Advertisement

ಕೂದಲೆಳೆ ಸುಳಿವಿಂದ ಜೀವಾವಧಿ ಶಿಕ್ಷೆ!

06:36 AM Mar 12, 2019 | Team Udayavani |

ಬೆಂಗಳೂರು: “ಆರೋಪಿಗಳು ಕೂದಲೆಳೆ ಅಂತರದಲ್ಲಿ ತಪ್ಪಿಸಿಕೊಂಡರು’ ಅಥವಾ “ಪೊಲೀಸರು ಹೊಡೆದ ಗುಂಡಿನಿಂದ ಆರೋಪಿ ಕೂದಲೆಳೆ ಅಂತರದಲ್ಲಿ ತಪ್ಪಿಸಿಕೊಂಡ’ ಎಂಬ ಮಾತುಗಳನ್ನು ಅಪರಾಧ ಜಗತ್ತಿನಲ್ಲಿ ನಾವು ಆಗಾಗ ಕೇಳುತ್ತಲೇ ಇರುತ್ತೇವೆ. ಆದರೆ, ಇಲ್ಲೊಂದು ಪ್ರಕರಣದ ಆರೋಪಿಗಳಿಗೆ ಶಿಕ್ಷೆ ಕೊಡಿಸುವಲ್ಲಿ ಸಣ್ಣ ಸಣ್ಣ ಕೂದಲೆಳೆಗಳೇ ಪ್ರಮುಖ ಸಾಕ್ಷ್ಯಗಳಾಗಿ ಕೆಲಸ ಮಾಡಿವೆ.

Advertisement

ಹತ್ತು ವರ್ಷಗಳ ಹಿಂದೆ (2009) ನಗರವನ್ನು ಬೆಚ್ಚಿಬೀಳಿಸಿದ್ದ ಒಂದೇ ಕುಟುಂಬದ ಮೂವರ ಬರ್ಬರ ಹತ್ಯೆ ಪ್ರಕರಣದ ನಾಲ್ವರು ಆರೋಪಿಗಳಿಗೆ 66ನೇ ಸೆಷನ್ಸ್‌ ನ್ಯಾಯಾಲಯ ಸೋಮವಾರ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶಿಸಿದೆ. ರಾಮಮೂರ್ತಿನಗರದ ರಮೇಶ್‌, ಆತನ ಸ್ನೇಹಿತರಾದ ಲೋಕೇಶ್‌, ಮುರಳಿ ಮತ್ತು ಭಾಸ್ಕರ ಶಿಕ್ಷೆಗೊಳಗಾದವರು.

2009ರ ಅ.20ರಂದು ರಾಮಮೂರ್ತಿನಗರದ ಜಯಂತಿನಗರದಲ್ಲಿ ರಾಹುಲ್‌ದಾಸ್‌, ಅವರ ಪತ್ನಿ ಪುಷ್ಪಲತಾ ದಾಸ್‌ ಹಾಗೂ ದಂಪತಿಯ ಅಪ್ರಾಪ್ತ ಪುತ್ರಿ ಅಗ್ನಿಸಾದಾಸ್‌ ಅವರನ್ನು ಉಸಿರುಗಟ್ಟಿಸಿ ಕೊಲೆಗೈದಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ರಾಮಮೂರ್ತಿನಗರ ಪೊಲೀಸರು, ಸ್ಥಳದಲ್ಲಿ ದೊರೆತ ಆರೋಪಿಗಳ ತಲೆಕೂದಲುಗಳು, ಬೆರಳಚ್ಚು ಆಧರಿಸಿ ವೈಜ್ಞಾನಿಕ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿ, ಆರೋಪಪಟ್ಟಿ ಸಲ್ಲಿಸಿದ್ದರು.

