ಚಿಕ್ಕೋಡಿ: ಪ್ರಸಕ್ತ ವರ್ಷದ ಬೇಸಿಗೆಯಲ್ಲಿ ಜಲಮೂಲಗಳು ಬತ್ತಿ ಹೋಗಿದ್ದರ ಪರಿಣಾಮ ತಾಲೂಕಿನ ಶೇ.40ರಷ್ಟು ಕಬ್ಬು ಬಿಸಲಿನ ದಗೆಗೆ ಕಮರಿ ಹೋಗಿದೆ. ಇದರಿಂದ ಕೋಟ್ಯಂತರ ರೂ. ಆರ್ಥಿಕ ನಷ್ಟ ಹೊಂದಿರುವ ರೈತರಿಗೆ ದೊಡ್ಡ ಆಘಾತವಾಗಿದ್ದು, ಸರ್ಕಾರ ಸೂಕ್ತ ಸರ್ವೇ ಮಾಡಿ ಪರಿಹಾರ ಒದಗಿಸಬೇಕೆನ್ನುವುದು ರೈತ ಸಮುದಾಯ ಒತ್ತಾಯಿಸಿದೆ.
ಚಿಕ್ಕೋಡಿ ತಾಲೂಕಿನಲ್ಲಿ ಕೃಷ್ಣಾ, ದೂಧಗಂಗಾ, ವೇದಗಂಗಾ, ಪಂಚಗಂಗಾ ನದಿಗಳು ಹರಿದರೂ ಕೂಡಾ ಪ್ರಸಕ್ತ ವರ್ಷದಲ್ಲಿ ನೀರಿನ ಅಭಾವ ಮಾತ್ರ ರೈತರನ್ನು ಸಂಕಷ್ಟಕ್ಕೆ ಈಡು ಮಾಡಿದೆ. ಅನಾವೃಷ್ಟಿಯಿಂದ ನದಿಗಳು ಬತ್ತಿ ಹೊಗಿವೆ. ಬೆಳೆ ಸಕಾಲದಲ್ಲಿ ನೀರಾವರಿ ಸೌಕರ್ಯ ದೊರಕದೇ ಕಬ್ಬುಬೆಳೆ ಹಾಳಾಗುತ್ತಿದೆ. ತಾಲೂಕಿನಲ್ಲಿ ಒಟ್ಟು 103 ಗ್ರಾಮಗಳಿದ್ದು, ಆ ಪೈಕಿ 36 ಗ್ರಾಮಗಳು ಮಾತ್ರ ನದಿಗಳ ಹತ್ತಿರದಲ್ಲಿವೆ. ಉಳಿದ ಗ್ರಾಮಗಳು ನದಿಯಿಂದ ದೂರ ಇರುವುದರಿಂದ ಕುಡಿಯುವ ನೀರಿಗಾಗಿ ಪರದಾಡುವ ಪ್ರಸಂಗ ಬಂದೋದಗಿದೆ. ಅಲ್ಪಸ್ವಲ್ಪ ನೀರು ಎತ್ತ ಬೇಕಾದಲ್ಲಿ ವಿದ್ಯುತ್ ಕಡಿತ ಸಮಸ್ಯೆ ರೈತರನ್ನು ಕಾಡುತ್ತಿದೆ. ಪ್ರಸಕ್ತ ವರ್ಷ ದೂಧಗಂಗಾ ನದಿ ಹೊರತು ಪಡಿಸಿ ಕೃಷ್ಣಾ ನದಿ ತೀರದ ಹಾಗೂ ಇನ್ನುಳಿದ ಕಡೆಗಳಲ್ಲಿ ಕಬ್ಬು ಬೆಳೆಗಳಿಗೆ ನೀರು ಇಲ್ಲದೆ ಸಂಪೂರ್ಣ ಒಣಗಿ ಹೋಗುತ್ತಿದೆ. ಬೇಸಿಗೆ ಮಳೆ ಸಂಪೂರ್ಣ ಕೈಕೊಟ್ಟಿದ್ದರಿಂದ ಸುಮಾರು ಶೇ.40ರಷ್ಟ್ರು ಕಬ್ಬು ನಾಶವಾಗಿದೆ.
