ತುಮಕೂರು: ನಿರುಪಯುಕ್ತ ವಸ್ತುಗಳನ್ನು ತುಂಬಿದ್ದ ಕೊಠಡಿಯಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಬೆಂಕಿ ಹೊತ್ತಿಕೊಂಡ ಪರಿಣಾಮ ವ್ಯಕ್ತಿಯೋರ್ವ ಸಜೀವ ದಹನವಾಗಿರುವ ಘಟನೆ ನಗರದ ಕ್ಯಾತ್ಸಂದ್ರದಲ್ಲಿ ನ.2ರ ಗುರುವಾರ ನಡೆದಿದೆ.
ಅಗ್ನಿ ಅವಘಡದಲ್ಲಿ ಸಜೀವ ದಹನವಾಗಿರುವ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ.
ಕ್ಯಾತ್ಸಂದ್ರದ ಎಸ್.ಎಲ್.ವಿ. ಫಾಸ್ಟ್‌ಪುಡ್‌ಗೆ ಹೊಂದಿಕೊಂಡಂತಿರುವ ಕಟ್ಟಡದ ಮೇಲ್ಭಾಗದ ಕೊಠಡಿಯಲ್ಲಿ ನಿರುಪಯುಕ್ತ ವಸ್ತುಗಳನ್ನು (ಗುಜರಿ) ತುಂಬಲಾಗಿತ್ತು. ರಾತ್ರಿ ಈ ಕೊಠಡಿಯಲ್ಲಿ ಶಾರ್ಟ್‌ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿದೆ ಎಂದು ಶಂಕಿಸಲಾಗಿದೆ.
ಈ ಕಟ್ಟಡದ ಮುಂಭಾಗದಲ್ಲೇ ಟ್ರಾನ್ಸ್‌ಫಾರ್ಮರ್ ಸಹ ಇದ್ದು, ವಿದ್ಯುತ್ ಲೈನ್‌ಗಳು ಹಾದು ಹೋಗಿವೆ. ಇದು ಸಹ ಶಾರ್ಟ್‌ಸರ್ಕ್ಯೂಟ್‌ಗೆ ಕಾರಣ ಇರಬಹುದು ಎಂದು ಹೇಳಲಾಗಿದೆ.
ಇದೇ ಕೊಠಡಿಯಲ್ಲಿ ಮಲಗಿದ್ದ ವ್ಯಕ್ತಿಗೆ ಬೆಂಕಿ ಹೊತ್ತಿಕೊಂಡಿರುವ ಅರಿವಿಲ್ಲದೆ ನಿದ್ದೆಗೆ ಜಾರಿದ್ದು, ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸಜೀವ ದಹನವಾಗಿದ್ದಾರೆ. ಅವರೊಂದಿಗೆ ಕೊಠಡಿಯಲ್ಲಿ ತುಂಬಿದ್ದ ನಿರುಪಯುಕ್ತ ವಸ್ತುಗಳು ಸಂಪೂರ್ಣ ಅಗ್ನಿಗೆ ಆಹುತಿಯಾಗಿವೆ.
ಈ ಕೊಠಡಿಯಲ್ಲಿ ಬೆಂಕಿ ಹೊತ್ತಿಕೊಂಡಿರುವ ಸುದ್ದಿ ತಿಳಿಯುತ್ತಿದ್ದಂತೆ ಕ್ಯಾತ್ಸಂದ್ರ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದರಾದರೂ ಅಷ್ಟರಲ್ಲಾಗಲೇ ಕೊಠಡಿಯೊಳಗೆ ಮಲಗಿದ್ದ ವ್ಯಕ್ತಿ ಸಜೀವ ದಹನವಾಗಿದ್ದರು. ಮೃತ ದೇಹವನ್ನು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.
ಈ ಸಂಬಂಧ ಕ್ಯಾತ್ಸಂದ್ರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.