Advertisement

Kundapura ದೊಡ್ಡಾಸ್ಪತ್ರೆಗೆ ವೈದ್ಯರ ಕೊರತೆ

01:51 PM Dec 21, 2024 | Team Udayavani |

ಕುಂದಾಪುರ: ಕುಂದಾಪುರ, ಬೈಂದೂರು ತಾಲೂಕಿಗೆ ಪ್ರಮುಖವಾಗಿ, ಹೆಬ್ರಿ, ಬ್ರಹ್ಮಾವರ, ಭಟ್ಕಳದಿಂದ ರೋಗಿಗಳು ಬರುವ ದೊಡ್ಡಾಸ್ಪತ್ರೆ ಎಂದೇ ಖ್ಯಾತವಾದ ಇಲ್ಲಿನ ಸರಕಾರಿ ಉಪವಿಭಾಗ ಆಸ್ಪತ್ರೆಯಲ್ಲಿ ದಿನಕಳೆದಂತೆ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಚಿಕಿತ್ಸೆಯ ಕುರಿತು ಉತ್ತಮ ಪ್ರತಿಕ್ರಿಯೆ ಇದೆ. ಆದರೆ ಆಸ್ಪತ್ರೆಯಲ್ಲಿ ಇರಬೇಕಾದಷ್ಟು ಪ್ರಮಾಣದಲ್ಲಿ ವೈದ್ಯರು, ಸಿಬಂದಿಗಳಿಲ್ಲ. ರಾತ್ರಿ ವೇಳೆ ಭದ್ರತೆಗೆ ಸಿಬಂದಿಯೇ ಇಲ್ಲ.

Advertisement

ರಾಜ್ಯ ಸರಕಾರದ ಕಾಯಕಲ್ಪ ಪ್ರಶಸ್ತಿ ಪಡೆದ ಈ ಸರಕಾರಿ ಆಸ್ಪತ್ರೆಯಲ್ಲಿ 91 ಹುದ್ದೆ ಮಂಜೂರಾಗಿ 52 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ವೈದ್ಯರು, ಬಿ ದರ್ಜೆ, ಸಿ ದರ್ಜೆ, ಡಿ ದರ್ಜೆ ಎಂದು 39 ಹುದ್ದೆಗಳು ಖಾಲಿ ಇವೆ. ಒಬ್ಬರು ಆರೋಗ್ಯ ನಿರೀಕ್ಷಣಾಧಿಕಾರಿ ಇಲ್ಲಿ ವೇತನ ಪಡೆಯುತ್ತಿದ್ದರೂ ಜಾಲಿ ಪಟ್ಟಣ ಪಂಚಾಯತ್‌ನಲ್ಲಿ ನಿಯೋಜನೆ ಮೇರೆಗೆ ಕಾರ್ಯನಿರ್ವಹಿಸುತ್ತಿದ್ದಾರೆ.

ತಾಯಿ ಮಕ್ಕಳ ಆಸ್ಪತ್ರೆಗೆ 16 ಹುದ್ದೆ ಮಂಜೂರಾಗಿದ್ದು 4 ಹುದ್ದೆ ಖಾಲಿಯಿದೆ. 5 ಶುಶ್ರೂಷಾಧಿಕಾರಿ ಹುದ್ದೆ ಖಾಲಿಯಿದ್ದು, ಗುತ್ತಿಗೆ ಆಧಾರದಲ್ಲಿ ಇಬ್ಬರ ಸೇವೆ ಪಡೆಯಲಾಗಿದೆ. ಸಿ ವೃಂದದ 11 ಹುದ್ದೆಗಳ ಪೈಕಿ 3 ಮಾತ್ರ ಖಾಯಂ ಉದ್ಯೋಗಿಗಳು, ಐವರು ಗುತ್ತಿಗೆ ಆಧಾರದಲ್ಲಿದ್ದಾರೆ. ರಾಷ್ಟ್ರೀಯ ಆರೋಗ್ಯ ಅಭಯಾನದಡಿ 54 ಹುದ್ದೆಗಳು ಮಂಜೂರಾಗಿದ್ದು 4 ಹುದ್ದೆಗಳು ಖಾಲಿಯಿವೆ. ಆದರೆ ಉಡುಪಿಯಿಂದ ಹೆಚ್ಚುರಿ ಸಿಬಂದಿಯನ್ನು ನಿಯೋಜನೆ ಮಾಡಲಾಗಿದೆ. ಹಾಗಾಗಿ 64 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ.