2002ರಿಂದ 2004ರ ವರೆಗೆ ಭೀಕರ ಬರಗಾಲ ಇದ್ದರೂ ಪ್ರಸಕ್ತ ಸಾಲಿನಷ್ಟು ನೀರಿನ ಸಮಸ್ಯೆ ಉಂಟಾಗಿರಲಿಲ್ಲ. 2005ರಿಂದ 2010ರವರಿಗೆ ಪ್ರವಾಹದಿಂದ ರೈತರು ಸಂಕಷ್ಟ ಅನುಭವಿಸಿದರೂ ಕಳೆದ 2010 ರಿಂದ 2018ರವರೆಗೆ ಮಳೆ ಪ್ರಮಾಣ ಕುಸಿಯುತ್ತಲೇ ಬಂದಿದೆ. ಮಡ್ಡಿ ಭಾಗದ ರೈತರ ಜೀವನ ಅಯೋಮಯ: ಕೃಷ್ಣಾ ಮತ್ತು ಉಪನದಿಗಳ ದಡದಲ್ಲಿರುವ ರೈತರ ಕಬ್ಬು ನೀರಿಲ್ಲದೆ ಒಣಗಿ ಹೋಗಿದೆ. ಇನ್ನು ಮಡ್ಡಿ ಭಾಗದ ರೈತರ ಗೋಳು ಅಯೋಮಯವಾಗಿದೆ. ಪ್ರಸಕ್ತ ವರ್ಷದಲ್ಲಿ ನದಿಗಳು ಬತ್ತಿ ಹೋಗಿವೆ. ಇನ್ನು ಮಡ್ಡಿ ಭಾಗದಲ್ಲಿರುವ ಕೊಳವೆಬಾವಿ, ಬಾವಿ, ಕೆರೆಗಳಂತೂ ಬಿಸಿಲಿನ ದಗೆಗೆ ಫೆಬ್ರವರಿ-ಮಾರ್ಚ್ ತಿಂಗಳಲ್ಲಿಯೇ ಬತ್ತಿ ಹೋಗಿವೆ. ಕಬ್ಬು ಬೆಳೆಯುವುದಂತೂ ಅಗಾದ ಮಾತು. ಆದರೆ ಪ್ರಸಕ್ತ ವರ್ಷದಲ್ಲಿ ಮುಂಗಾರು ಮಳೆ ಉತ್ತಮವಾದರೆ ಮಾತ್ರ ಮಡ್ಡಿ ಭಾಗದ ರೈತರ ಜೀವನ ಉಜ್ವಲವಾಗುತ್ತದೆ. ಆದರೆ ನದಿ ಪಾತ್ರದ ರೈತರ ಕಬ್ಬು ಮಾತ್ರ ಕೈಗೆಟಕುವುದು ಸುಲಭವಿಲ್ಲ.
ಕಬ್ಬು ಬೆಳೆಗಾರರ ಜೊತೆಗೆ ಸಕ್ಕರೆ ಕಾರ್ಖಾನೆಗಳೂ ಸಹ ಸಂಕಷ್ಟ ಅನುಭವಿಸುವ ಪ್ರಸಂಗ ಬಂದೋದಗಲಿದೆ. ಇನ್ನೊಂದಡೆ ಸಕ್ಕರೆ-ಬೆಲ್ಲದ ಬೆಲೆ ಗಗಣಕ್ಕೆ ಏರಿದರೂ ಕೂಡಾ ಕಬ್ಬಿಗೆ ವೈಜ್ಞಾನಿಕ ಬೆಲೆ ನೀಡಲು ಸಕ್ಕರೆ ಕಾರ್ಖಾನೆಗಳು ಹಿಂದೇಟು ಹಾಕುತ್ತಿರುವುದು ರೈತರಲ್ಲಿ ಮತ್ತಷ್ಟು ಅಸಮಾಧಾನ ಮೂಡಿಸಿದೆ. ಚಿಕ್ಕೋಡಿ ತಾಲೂಕಿನ ಕಬ್ಬು ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಗಳಿಗೂ ಸಾಗುತ್ತಿದೆ. ಆದರೆ ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಗಳು ಬೆಲೆ ನೀಡುವಷ್ಟು ರಾಜ್ಯದ ಗಡಿ ಭಾಗದ ಸಕ್ಕರೆ ಕಾರ್ಖಾನೆಗಳು ಏಕೆ? ನೀಡುತ್ತಿಲ್ಲ ಎಂಬುದು ಕಬ್ಬು ಬೆಳೆಗಾರರ ಆರೋಪವಾಗಿದೆ.
•ಮಹಾದೇವ ಪೂಜೇರಿ