Advertisement

IAS ಅಧಿಕಾರಿಗಳಿಗೆ ನಿಯಮಗಳ ಕಡಿವಾಣ, ಅಧಿಕಾರ ದುರುಪಯೋಗ ಮಾಡಿಕೊಂಡರೆ ಕೆಲಸದಿಂದ ವಜಾ

11:26 PM Jul 17, 2024 | Team Udayavani |

ಪ್ರೊಬೆಷನರಿ ಐಎಎಸ್‌ ಅಧಿಕಾರಿ ಡಾ| ಪೂಜಾ ಖೇಡ್ಕರ್‌ ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿಕೊಂಡ ಬೆನ್ನಲ್ಲೇ ಸೇವಾ ನಿಯಮಗಳು ಮತ್ತು ನಡವಳಿಕೆಗಳ ಬಗ್ಗೆ ಚರ್ಚೆಗಳು ಶುರುವಾಗಿವೆ. ಈ ಹಿನ್ನೆಲೆಯಲ್ಲಿ ಅಖೀಲ ಭಾರತೀಯ ಸೇವಾ ನಿಯಮಗಳ ಬಗೆಗಿನ ಮಾಹಿತಿ ಇಲ್ಲಿದೆ.

Advertisement

ಯಾರಿದು ಡಾ| ಪೂಜಾ ಖೇಡ್ಕರ್‌?

ಮಹಾರಾಷ್ಟ್ರ ಮೂಲದ ಡಾ| ಪೂಜಾ ಖೇಡ್ಕರ್‌ 2022ರ ಐಐಎಸ್‌ ಬ್ಯಾಚಿನ ಟ್ರೈನಿ ಆಫೀಸರ್‌. ಯುಪಿಎಸ್‌ಸಿ ಪರೀಕ್ಷೆಯಲ್ಲಿ 821ನೇ ರ್‍ಯಾಂಕ್‌ ಗಳಿಸಿದ್ದಾರೆ. ಪ್ರೊಬೆಷನರಿ ಅವಧಿಯಲ್ಲಿ ಪೂಜಾ ಅವರನ್ನು ಪುಣೆಯ ಸಹಾಯಕ ಕಂದಾಯ ಅಧಿಕಾರಿಯಾಗಿ ನೇಮಿಸಲಾಗಿತ್ತು. ಪೂಜಾ ಅಧಿಕಾರಿಗಳ ಕುಟುಂಬದಿಂದಲೇ ಬಂದವರಾಗಿದ್ದು, ತಂದೆ ದಿಲೀಪ್‌ರಾವ್‌ ಖೇಡ್ಕರ್‌ ಕೂಡ ಐಎಎಸ್‌ ಅಧಿಕಾರಿಯಾಗಿದ್ದು, ಮಹಾರಾಷ್ಟ್ರದಲ್ಲಿ ಸೇವೆ ಸಲ್ಲಿಸಿದ್ದರು. ಆದರೆ, ಇತ್ತೀಚೆಗೆ ಅವರು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಪೂಜಾ ಅವರ ಅಜ್ಜ ಸರಕಾರಿ ನೌಕರರಾಗಿದ್ದರು. ಪೂಜಾರ ತಾಯಿ ಅಹ್ಮದ್‌ನಗರ ಜಿಲ್ಲೆಯ ಪಾಥರ್ಡಿ ತಾಲೂಕಿನ ಭಾಲ್ಗಾಂವ್‌ ಗ್ರಾಪಂ ಸರಪಂಚರಾಗಿ ಕೆಲಸ ಮಾಡಿದ್ದಾರೆ. ಅಧಿಕಾರ ದುರ್ಬಳಕೆ ಮಾಡಿಕೊಂಡಿರುವ ಪೂಜಾರನ್ನು ಮಹಾರಾಷ್ಟ್ರ  ಸರಕಾರ ಸೇವೆಯಿಂದ ಬಿಡುಗಡೆ ಮಾಡಿದೆ. ಅವರನ್ನು ವಾಪಸ್‌ ತರಬೇತಿ ಅಕಾಡೆಮಿಗೆ ವಾಪಸ್‌ ಕರೆಯಿಸಿಕೊಳ್ಳಲಾಗಿದೆ.