ಎರಡೂ ಆಸ್ಪತ್ರೆಗಳಲ್ಲಿ ಒಟ್ಟು ಸೇರಿ ಮಂಜೂರಾದ ಹುದ್ದೆ 164. ಹೆಚ್ಚುವರಿ ನಿಯೋಜನೆ ಮೇಲೆ ಇಲ್ಲಿ ಇರುವವರು 14. ಕಾರ್ಯನಿರ್ವಹಿಸುತ್ತಿರುವವರ ಸಂಖ್ಯೆ 104. ಆಯುಷ್ಮಾನ್‌ ಭಾರತ ಯೋಜನೆಯ ಮಂಜೂರಾದ 3 ಹುದ್ದೆಗಳು ಕೂಡ ಖಾಲಿಯಿವೆ. 50 ಹುದ್ದೆ ಖಾಲಿ ಇವೆ.

ಲಕ್ಷ್ಯ ಪ್ರಶಸ್ತಿ ಬಂದರೂ ನಿರ್ಲಕ್ಷ್ಯ!
ಡಾ| ಜಿ. ಶಂಕರ್‌ ಅವರು ಕಟ್ಟಿಸಿಕೊಟ್ಟ ಕಟ್ಟಡದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಾರ್ಯನಿರ್ವಹಿಸುತ್ತಿದ್ದು 100 ಹಾಸಿಗೆಗಳನ್ನು ಒಳಗೊಂಡಿದೆ. ಮಾಸಿಕ ಸರಾಸರಿ 100ರಿಂದ 130 ಹೆರಿಗೆಗಳಾಗುತ್ತಿದ್ದು, ಕೇಂದ್ರ ಸರಕಾರದ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ನೀಡುವ ಲಕ್ಷ್ಯ ಪ್ರಶಸ್ತಿ ಪಡೆದಿದೆ. ಲಕ್ಷ್ಯ ಪ್ರಶಸ್ತಿ ಚೆಕ್‌ ಲಿಸ್ಟ್‌ ಪ್ರಕಾರ 4 ವೈದ್ಯಾಧಿ ಕಾರಿ, 4 ಹೌಸ್‌ ಕೀಪಿಂಗ್‌ ಸಿಬಂದಿ, 4 ಸೆಕ್ಯೂರಿಟಿ ಗಾರ್ಡ್‌ ಸಿಬಂದಿ ಇರಬೇಕು. ಆದರೆ ಇಲ್ಲಿಗೆ ಈ ಹುದ್ದೆಗಳು ಮಂಜೂರಾಗಿಯೇ ಇಲ್ಲ. ಆಸ್ಪತ್ರೆಯಲ್ಲಿ ಲಕ್ಷ್ಯ ಕಾರ್ಯಕ್ರಮದಡಿ ಕರ್ತವ್ಯ ನಿರ್ವಹಿಸುತ್ತಿರುವ ಇಬ್ಬರು ಹೌಸ್‌ ಕೀಪಿಂಗ್‌ ಸೆಕ್ಯೂರಿಟಿ ಗಾರ್ಡ್‌ಗಳನ್ನು ತಾಯಿ ಮತ್ತು ಮಕ್ಕಳ ಆಸ್ಪತ್ರೆ ಉಡುಪಿಗೆ ಮರು ನಿಯೋಜಿಸುವಂತೆ ಆದೇಶಿಸಲಾಗಿದೆ. ಇಲ್ಲಿ ಈಗಾಗಲೇ ಗ್ರೂಪ್‌ ಡಿ ಸಿಬಂದಿ ಕಡಿಮೆಯಿದ್ದು ಎಲ್ಲ ವಾರ್ಡುಗಳಿಗೆ ಪಾಳಿಯಲ್ಲಿ ಕರ್ತವ್ಯ ಹಂಚಿಕೆಗೆ ಹಾಗೂ ಆಸ್ಪತ್ರೆಯ ಶುಚಿತ್ವ ನಿರ್ವಹಣೆಗೆ ಸವಾಲಾಗಿದೆ.

