Advertisement

ಗ್ರಾಮೀಣ ನೀರು ಸರಬರಾಜು ಇಲಾಖೆಯಲ್ಲಿ ಸಿಬಂದಿ ಕೊರತೆ

01:27 AM Feb 25, 2020 | Sriram |

ಉಡುಪಿ: ಹಳ್ಳಿಗಳಲ್ಲಿ ನೀರಿನ ಸಮಸ್ಯೆಯಾದರೆ ಜನರು ಮೊದಲು ಕರೆ ಮಾಡು ವುದು ಈ ಇಲಾಖೆಗೆ. ಆದರೆ ಜನರ ಅಹವಾಲು ಕೇಳಲು, ಕಾರ್ಯಪ್ರವೃತ್ತರಾಗಲು ಇಲ್ಲಿ ಸಿಬಂದಿಯದ್ದೇ ಸಮಸ್ಯೆ. ಇಲಾಖೆಯಲ್ಲಿ 57 ಹುದ್ದೆ ಭರ್ತಿಯಾಗ ಬೇಕಿತ್ತು. ಆದರೆ ಇರುವುದು ಕೇವಲ 19 ಮಂದಿ. 38 ಹುದ್ದೆಗಳು ಖಾಲಿ ಉಳಿದಿದ್ದು, ಇಲಾಖೆಯ ದೈನಂದಿನ ಕೆಲಸಗಳೂ ತೆವಳುತ್ತ ಸಾಗುತ್ತಿವೆ.

Advertisement

ಸ್ಪಂದನೆ ಕಷ್ಟ
ಕಡು ಬೇಸಗೆ ಸಮೀಪಿಸುತ್ತಿರುವ ಹೊತ್ತಿನಲ್ಲೇ ಉಡುಪಿ ಜಿ.ಪಂ. ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಕಚೇರಿ ಖಾಲಿ ಬಿದ್ದಿದೆ. ಇದರಿಂದ ಮುಂದಿನ ದಿನಗಳಲ್ಲಿ ಜನರ ಅಹವಾಲುಗಳಿಗೆ ಸ್ಪಂದನೆ ಸಿಗುವುದೇ ಸಂಶಯಾಸ್ಪದವಾಗಿದೆ.

ಪ್ರಮುಖ ಹುದ್ದೆಗಳೇ ಖಾಲಿ
ಇಲಾಖೆಯ ಎಂಜಿನಿಯರ್‌ ಹುದ್ದೆ ಭರ್ತಿಗೊಂಡಿದ್ದರೂ, ಸಹಾಯಕ ಎಂಜಿನಿಯರ್‌ 7 ಹುದ್ದೆ ಇರಬೇಕಾದ ಜಾಗದಲ್ಲಿ ತುಂಬಿರುವುದು 3 ಹುದ್ದೆ ಮಾತ್ರ. 4 ಹುದ್ದೆ ಕೊರತೆ ಎದ್ದು ಕಾಣುತ್ತಿದೆ. ಇನ್ನು ಭೂವಿಜ್ಞಾನಿ, ಕಚೇರಿ ಅಧೀಕ್ಷಕ, ಲೆಕ್ಕ ಅಧೀಕ್ಷಕ, ಶೀಘ್ರ ಲಿಪಿಗಾರರು, ಪ್ರಥಮ ದರ್ಜೆ ಸಹಾಯಕರು, ದ್ವಿತೀಯ ದರ್ಜೆ ಲೆಕ್ಕ ಸಹಾಯಕರು, ಕೆಮೆಸ್ಟ್ರಿ ತಂತ್ರಜ್ಞರು, ಬೆರಳಚ್ಚುಗಾರರು/ ಕಂಪ್ಯೂಟರ್‌ ಆಪರೇಟರ್‌, ವಾಹನ ಚಾಲಕರು ಗ್ರೂಪ್‌ ಡಿ. ನೌಕರರ ವಿಭಾಗದ ಬಹುತೇಕ ಹುದ್ದೆಗಳೆಲ್ಲವೂ ಖಾಲಿ ಬಿದ್ದಿವೆ. ಸಿಬಂದಿಯಿಲ್ಲದೆ ಅಧಿಕಾರಿಗಳು ಪರದಾಡುತ್ತಿದ್ದಾರೆ. ಇಷ್ಟಿದ್ದರೂ ಸರಕಾರ ಭರ್ತಿಗೊಳಿಸುವ ಕಡೆ ಗಮನ ಹರಿಸಿಲ್ಲ.