ಪ್ರೊಬೆಷನರಿ ಅಧಿಕಾರಿ ಸುತ್ತ ಬರೀ ವಿವಾದಗಳು

– ಪೂಜಾ ತಮಗೆ ದೃಷ್ಟಿದೋಷ, ಮಾನಸಿಕ ಅನಾರೋಗ್ಯ ಇರುವುದಾಗಿ ಹೇಳಿಕೊಂಡಿದ್ದರು ಮತ್ತು ನೇಮಕಾತಿಯಲ್ಲಿ ಅದರಿಂದ ಲಾಭ ಮಾಡಿಕೊಂಡಿದ್ದರು.

Advertisement

– ತಂದೆ ಐಎಎಸ್‌ ಅಧಿಕಾರಿಯಾಗಿದ್ದರೂ ಪೂಜಾ ಒಬಿಸಿ (ನಾನ್‌ ಕ್ರೀಮಿ ಲೇಯರ್‌) ಕೋಟಾದಡಿ ಎಂಬಿಬಿಎಸ್‌ಗೆ ಸೀಟು ಪಡೆದುಕೊಂಡಿದ್ದರು.

– ಜೂ.3ರಂದು ಪುಣೆ ಜಿಲ್ಲಾ ಸಹಾಯಕ ಕಂದಾಯ ಅಧಿಕಾರಿಯಾಗಿ ತರಬೇತಿ ಆರಂಭಿಸಿದ ಪೂಜಾ, ಅಧಿಕಾರವನ್ನು ಮೀರಿ ತಮ್ಮ ಖಾಸಗಿ ಕಾರಿಗೆ, ಕೆಂಪು-ನೀಲಿ ಬೀಕನ್‌ ಬಳಸಿದ್ದಾರೆ. ಹೆಚ್ಚುವರಿ ಕಂದಾಯ ಅಧಿಕಾರಿಯ ಒಪ್ಪಿಗೆ ಇಲ್ಲದೇ ಅವರ ಕಚೇರಿ ಸ್ವಾಧೀನಪಡಿಸಿಕೊಂಡಿದ್ದು, ಅನುಮತಿ ಇಲ್ಲದೇ ಕಚೇರಿಯ ಪೀಠೊಪಕರಣಗಳನ್ನು ಬದಲಿಸಿದ್ದಾರೆ.

ಸೇವಾ ನಿಯಮಗಳೇನು?

ಭಾರತೀಯ ಆಡಳಿತ ಸೇವೆ(ಐಎಎಸ್‌), ಭಾರತೀಯ ಪೊಲೀಸ್‌ ಸೇವೆ(ಐಪಿಎಸ್‌) ಮತ್ತು ಭಾರತೀಯ ಅರಣ್ಯ ಸೇವೆ(ಐಎಫ್ಎಸ್‌) ಅಧಿಕಾರಿಗಳು 1968ರ ಅಖೀಲ ಭಾರತೀಯ ಸೇವೆಗಳ(ನಡವಳಿಕೆ) ನಿಯಮ ಮತ್ತು 1954ರ ಭಾರತೀಯ ಆಡಳಿತಾತ್ಮಕ ಸೇವಾ(ಪ್ರೊಬೆಷನ್‌) ನಿಯಮಗಳಿಗೆ ಒಳಪಟ್ಟಿರುತ್ತಾರೆ.

1. ಬದ್ಧತೆಯನ್ನು ಕಾಪಾಡಿಕೊಳ್ಳಬೇಕು

ಅಖೀಲ ಭಾರತೀಯ ಸೇವಾ ನಿಯಮ ನಿಯಮ 3(1) ಪ್ರಕಾರ ಸೇವೆಯಲ್ಲಿರುವ ಪ್ರತಿಯೊಬ್ಬ ಸದಸ್ಯನು ಎಲ್ಲ ಸಮಯದಲ್ಲೂ ಸಂಪೂರ್ಣ “ಬದ್ಧತೆ’ ಮತ್ತು “ಕರ್ತವ್ಯದ ಪಾವಿತ್ರ್ಯತೆ’ಯನ್ನು ಕಾಪಾಡಿಕೊಳ್ಳಬೇಕು ಮತ್ತು ಸೇವೆಯ ನಿಯಮಕ್ಕೆ ವಿರುದ್ಧವಾದುದನ್ನು ಮಾಡಬಾರದು.