Advertisement

ಇಲ್ಲಿ ಚಿಕಿತ್ಸೆಗಾಗಿ ಎಲ್ಲವೂ ಇದೆ
ದಿನದ 24 ಗಂಟೆಗಳ ಕಾಲವೂ ಚಿಕಿತ್ಸೆ ಲಭ್ಯವಿದೆ. 3 ಆ್ಯಂಬುಲೆನ್ಸ್‌ ಇವೆ. ನಿತ್ಯ ಈ ಆಸ್ಪತ್ರೆಗೆ 450ಕ್ಕೂ ಹೆಚ್ಚು ಹೊರ ಮತ್ತು 110ರಷ್ಟು ಒಳ ರೋಗಿಗಳು ಬಂದು ಚಿಕಿತ್ಸೆ ಪಡೆದು, ಉಚಿತವಾಗಿ ಸರಕಾರ ನೀಡುವ ಔಷಧ ಪಡೆಯುತ್ತಾರೆ. ಕೋವಿಡ್‌ ಸಂದರ್ಭ ನೀಡಿದ ಚಿಕಿತ್ಸೆಗಾಗಿ ರಾಜ್ಯದಲ್ಲೇ ಗಮನ ಸೆಳೆದಿತ್ತು. ಹೆರಿಗೆ ಆಸ್ಪತ್ರೆ, ವಾಕ್‌ ಶ್ರವಣ ಕೇಂದ್ರ, ಆಕ್ಸಿಜನ್‌ ಕೇಂದ್ರವಿದೆ.

ಭದ್ರತೆಯಿಲ್ಲದೆ ವೈದ್ಯರಿಗೆ ಭಯ
ಇಲ್ಲಿ ರಾತ್ರಿ ಪಾಳಿಯಲ್ಲಿ ಭದ್ರತಾ ಸಿಬ್ಬಂದಿ ಇಲ್ಲ. ಹೀಗಾಗಿ ರಾತ್ರಿ ಪಾಳಿ ವೈದ್ಯರಿಗೆ ಆತಂಕ ಹೆಚ್ಚು. ಕೆಲವು ದಿನಗಳ ಹಿಂದೆ ವೈದ್ಯರ ಮೇಲೆ ಹಲ್ಲೆ ಯತ್ನನಡೆದು ಪ್ರಕರಣ ದಾಖಲಾಗಿತ್ತು. ಇಲ್ಲಿ ಮೊದಲು ಪೊಲೀಸ್‌ ಕರ್ತವ್ಯ ನಿರ್ವಹಣೆ ಇತ್ತು.

ಸಚಿವರಿಗೆ ಮನವಿ
ಆಸ್ಪತ್ರೆಗೆ ವೈದ್ಯಾಧಿಕಾರಿ, ಹೌಸ್‌ ಕೀಪಿಂಗ್‌, ಸೆಕ್ಯೂರಿಟಿ ಗಾರ್ಡ್‌ ಸಿಬಂದಿಯನ್ನು ನೇಮಕ ಮಾಡುವಂತೆ ಸಚಿವ ದಿನೇಶ್‌ ಗುಂಡೂರಾವ್‌ ಅವರಿಗೆ ಮನವಿ ಮಾಡಲಾಗಿದೆ.

ಲಕ್ಷ್ಯ  ಪ್ರಶಸ್ತಿ ಮಾನದಂಡದಂತೆ ಸಿಬಂದಿಯ ನೇಮಕಕ್ಕೂ ಮನವಿ ಮಾಡಿದ್ದೇನೆ. ಆರೋಗ್ಯ ರಕ್ಷಾ ಸಮಿತಿ
ಸಭೆಯಲ್ಲಿಯೂ ಚರ್ಚೆಯಾಗಿದೆ.
-ಕಿರಣ್‌ ಕುಮಾರ್‌ ಕೊಡ್ಗಿ, ಶಾಸಕ, ಕುಂದಾಪುರ

-ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next