ಸಮಸ್ಯೆ ಪರಿಹರಿಸುವಲ್ಲಿ ವಿಫ‌ಲ
ಈಗಾಗಲೇ ಹಲವೆಡೆಗಳಲ್ಲಿ ನೀರಿನ ಸಮಸ್ಯೆ ಹುಟ್ಟಿಕೊಂಡಿದ್ದು, ನೀರಿನ ಸರಬರಾಜಿಗೆ ಅಧಿಕಾರಿಗಳು ಸಾಕಷ್ಟು ಪೂರ್ವ ಸಿದ್ಧತೆಗಳನ್ನೂ ಕೈಗೊಳ್ಳಬೇಕಿದೆ. ಆದರೆ ಸಿಬಂದಿ ಕೊರತೆ ಇವರಿಗೆ ಬಹುವಾಗಿ ಕಾಡಿದೆ. ಇದರ ಪರಿಣಾಮ ಒಟ್ಟು ಕೆಲಸದ ಫ‌ಲಿತಾಂಶದ ಮೇಲಾಗುತ್ತಿದೆ.

ಸರಕಾರಕ್ಕೆ ಕೇಳಿಸಿಲ್ಲ
ಇಲಾಖೆ ವ್ಯಾಪ್ತಿಯಲ್ಲಿ ಶುದ್ಧಗಂಗಾ, ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಗ್ರಾಮೀಣ ಕುಡಿಯುವ ಯೋಜನೆಗಳು ಬರುತ್ತದೆ. ಗ್ರಾಮ ಪಂಚಾಯತ್‌ ಕಚೇರಿಗಳಿಗೂ ಭೇಟಿ ನೀಡಬೇಕಿರುತ್ತದೆ. ಸಿಬಂದಿಯಿಲ್ಲದೆ ಕಾರ್ಯಕ್ರಮ ಗಳೆಲ್ಲ ಹಿಂದೆ ಬಿದ್ದಿವೆ. ಸಿಬಂದಿ ಕೊರತೆ ನೀಗಿಸಲು ಅಧಿಕಾರಿಗಳು ಹಲವು ಬಾರಿ ಕೇಳಿಕೊಂಡಿದ್ದರೂ ಸರಕಾರಕ್ಕೆ ಯಾವುದೂ ಕೇಳಿಲ್ಲ.

Advertisement

ಭರ್ತಿಗೆ ಪ್ರಸ್ತಾವ ಸಲ್ಲಿಕೆಯಾಗಿದೆ
ಜಿಲ್ಲೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ ಸಂಬಂಧ ಪ್ರಸ್ತಾವನೆಯನ್ನು ಈ ಹಿಂದೆ ಸರಕಾರಕ್ಕೆ ಸಲ್ಲಿಸಿದ್ದೇವೆ. ಭರ್ತಿ ಪ್ರಕ್ರಿಯೆ ನಡೆಯುವ ವೇಳೆಗೆ ಇಲ್ಲಿಗೂ ನೇಮಕಾತಿ ಆಗಲಿದೆ.
-ರಘುಪತಿ ಭಟ್‌,

ಶಾಸಕರು, ಉಡುಪಿ.

ಲಭ್ಯ ಸಿಬಂದಿ ಬಳಸಿ ನಿರ್ವಹಣೆ
ನಮ್ಮ ಇಲಾಖೆ ಮಾತ್ರವಲ್ಲ ಎಲ್ಲ ಇಲಾಖೆಯಲ್ಲೂ ಸಿಬಂದಿ ಕೊರತೆ ಇದೆ. ಜಿಲ್ಲೆಯ ಮುಖ್ಯ ಹುದ್ದೆಗಳಿಗೆ ನಿಯೋಜನೆಗೊಂಡವರು ವರ್ಗಾವಣೆ ಪಡೆದುಕೊಂಡು ಹೋಗುತ್ತಿರುತ್ತಾರೆ. ಇಷ್ಟರ ನಡುವೆಯೂ ತೊಂದರೆಯಾಗದಂತೆ ಲಭ್ಯ ಸಂಪನ್ಮೂಲದಲ್ಲೇ ಸಮಸ್ಯೆ ನಿವಾರಿಸುವ ಯತ್ನ ನಡೆಸುತ್ತೇವೆ.
-ಪಿ. ರಾಜ, ಎಕ್ಸಿಕ್ಯೂಟಿವ್‌ ಎಂಜಿನಿಯರ್‌, ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ, ಉಡುಪಿ.

– ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next