2. ಸ್ವಜನಪಕ್ಷಪಾತ ಸಲ್ಲ

ನಿಯಮ 4(1)ರಂತೆ ಸೇವೆಯಲ್ಲಿರುವ ಅಧಿಕಾರಿಗಳು ತಮ್ಮ ಹುದ್ದೆ ಅಥವಾ ಪ್ರಭಾವವನ್ನು ತಮ್ಮ ಕುಟುಂಬದ ಯಾವುದೇ ಸದಸ್ಯರು ಉದ್ಯೋಗ ಭದ್ರತೆಗಾಗಿ ಅಥವಾ ಖಾಸಗಿ ಎನ್‌ಜಿಒ ಆರಂಭಕ್ಕೆ ಬಳಸಿಕೊಳ್ಳಬಾರದು. ಈ ನಿಯಮಕ್ಕೆ ಕೇಂದ್ರ ಸರಕಾರವು 2014ರಲ್ಲಿ ಮತ್ತೂಂದಿಷ್ಟು ಉಪನಿಯಮಗಳನ್ನು ಸೇರ್ಪಡೆ ಮಾಡಿದೆ. ಅಧಿಕಾರಿಗಳು ಉನ್ನತ ವೃತ್ತಿ ಮೌಲ್ಯಗಳನ್ನು, ಬದ್ಧತೆ ಮತ್ತು ಪ್ರಾಮಾಣಿಕತೆಯನ್ನು ಪ್ರದರ್ಶಿಸಬೇಕು. ಜತೆಗೆ ರಾಜಕೀಯ ತಾಟಸ್ಥ್ಯ, ಉತ್ತರ ದಾಯಿತ್ವ ಮತ್ತು ಪಾರದರ್ಶಕತೆ, ಸಾರ್ವಜನಿಕರಿಗೆ ತ್ವರಿತ ಸ್ಪಂದನೆ, ವಿಶೇಷವಾಗಿ ದುರ್ಬಲ ವರ್ಗದ ಜನರಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಇವೆಲ್ಲದರ ಜತೆಗೆ, ಸಾರ್ವಜನಿಕರ ಜತೆಗೆ ಉತ್ತಮ ನಡವಳಿಕೆ ಮತ್ತು ಸೌಜನ್ಯದಿಂದ ನಡೆದುಕೊಳ್ಳಬೇಕು.

3. ನಿರ್ಣಯ ಯಾವ ರೀತಿ ಕೈಗೊಳ್ಳಬೇಕು?

ಅಧಿಕಾರಿಗಳು ನಿರ್ಧಾರ ಕೈಗೊಳ್ಳಬೇಕಾದಾಗಲೂ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಸಂಪೂರ್ಣವಾಗಿ ಸಾರ್ವಜನಿಕ ಹಿತಾಸಕ್ತಿಗೆ ಅನುಗುಣವಾಗಿ ನಿರ್ಧಾರ ಕೈಗೊಳ್ಳಬೇಕು. ತಮ್ಮ ಸಾರ್ವಜನಿಕ ಕರ್ತವ್ಯಕ್ಕೆ ಸಂಬಂಧಿಸಿದಂತೆ ಖಾಸಗಿ ಆಸಕ್ತಿಗಳಿದ್ದರೆ ಘೋಷಿಸಬೇಕು. ತಮ್ಮ ಮೇಲೆ ಪ್ರಭಾವ ಬೀರಬಹುದಾದ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯೊಂದಿಗೆ ಯಾವುದೇ ಹಣಕಾಸಿನ ಅಥವಾ ಇತರ ಜವಾಬ್ದಾರಿಗಳ ಅಡಿಯಲ್ಲಿ ತೊಡಗಿಸಿಕೊಳ್ಳಬಾರದು. ಸಾರ್ವಜನಿಕ ಸೇವಕರಾಗಿ ತಮ್ಮ ಹುದ್ದೆಯ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳಬಾರದು. ತಮಗೆ ಇಲ್ಲವೇ ತಮ್ಮ ಕುಟುಂಬಸ್ಥರು ಅಥವಾ ಸ್ನೇಹಿತರಿಗೆ ಲಾಭವಾಗುವ ರೀತಿಯಲ್ಲಿ ನಿರ್ಧಾರಗಳನ್ನು ಕೈಗೊಳ್ಳಬಾರದು.

