ಠಾಣೆಗೆ ಸಿಬ್ಬಂದಿ ಕೊರತೆ ಇರುವುದು ಗಮನಕ್ಕೆ ಬಂದಿದೆ. ಇಷ್ಟು ದಿನ ಸಿಂದಗಿ ತಾಲೂಕಿನಲ್ಲಿ ಸಿಬ್ಬಂದಿನಗಳು ಕಡಿಮೆ ಇರುವುದರಿಂದ ಮೋರಟಗಿ ಠಾಣೆಗೆ ಸಾಕಷ್ಟು ಸಿಬ್ಬಂದಿ ನಿಯೋಜನೆ ಮಾಡಲು ಆಗಿಲ್ಲ. ಸದ್ಯಕ್ಕೆ ಒಬ್ಬ ಎಎಸೈ, ಇಬ್ಬರು ಪಿಸಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೂಡಲೇ ಎರಡು ದಿನಗಳಲ್ಲಿ ಇನ್ನೊರ್ವ ಸಿಬ್ಬಂದಿಗೆ ನಿಯೋಜನೆ ಮಾಡುತ್ತೇನೆ. -ಶ್ರೀಧರ ದಡ್ಡಿ ,ಡಿವೈಎಸ್‌ಪಿ, ಇಂಡಿ

Advertisement

Udayavani is now on Telegram. Click here to join our channel and stay updated with the latest news.

Next