ಈ ಪ್ರಕರಣದ ಸಂಬಂಧ ವಿಚಾರಣೆ ನಡೆಸಿದ 66ನೇ ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶರಾದ ಎ.ವಿಜಯನ್‌ ಅವರು, ಪ್ರಕರಣದಲ್ಲಿ ಆರೋಪಿಗಳು ತಪ್ಪಿತಸ್ಥರೆಂದು ಪರಿಗಣಿಸಿ ನಾಲ್ವರಿಗೂ ಜೀವವಾಧಿ ಶಿಕ್ಷೆ, ತಲಾ ಹತ್ತು ಸಾವಿರ ರೂ. ದಂಡ ಹಾಗೂ ಸಾಕ್ಷ ನಾಶ ಪಡಿಸಿದ ಆರೋಪದ ಮೇಲೆ ಏಳು ವರ್ಷ ಶಿಕ್ಷೆ, ಐದು ಸಾವಿರ ರೂ. ದಂಡ ವಿಧಿಸಿ ಆದೇಶಿಸಿದ್ದಾರೆ. ಸರ್ಕಾರಿ ಅಭಿಯೋಜಕರಾಗಿ ಸಿ.ಎಂ.ಬೆಳಲದವರ ವಾದ ಮಂಡಿಸಿದರು.

ಅಕ್ರಮ ಸಂಬಂಧಕ್ಕಾಗಿ ಕೊಲೆ: ರಾಹುಲ್‌ದಾಸ್‌ ದಂಪತಿ ಈ ಮೊದಲು ರಾಮಮೂರ್ತಿನಗರದಲ್ಲಿರುವ ಆರೋಪಿ ರಮೇಶ್‌ಗೆ ಸೇರಿದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಈ ವೇಳೆ ರಮೇಶ್‌ ಹಾಗೂ ರಾಹುಲ್‌ದಾಸ್‌ ಪತ್ನಿ ಪುಷ್ಪಲತಾದಾಸ್‌ ಅನೈತಿಕ ಸಂಬಂಧ ಹೊಂದಿದ್ದರು. ಈ ವಿಚಾರ ತಿಳಿದ ರಾಹುಲ್‌ದಾಸ್‌, ಕೂಡಲೇ ಮನೆ ಖಾಲಿ ಮಾಡಿ ಜಯಂತಿನಗರದ ಬಾಡಿಗೆ ಮನೆಯಲ್ಲಿ ವಾಸಮಾಡುತ್ತಿದ್ದರು.

Advertisement

ಆದರೂ ಪತ್ನಿ ಪುಷ್ಪಲತಾ ಮತ್ತು ರಮೇಶ್‌ ಅಕ್ರಮ ಸಂಬಂಧ ಮುಂದುವರಿಸಿದ್ದರು. ಹೀಗಾಗಿ ದಂಪತಿ ನಡುವೆ ಪದೇ ಪದೆ ಜಗಳ ನಡೆಯುತ್ತಿತ್ತು. ಇದರಿಂದ ಕೋಪಗೊಂಡಿದ್ದ ರಮೇಶ್‌, ತನ್ನ ಸ್ನೇಹಿತರಾದ ಲೋಕೇಶ್‌, ಮುರಳಿ ಮತ್ತು ಭಾಸ್ಕರಗೆ ಹಣದ ಆಮಿಷವೊಡ್ಡಿ ರಾಹುಲ್‌ದಾಸ್‌ ಕೊಲೆಗೆ ಸಂಚು ರೂಪಿಸಿದ್ದ.