4. ಉಡುಗೊರೆ ಸ್ವೀಕರಿಸಬಾರದು

ನಿಯಮ 11(1) ಪ್ರಕಾರ ಮದುವೆ, ವಾರ್ಷಿಕೋತ್ಸವ ಹಾಗೂ ಇತರ ಧಾರ್ಮಿಕ ಸಂದರ್ಭಗಳಲ್ಲಿ ಅಧಿಕಾರಿಗಳು, ಯಾವುದೇ ಅಧಿಕೃತ ವ್ಯವಹಾರ ಹೊಂದಿರದ ಹತ್ತಿರದ ಸಂಬಂಧಿಕರು ಅಥವಾ ಸ್ನೇಹಿತರಿಂದ ಉಡುಗೊರೆಯನ್ನು ಸ್ವೀಕರಿಸಬಹುದು. ಆದರೂ 25 ಸಾವಿರ ರೂ.ಗಿಂತ ಹೆಚ್ಚಿನ ಮೌಲ್ಯದ ಉಡುಗೊರೆಯನ್ನು ಸ್ವೀಕರಿಸಿದ್ದರೆ ಆ ಕುರಿತು ಸರಕಾರಕ್ಕೆ ಮಾಹಿತಿ ನೀಡಬೇಕು.

ಪ್ರೊಬೆಷನರಿ ಅಧಿಕಾರಿಗಳಿಗೆ ಪೂರ್ತಿ ಅಧಿಕಾರ ಇರಲ್ಲ!

ನಾಗರಿಕ ಸೇವೆಗಳಿಗೆ ಆಯ್ಕೆಯಾಗಿರುವ ಅಧಿಕಾರಿಗಳು ಪ್ರೊಬೆಷನರಿ ಅವಧಿಯನ್ನು ಪೂರೈಸಬೇಕಾಗುತ್ತದೆ. 2 ವರ್ಷದ ಪ್ರೊಬೆಷನರಿ ಅವಧಿಯು ಮಸ್ಸೂರಿಯಲ್ಲಿರುವ ಲಾಲ್‌ ಬಹದ್ದೂರ್‌ ಶಾಸ್ತ್ರೀ ರಾಷ್ಟ್ರೀಯ ಆಡಳಿತಾತ್ಮಕ ಅಕಾಡೆಮಿಯ ತರಬೇತಿಯನ್ನು ಒಳಗೊಂಡಿರುತ್ತದೆ. 2 ವರ್ಷದ ಬಳಿಕ ಪ್ರೊಬೆಷನರಿ ಪರೀಕ್ಷೆಯೊಂದನ್ನು ಪಾಸು ಮಾಡಿದ ಬಳಿಕ ಅವರು ತಮ್ಮ ಸೇವೆಗಳಿಗೆ ತೆರಳುುತ್ತಾರೆ. ಪ್ರೊಬೆಷನರಿ ಅವಧಿಯಲ್ಲಿ ಅಧಿಕಾರಿಗಳಿಗೆ ನಿರ್ದಿಷ್ಟ ಸಂಬಳ ಮತ್ತು ಪ್ರವಾಸ ಭತ್ತೆ ನೀಡಲಾಗುತ್ತದೆ. ಆದರೆ ಇದಾವುದು ಅವರಿಗೆ ಹಕ್ಕಾಗಿರುವುದಿಲ್ಲ. ಐಎಎಸ್‌ ಅಧಿಕಾರಿಗೆ ದೊರೆಯುವ ಸೌಲಭ್ಯಗಳು ಇರುವುದಿಲ್ಲ. ಇದರಲ್ಲಿ ವಿಐಪಿ ನಂಬರ್‌ಪ್ಲೇಟ್‌ನೊಂದಿಗೆ ಅಧಿಕೃತ ಕಾರು, ಅಧಿಕೃತ ನಿವಾಸ, ಅಧಿಕೃತ ಚೇಂಬರ್‌, ಅಗತ್ಯ ಸಿಬಂದಿ ಇತ್ಯಾದಿ. ನಿಯಮ 12ರ ಪ್ರಕಾರ ಪ್ರೊಬೆಷನರಿಗಳು ಕೈಗೊಳ್ಳಬೇಕಾದ ಕರ್ತವ್ಯಗಳ ಬಗ್ಗೆ ಹೇಳಲಾಗುತ್ತದೆ. ಕೇಂದ್ರ ಸರಕಾರವು ಪ್ರೊಬೆಷನರಿಯಲ್ಲಿರುವ ಅಧಿಕಾರಿ ನೇಮಕಾತಿಗೆ ಅನರ್ಹರು ಅಥವಾ ಸೇವೆಯ ಸದಸ್ಯರಾಗಲು ಸೂಕ್ತವಲ್ಲ ಎಂದು ಗುರುತಿಸುವುದು, ಉದ್ದೇಶಪೂರ್ವಕವಾಗಿ ತನ್ನ ಪ್ರೊಬೆಷನರಿ ಅಧ್ಯಯನಗಳು ಅಥವಾ ಕರ್ತವ್ಯಗಳನ್ನು ನಿರ್ಲಕ್ಷಿಸುವುದು ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ತಿಳಿಸಲಾಗಿದೆ.

