Advertisement

ಚಾಲಕ-ನಿರ್ವಾಹಕರ ಕೊರತೆ; ಗ್ರಾಮೀಣ ಭಾಗದ ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ ಕಡಿತ

02:39 PM Oct 11, 2022 | Team Udayavani |

ಕುಂದಾಪುರ: ಸಿಬಂದಿ ಕೊರತೆ ಯಿಂದ ಬೈಂದೂರು ಹಾಗೂ ಕುಂದಾಪುರ ತಾಲೂಕಿನ ವಿವಿಧೆಡೆಗಳ ಕೆಎಸ್‌ಆರ್‌ಟಿಸಿ ಬಸ್‌ ಗಳ ಸಂಚಾರ ಕಡಿತಗೊಳ್ಳುತ್ತಿದ್ದು, ಇದರಿಂದ ಇದನ್ನೇ ನಂಬಿಕೊಂಡಿರುವ ಶಾಲಾ- ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ನಿತ್ಯ ತೊಂದರೆ ಅನುಭವಿಸುವಂತಾಗಿದೆ. ಈ ಬಗ್ಗೆ ಅನೇಕ ಬಾರಿ ಆ ಭಾಗದ ಊರವರು ಸಂಬಂಧಪಟ್ಟ ಎಲ್ಲರಿಗೂ ಮನವಿ ಮಾಡುತ್ತಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ.

Advertisement

ಕುಂದಾಪುರ ಹಾಗೂ ಬೈಂದೂರು ತಾಲೂಕಿನಲ್ಲಿ ಪ್ರಮುಖವಾಗಿ ಕುಂದಾಪುರ – ಕೊಲ್ಲೂರು ಮಾರ್ಗದಲ್ಲಿ ಸೀಮಿತ ಬಸ್‌ ಮಾತ್ರವಿದ್ದು, ಇದಲ್ಲದೆ ಕೆಲವೊಮ್ಮೆ ಇದ್ದ ಬಸ್‌ಗಳು ಸಂಚರಿಸದ ಸ್ಥಿತಿಯಿದೆ. ಕೆರಾಡಿಯ ಬೆಳ್ಳಾಲಕ್ಕೆ ಪರವಾನಿಗೆ ಇದ್ದರೂ ಬಸ್‌ ಬರುತ್ತಿಲ್ಲ. ಹಕ್ಲಾಡಿ, ನೂಜಾಡಿ, ಕುಂದಬಾರಂದಾಡಿ ಭಾಗದ ಸ್ಥಿತಿಯೂ ಇದೆ ಆಗಿದೆ. ಇಲ್ಲಿ ಪಂಚಾಯತ್‌ನವರು ಅನೇಕ ಸಮಯಗಳಿಂದ ಮನವಿ ಮಾಡುತ್ತಿದ್ದರೂ, ಯಾವುದೇ ಸ್ಪಂದನೆಯೇ ಇಲ್ಲದಾಗಿದೆ.

ಇದಿಷ್ಟೇ ಅಲ್ಲದೆ ಉದಯಪುರ – ಕುಂದಾಪುರ, ಕುಂದಾಪುರ- ಮೂಡುಬಗೆ- ಆಜ್ರಿ – ಕಮಲಶಿಲೆ, ಕುಂದಾಪುರ- ಆಜ್ರಿ- ಸಿದ್ದಾಪುರ- ಉಡುಪಿ, ಕುಂದಾಪುರ- ಆಜ್ರಿ- ಸಿದ್ದಾಪುರ- ಧರ್ಮಸ್ಥಳ, ಕುಂದಾಪುರ -ಸಿದ್ದಾಪುರ- ಹೊಸಂಗಡಿ, ಕುಂದಾಪುರ-ಗಿಳಿಯಾರು- ಹೆಸ್ಕ ತ್ತೂರು, ಕುಂದಾಪುರ- ಗಂಗೊಳ್ಳಿ ಇವುಗಳಲ್ಲಿ ಕೆಲವು ಮಾರ್ಗಗಳಲ್ಲಿ ಸೀಮಿತ ಬಸ್‌ ಮಾತ್ರ ಸಂಚರಿಸುತ್ತಿದ್ದು, ಇನ್ನು ಕೆಲವು ಮಾರ್ಗಗಳಲ್ಲಿ ಪರವಾನಿಗೆ ಇದ್ದರೂ ಯಾವುದೇ ಬಸ್‌ಗಳು ಸಹ ಸಂಚರಿಸುತ್ತಿಲ್ಲ.

ದೂರಿತ್ತರೂ ಪ್ರಯೋಜನವಿಲ್ಲ

ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಅನೇಕ ಬಾರಿ ವಿವಿಧ ಹೋರಾಟಗಳನ್ನು ಮಾಡಿ ಮನವಿಗಳನ್ನು ಈ ಕ್ಷೇತ್ರದ ಶಾಸಕರಿಗೆ, ಎಸಿ, ತಹಶೀಲ್ದಾರ್‌, ಜಿಲ್ಲಾಧಿಕಾರಿಗೆ ಹಾಗೂ ಸಂಬಂಧಪಟ್ಟ ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಕೆಲವು ಕಡೆಗಳಲ್ಲಿ ಬಸ್‌ ಸಂಚರಿಸದಿರಲು ಕೆಎಸ್‌ ಆರ್‌ಟಿಸಿ ಅಧಿಕಾರಿಗಳೇ ಖಾಸಗಿಯವರೊಂದಿಗೆ ಶಾಮೀಲಾಗಿದ್ದಾರೆಯೇ ಅನ್ನುವ ಆರೋಪ ಸಾರ್ವಜನಿಕರದು.