ಉಸಿರುಗಟ್ಟಿಸಿ ಕೊಲೆ: ಈ ಸಂಬಂಧ 2009ರ ಅ.20ರಂದು ಸಂಜೆ 5.30ಕ್ಕೆ ರಮೇಶ್‌ ಸೂಚನೆ ಮೇರೆಗೆ ಲೋಕೇಶ್‌, ಮುರಳಿ ಮತ್ತು ಭಾಸ್ಕರ, ಜಯಂತಿನಗರದಲ್ಲಿರುವ ರಾಹುಲ್‌ದಾಸ್‌ ಮನೆಗೆ ಹೋಗಿದ್ದಾರೆ. ಮನೆಯಲ್ಲಿ ಒಬ್ಬರೇ ಇದ್ದ ರಾಹುಲ್‌ದಾಸ್‌ರನ್ನು ಉಸಿರುಗಟ್ಟಿಸಿ ಕೊಲೆಗೈದು, ಶವವನ್ನು ಶೌಚಾಲಯದಲ್ಲಿದ್ದ ನೀರು ತುಂಬಿದ ಬಕೆಟ್‌ನಲ್ಲಿ ತಲೆ ಮುಳುಗಿಸಿ, ಕಾಲುಗಳನ್ನು ಪೈಪ್‌ಗೆ ಕಟ್ಟಿ ಹಾಕಿದ್ದರು. ನಂತರ ಕೆಲ ಹೊತ್ತು ಅಲ್ಲಿಯೇ ಮದ್ಯ ಸೇವಿಸಿದ್ದಾರೆ.

ಅಷ್ಟರಲ್ಲಿ ಪುತ್ರಿ ಅಗ್ನಿಸಾ ದಾಸ್‌ರನ್ನು ಶಾಲೆಯಿಂದ ಕರೆದುಕೊಂಡು ಬಂದ ಪುಷ್ಪಲತಾ ದಾಸ್‌ರನ್ನು ಕಂಡ ಆರೋಪಿಗಳು, ತಾಯಿ ಮತ್ತು ಪುತ್ರಿಯನ್ನು ಕೊಣೆಯೊಂದಕ್ಕೆ ಎಳೆದೊಯ್ದು ಉಸಿರುಗಟ್ಟಿಸಿ ಕೊಲೆಗೈದು, ಶವಗಳನ್ನು ಸ್ನಾನದ ಕೋಣೆಯಲ್ಲಿ ನೀರು ತುಂಬಿದ ಟಬ್‌ನಲ್ಲಿ ಹಾಕಿ, ಪರಾರಿಯಾಗಿದ್ದರು. ಮೂರು ದಿನಗಳ ಬಳಿಕ ಘಟನೆ ಬೆಳಕಿಗೆ ಬಂದಿತ್ತು. ಇದು ಇಡೀ ನಗರವನ್ನೆ ಬೆಚ್ಚಿಬೀಳಿಸಿತ್ತು.

ಅಗ್ನಿಸಾ ಕೈಲಿ ಆರೋಪಿಗಳ ಕೂದಲು!: ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ರಾಮಮೂರ್ತಿನಗರ ಪೊಲೀಸರಿಗೆ, ಕೊಲೆಯಾದ ದಾಸ್‌ ದಂಪತಿಯ ಪುತ್ರಿ ಅಗ್ನಿಸಾ ದಾಸ್‌ ಅವರ ಕೈಯಲ್ಲಿ ಆರೋಪಿ ಭಾಸ್ಕರನ ತಲೆ ಕೂದಲುಗಳು ದೊರೆತಿದ್ದವು. ಕೊಲೆಯಾದ ಸ್ಥಳದಲ್ಲಿದ್ದ ಬೆಡ್‌ಶಿಟ್‌ನಲ್ಲಿ ಮುರಳಿ ಮತ್ತು ಭಾಸ್ಕರನ ತಲೆ ಕೂದಲುಗಳು ಬಿದ್ದಿದ್ದವು. ಜತೆಗೆ ಮದ್ಯದ ಬಾಟಲಿಗಳ ಮೇಲೆ  ಆರೋಪಿಗಳ ಬೆರಳಚ್ಚು ಸಿಕ್ಕಿತ್ತು. ಈ ಎಲ್ಲ ಸಾಕ್ಷ್ಯಗಳನ್ನು ಸಂಗ್ರಹಿಸಿ ವೈಜ್ಞಾನಿಕ ತನಿಖೆ ನಡೆಸಿದ ಪೊಲೀಸರು, ಆರೋಪಿಗಳನ್ನು ಬಂಧಿಸಿ, ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next