ಸುಳ್ಳು ಮಾಹಿತಿ, ನಕಲಿ ಪ್ರಮಾಣ ಪತ್ರ ನೀಡಿದರೆ ಏನಾಗುತ್ತದೆ?

1995ರಿಂದ ಒಬಿಸಿ ಕೆಟಗರಿಗೆ ಶೇ.27 ಮೀಸಲಾತಿಯನ್ನು ಕಲ್ಪಿಸಲಾಗಿದೆ. 2006 ಬ್ಯಾಚ್‌ನೊಂದಿಗೆ ದಿವ್ಯಾಂಗರಿಗೆ ಪ್ರತೀ  ಕೆಟಗರಿಯಲ್ಲಿ ಶೇ.3ರಷ್ಟು ಮೀಸಲಾತಿ ನೀಡಲಾಗಿದೆ. ಅಂದರೆ, ಸಾಮಾನ್ಯ, ಒಬಿಸಿ, ಎಸ್‌ಸಿ ಮತ್ತು ಎಸ್‌ಟಿ ಕೆಟಗರಿಯಲ್ಲಿ ಈ ಮೀಸಲಾತಿ ಕಲ್ಪಿಸಲಾಗುತ್ತಿದೆ. ಕಡಿಮೆ ರ್‍ಯಾಂಕ್‌ ಗಳಿಸಿದ್ದರೂ ಒಬಿಸಿ ಮತ್ತು ಅಂಗವಿಕಲತೆಯ ಕಾರಣಕ್ಕಾಗಿಯೇ ಪೂಜಾ ಖೇಡ್ಕರ್‌ ಅವರಿಗೆ ಐಎಎಸ್‌ ಹಂಚಿಕೆ ಮಾಡಲಾಗಿತ್ತು. ಒಂದು ವೇಳೆ, ಪೂಜಾ ಅಂಗವಿಕಲತೆಯ ಸರ್ಟಿಫಿಕೆಟ್‌ ನಕಲಿ ಎಂದು ಗೊತ್ತಾದರೆ, ಸೇವೆಯಿಂದ ಪೂಜಾ ಅವರನ್ನು ಬಿಡುಗಡೆ ಮಾಡಲಾಗುತ್ತದೆ.