Advertisement

ಸಿಬಂದಿ ಕೊರತೆ

ಪರವಾನಿಗೆ ಇದ್ದರೂ, ಕೆಲವು ಮಾರ್ಗಗಳಲ್ಲಿ ಬಸ್‌ ಸಂಚರಿಸದಿರಲು ಮುಖ್ಯ ಕಾರಣ ಸಿಬಂದಿ ಕೊರತೆ. ಕುಂದಾಪುರ ಉಪ ವಿಭಾಗದಲ್ಲಿ ಚಾಲಕ – ನಿರ್ವಾಹಕರು ಸೇರಿ ಸದ್ಯ 274 ಸಿಬಂದಿಯಿದ್ದಾರೆ. ಸುಮಾರು 15 ಸಿಬಂದಿ ಕೊರತೆಯಿದೆ. 103 ಬಸ್‌ಗಳಿದ್ದು, ಸ್ಥಳೀಯ ಹಾಗೂ ದೂರ ಮಾರ್ಗ ಸೇರಿದಂತೆ ಒಟ್ಟು 92 ಮಾರ್ಗಗಳಲ್ಲಿ ಬಸ್‌ ಸಂಚಾರವಿದೆ.

ಪ್ರತಿಭಟನೆ ಎಚ್ಚರಿಕೆ

ಕುಂದಾಪುರದಿಂದ ಗ್ರಾಮೀಣ ಭಾಗಗಳಿಗೆ ಮುಖ್ಯವಾಗಿ ಬೆಳಗ್ಗೆ ಹಾಗೂ ಸಂಜೆಯ ವೇಳೆಗೆ ಸರಿಯಾದ ಬಸ್‌ ಸೌಕರ್ಯವಿಲ್ಲದೆ ಶಾಲಾ – ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು, ಕೆಲಸಕ್ಕೆ ಹೋಗುವ, ಕಚೇರಿ ಕಾರ್ಯಗಳಿಗಾಗಿ ಹೋಗಿ ಬರುವ ಜನರಿಗೆ ತುಂಬಾ ಸಮಸ್ಯೆಯಾಗುತ್ತಿದೆ. ಆದಷ್ಟು ಬೇಗ ಅಗತ್ಯವಿರುವ ಕಡೆಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರ ಆರಂಭಿಸಬೇಕು, ಇಲ್ಲದಿದ್ದರೆ ಡಿಪ್ಪೋ ಎದುರು ಮುಷ್ಕರ ಹೂಡುವುದಾಗಿ ಸಾರ್ವಜನಿಕರು ಎಚ್ಚರಿಸಿದ್ದಾರೆ.

ಪ್ರಸ್ತಾವನೆ ಸಲ್ಲಿಸಲಾಗಿದೆ: ಖಾಲಿ ಹುದ್ದೆ ಭರ್ತಿಗೆ ನಮ್ಮ ಕಡೆಯಿಂದ ಈಗಾಗಲೇ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅದಿನ್ನು ಅನುಮೋದನೆಯಾಗಿ, ಆ ಬಳಿಕ ನೇಮಕಾತಿ ಆದೇಶ ಬರಬೇಕಿದೆ. ಆದರೆ ಯಾವುದೇ ಬಸ್‌ಗಳ ಸಂಚಾರವನ್ನು ಕಡಿತಗೊಳಿಸಿಲ್ಲ. ಬೆಳ್ಳಾಲಕ್ಕೆ ಶಾಸಕರು ಮನವಿ ಸಲ್ಲಿಸಿದ್ದು, ಹೊಸ ಬಸ್‌ ಬೇಕಿದೆ. ಬಾಕಿ ಎಲ್ಲ ಕಡೆ ಎಂದಿನಂತೆ ಬಸ್‌ಗಳು ಸಂಚರಿಸುತ್ತಿವೆ. – ರಾಜೇಶ್‌ ಶೆಟ್ಟಿ, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ, ಮಂಗಳೂರು

ಅನೇಕ ಸಲ ಮನವಿ: ನಾನೇ ಸ್ವತಃ ಡಿಪೋ ಮ್ಯಾನೇಜರ್‌, ಕೆಎಸ್‌ಆರ್‌ ಟಿಸಿ ಡಿಸಿಗೆ ಮನವಿ ಮಾಡಿ, ಅಗತ್ಯವಿರುವ ಕಡೆಗಳಲ್ಲಿ ಕೂಡಲೇ ಬಸ್‌ ಆರಂಭಿಸುವಂತೆ ಸೂಚಿಸಿದ್ದೇನೆ. ಕೆರಾಡಿ ಹಾಗೂ ಮಾರಣಕಟ್ಟೆ ಕಡೆಗೆ ನನ್ನ ಮನವಿಯಂತೆ ಬಸ್‌ ಸಂಚಾರ ಆರಂಭಗೊಂಡಿದೆ. ಬಾಕಿ ಉಳಿದಿರುವ ಕಡೆಗಳಿಗೂ ಆದಷ್ಟು ಬೇಗ ಬಸ್‌ ಆರಂಭಿಸಬೇಕು. ಸಿಬಂದಿ ಕೊರತೆ ಬಗ್ಗೆ ಸಚಿವ ಶ್ರೀರಾಮುಲು ಅವರ ಗಮನಕ್ಕೂ ತರಲಾಗಿದೆ. – ಬಿ.ಎಂ. ಸುಕುಮಾರ್‌ ಶೆಟ್ಟಿ, ಬೈಂದೂರು ಶಾಸಕರು

Advertisement

Udayavani is now on Telegram. Click here to join our channel and stay updated with the latest news.

Next