ಕಾರವಾರ: ಜಿಲ್ಲೆಯಲ್ಲಿ ವರುಣನ ಆರ್ಭಟ ಮಂಗಳವಾರವೂ ಮುಂದುವರಿದಿದೆ. ಕರಾವಳಿಯಲ್ಲಿ ಭಾರೀ ಮಳೆ ಸುರಿಯಿತು. ಮಳೆಯ ಮನ್ಸೂಚನೆ ಅರಿತ ಜಿಲ್ಲಾಡಳಿತ ಕರಾವಳಿಯ 5 ತಾಲೂಕುಗಳಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಕಾರವಾರ ಮುಲ್ಲಾ ಸ್ಟಾಪ್‌ನಲ್ಲಿ ಮಾವಿನ ಮರ ಬಿದ್ದು ಗಂಟೆ ಕಾಲ ರಸ್ತೆ ಸಂಚಾರ ಅಸ್ತವ್ಯಸ್ತವಾಗಿತ್ತು. ಹೊನ್ನಾವರದ ಮುಗ್ವಾ ಗ್ರಾಮ ಜಲಾವೃತವಾಗಿದ್ದು, ಅಲ್ಲಿನ ಜನರನ್ನು ಭಾಸ್ಕೇರಿ ಶಾಲೆಗೆ ಸ್ಥಳಾಂತರಿಸಿ ಗಂಜಿ ಕೇಂದ್ರ ತೆರೆಯಲಾಗಿದೆ.
ಸಿದ್ದಾಪುರದಲ್ಲಿ ಮಳೆಯ ಅವಾಂತರ ಮುಂದುವರಿದಿದ್ದು, ಹಲವು ಕಡೆ ನದಿ ದಂಡೆ ಗ್ರಾಮಗಳಿಗೆ ನೀರು ನುಗ್ಗಿತು. ನಾಳೆ ಸಹ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಜಿಲ್ಲಾಡಳಿತ ಮಳೆಯ ಅವಘಡ ಎದುರಿಸಲು ಸಕಲ ಮುನ್ನೆಚ್ಚರಿಕೆ ವಹಿಸಿದೆ. ನಗರ, ಪಟ್ಟಣಗಳಲ್ಲಿ ಸ್ಥಳೀಯ ಆಡಳಿತಗಳು ಮಳೆಯ ತೊಂದರೆಗಳನ್ನು ನಿರ್ವಹಿಸಲು ಸನ್ನದ್ಧವಾಗಿದೆ.
ಮುಲ್ಲಾ ಸ್ಟಾಪ್‌ನಲ್ಲಿ ಉರುಳಿದ ಮರ: ಕಾರವಾರದ ಮುಖ್ಯ ರಸ್ತೆಯಲ್ಲಿ ಮರವೊಂದು ಉರುಳಿದ ಕಾರಣ ವಾಹನ ಸಂಚಾರಕ್ಕೆ ಅಡೆತಡೆಯಾಯಿತು. ತಕ್ಷಣ ನಗರಸಭೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಮರ ತೆರವು ಮಾಡುವ ಕಾರ್ಯಕ್ಕೆ ಮುಂದಾಯಿತು. 45 ನಿಮಿಷಗಳಲ್ಲಿ ಉರುಳಿದ ಮರ ತೆರವು ಮಾಡಿ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಟ್ಟಿತು. ಅನೇಕ ತಗ್ಗು ಪ್ರದೇಶಗಳು ಜಲಾವೃತವಾಗಿದ್ದವು. ಸಂಜೆ ಸ್ವಲ್ಪ ಮಳೆ ಕಡಿಮೆಯಾದ ಕಾರಣ ಪರಿಸ್ಥಿತಿ ನಿಯಂತ್ರಣಕ್ಕೆ ಬಂತು.
ಮಳೆಯ ವಿವರ: ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಒಟ್ಟು 965.7 ಮಿಮೀ ಮಳೆಯಾಗಿದ್ದು ಸರಾಸರಿ 87.8 ಮಿಮೀ ಮಳೆ ದಾಖಲಾಗಿದೆ. ಭಟ್ಕಳದಲ್ಲಿ ಭಾರೀ ಮಳೆ ಸುರಿದಿದೆ. ಕುಮಟಾ, ಅಂಕೋಲಾ, ಕಾರವಾರ ಕ್ರಮವಾಗಿ ನಂತರದ ಸ್ಥಾನಗಳಲ್ಲಿವೆ.
ಜುಲೈ ತಿಂಗಳ ಸಾಮಾನ್ಯ ಮಳೆಯ ಸರಾಸರಿ ಪ್ರಮಾಣ 991 ಮಿಮೀ ಇದ್ದು, ಇದುವರೆಗೆ ಸರಾಸರಿ 806.8 ಮಿಮೀ ಮಳೆ ದಾಖಲಾಗಿದೆ. ಈ ಅವಧಿಯಲ್ಲಿ ಅಂಕೋಲಾದಲ್ಲಿ 141 ಮಿಮೀ, ಭಟ್ಕಳ 228 ಮಿಮೀ, ಹಳಿಯಾಳ 3.2 ಮಿಮೀ, ಹೊನ್ನಾವರ 134.3 ಮಿಮೀ, ಕಾರವಾರ 137.3 ಮಿಮೀ, ಕುಮಟಾ 197.2 ಮಿಮೀ, ಮುಂಡಗೋಡ 5.6 ಮಿಮೀ, ಸಿದ್ದಾಪುರ 54.2 ಮಿಮೀ, ಶಿರಸಿ 31.5 ಮಿಮೀ, ಜೋಯಿಡಾ 11 ಮಿಮೀ ಯಲ್ಲಾಪುರ 22.4 ಮಿಮೀ ಮಳೆಯಾಗಿದೆ.