ಯಾವುದೇ ಅಭ್ಯರ್ಥಿಯು ನೇಮಕಾತಿಗಾಗಿ ಸುಳ್ಳು ಮಾಹಿತಿ ನೀಡಿದರೆ ಅಥವಾ ನಕಲಿ ಪ್ರಮಾಣಪತ್ರಗಳನ್ನು ನೀಡಿದ್ದರೆ ಅಂಥವರಿಗೆ ಸೇವೆಯಲ್ಲಿ ಮುಂದುವರಿಯಲು ಅವಕಾಶ ನೀಡಬಾರದು ಎಂದು 1993ರ ಸಿಬಂದಿ ಮತ್ತು ನೇಮಕಾತಿ ಇಲಾಖೆಯ ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಈ ನಿಯಮಗಳು ಕೇವಲ ಪ್ರೊಬೆಷನರಿಯಲ್ಲಿರುವ ಅಧಿಕಾರಿಗಳು ಮಾತ್ರವಲ್ಲದೇ ಖಾಯಂ ಸೇವೆಯಲ್ಲಿರುವವರೆಗೂ ಅನ್ವಯವಾಗುತ್ತದೆ. ಒಂದು ವೇಳೆ, ಸುಳ್ಳು ಮಾಹಿತಿ ನೀಡಿದ್ದಕ್ಕಾಗಿ ಮತ್ತು ನಕಲಿ ಪ್ರಮಾಣಪತ್ರದಿಂದಾಗಿ ಸೇವೆಯಿಂದ ವಜಾಗೊಂಡರೆ, ಅಂಥ ನೌಕರರು  ಸರಕಾರದ ನಿರ್ಧಾರವನ್ನು ನ್ಯಾಯಾಲಯ ಮತ್ತು ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ, ಒಬಿಸಿ ಆಯೋಗದಲ್ಲಿ ಪ್ರಶ್ನಿಸಬಹುದು. ಈ ಕಾನೂನು ಪ್ರಕ್ರಿಯೆಯು ದೀರ್ಘಾವಧಿಯವರೆಗೆ ನಡೆಯುವುದರಿಂದ, ತೀರ್ಪು ಬರುವವರೆಗೂ ಸಂಬಂಧಿಸಿದ ಅಧಿಕಾರಿ ಸೇವೆಯಲ್ಲಿ ಮುಂದುವರಿಯಬಹುದು.

2017ರಿಂದ ಬೀಕನ್‌ ದೀಪ ಬಳಕೆಗೆ ನಿಷೇಧ

ವಿಐಪಿ ಸಂಸ್ಕೃತಿ ತಡೆಯುವುದಕ್ಕಾಗಿ 2013ರಲ್ಲಿ ಸುಪ್ರೀಂ ಕೋರ್ಟ್‌ ನಿಯಮಗಳನ್ನು ರೂಪಿಸಿ, ಜಾರಿಗೊಳಿಸುವಂತೆ ಕೇಂದ್ರ ಸರಕಾರಕ್ಕೆ ತಿಳಿಸಿತ್ತು. ಬಳಿಕ 2017 ಎಪ್ರಿಲ್‌ 19ರಂದು ಕೇಂದ್ರ ಸಂಪುಟವು 1989ರ ಮೋಟಾರ್‌ ವೆಹಿಕಲ್‌ ನಿಯಮಗಳ ತಿದ್ದುಪಡಿಗೆ ಒಪ್ಪಿಗೆ ಸೂಚಿಸಿತು. ಅದರನ್ವಯ ರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿಯಿಂದ ಹಿಡಿದು ಎಲ್ಲ ಸಾರ್ವಜನಿಕ ಪ್ರತಿನಿಧಿಗಳಿಂದ ಸರಕಾರಿ ಅಧಿಕಾರಿಗಳವರೆಗೆ ವಾಹನಗಳ ಮೇಲೆ ಬೀಕನ್‌ ದೀಪಗಳ ಬಳಕೆಯನ್ನು ನಿಷೇಧಿಸುವ ಮೂಲಕ ವಿಐಪಿ ಸಂಸ್ಕೃತಿಗೆ ಮಂಗಳ ಹಾಡಲಾಯಿತು. ತುರ್ತು ವಾಹನಗಳು, ಆಂಬ್ಯುಲೆನ್ಸ್‌, ಅಗ್ನಿಶಾಮಕ ದಳ ವಾಹನಗಳು ಮತ್ತು ಪೊಲೀಸರು ನೀಲಿ ಬೀಕನ್‌ ದೀಪ ಬಳಸಲು ಅವಕಾಶವಿದೆ.

Advertisement

Udayavani is now on Telegram. Click here to join our channel and stay updated with the latest news.

Next