Advertisement

High Court ವೈದ್ಯರ ಕೊರತೆ: ಪಿಐಎಲ್‌ ದಾಖಲು

01:02 AM Nov 08, 2023 | Team Udayavani |

ಬೆಂಗಳೂರು: ರಾಜ್ಯದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಮತ್ತು ಇತರ ವೈದ್ಯಕೀಯ ಸಿಬಂದಿ ಕೊರತೆಯನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್‌, ಈ ನಿಟ್ಟಿನಲ್ಲಿ ಸರ್ಕಾರಕ್ಕೆ ಅಗತ್ಯ ನಿರ್ದೇಶನ ನೀಡಲು ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡಿದೆ.

Advertisement

ರಾಜ್ಯದ ಎಲ್ಲ ಜಿಲ್ಲೆಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಎಂಬಿಬಿಎಸ್‌ ವೈದ್ಯರು ಸೇರಿದ 16 ಸಾವಿರಕ್ಕೂ ಹೆಚ್ಚು ವೈದ್ಯಕೀಯ, ಅರೆ ವೈದ್ಯಕೀಯ ಹಾಗೂ ಡಿ ಗ್ರೂಪ್‌ ಸಿಬಂದಿಯ ಕೊರತೆ ಬಗ್ಗೆ ಫೆಡರೇಷನ್‌ ಆಫ್ ಇಂಡಿಯನ್‌ ಚೇಂಬರ್ಸ್‌ ಆಫ್ ಕಾಮರ್ಸ್‌ ಆ್ಯಂಡ್‌ ಇಂಡಸ್ಟ್ರಿ (ಎಫ್ಐಸಿಸಿಐ) ವರದಿಯೊಂದನ್ನು ಬಿಡುಗಡೆ ಮಾಡಿತ್ತು. ಇದನ್ನು ಆಧರಿಸಿ ಮಾಧ್ಯಮಗಳಲ್ಲಿ ಪ್ರಕಟಗೊಂಡ ವರದಿಯನ್ನು ಆಧರಿಸಿ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ. ವರಾಲೆ ಹಾಗೂ ನ್ಯಾ| ಕೃಷ್ಣ ಎಸ್‌. ದೀಕ್ಷಿತ್‌ ಅವರಿದ್ದ ಹೈಕೋರ್ಟ್‌ ವಿಭಾಗೀಯ ನ್ಯಾಯಪೀಠ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡಿದೆ.

ಆದ್ದರಿಂದ ಇದೊಂದು ಸಾರ್ವಜನಿಕ ಗಂಭೀರ ಹಾಗೂ ಮಹತ್ವದ ವಿಚಾರವಾಗಿದೆ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ, ಈ ನಿಟ್ಟಿನಲ್ಲಿ ಸರಕಾರಕ್ಕೆ ಅಗತ್ಯ ನಿರ್ದೇಶನಗಳನ್ನು ನೀಡಲು ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡು ನ್ಯಾಯಪೀಠದ ಮುಂದೆ ವಿಚಾರಣೆಗೆ ಪಟ್ಟಿ ಮಾಡಲು ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ ಅವರಿಗೆ ನಿರ್ದೇಶನ ನೀಡಿತು. ಅಲ್ಲದೇ ಈ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಸಹಕರಿಸಲು ವಕೀಲ ಶ್ರೀಧರ ಪ್ರಭು ಅವರನ್ನು “ಅಮೆಕಸ್‌ ಕ್ಯೂರಿ’ (ಕೋರ್ಟ್‌ ನೆರವುಗಾರರು) ಆಗಿ ನೇಮಕ ಮಾಡಿತು.

16,500ಕ್ಕೂ ಅಧಿಕ ವೈದ್ಯರ ಹುದ್ದೆ ಖಾಲಿ
ಮಂಗಳವಾರ ಹೈಕೋರ್ಟ್‌ ಕಲಾಪ ಆರಂಭವಾಗುತ್ತಿದ್ದಂತೆ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ. ವರಾಲೆ ಅವರು ಈ ವಿಷಯ ಪ್ರಸ್ತಾವಿಸಿ, ರಾಜ್ಯದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 723 ಎಂಬಿಬಿಎಸ್‌ ವೈದ್ಯರು, 7,492 ಶುಶ್ರೂಷಕಿಯರು, 1,517 ಲ್ಯಾಬ್‌ ಟೆಕ್ನೀಷಿಯನ್‌, 1512 ಫಾರ್ಮಾಸಿಸ್ಟ್‌, 1752 ಸಹಾಯಕರು 3253 ಗ್ರೂಪ್‌ ಡಿ ನೌಕರರು ಸೇರಿ 16,500ಕ್ಕೂ ಹೆಚ್ಚು ವೈದ್ಯರು, ಅರೆ ವೈದ್ಯಕೀಯ ಸಿಬಂದಿ, ತಾಂತ್ರಿಕ ಹಾಗೂ ಡಿ. ಗ್ರೂಪ್‌ ನೌಕರರ ಕೊರತೆ ಇದೆ. ಅಲ್ಲದೆ ರಾಜ್ಯದ ನಗರ ಪ್ರದೇಶಗಳಲ್ಲಿ 245 ಮತ್ತು ಗ್ರಾಮೀಣ ಪ್ರದೇಶದಲ್ಲಿ 209 ಸೇರಿ ಒಟ್ಟು 454 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕೊರತೆ ಇದೆ ಎಂದು ವರದಿಯಲ್ಲಿ ಪ್ರಕಟಿಸಲಾಗಿದೆ ಎಂದು ಉಲ್ಲೇಖೀಸಿದರು.

Advertisement

Udayavani is now on Telegram. Click here to join our channel and stay updated with the latest news.

Next