ಉಡುಪಿ: ಕೋವಿಡ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಏಕಾಏಕಿ ಮಾರ್ಗಸೂಚಿ ಬದಲಾವಣೆ ಮಾಡಿದೆ. ರಾಜ್ಯಾದ್ಯಂತ ಹೊಸ ನಿಯಮಗಳು ಜಾರಿಗೆ ಬಂದಿವೆ.
ನೂತನ ನಿಯಮದಂತೆ ಇಂದು ( ಏಪ್ರಿಲ್ 22) ನಗರಸಭೆ ವ್ಯಾಪ್ತಿಯೊಳಗೆ ಅಗತ್ಯ ವಸ್ತುಗಳ ಅಂಗಡಿಗಳನ್ನು ಹೊರತುಪಡಿಸಿ ಉಳಿದ ಎಲ್ಲ ಅಂಗಡಿಗಳನ್ನು ನಗರಸಭೆ ಅಧಿಕಾರಿಗಳು ಬಂದ್ ಮಾಡಿಸಿದ್ದಾರೆ.
ಕಟಪಾಡಿಯಲ್ಲೂ ಬಂದ್:
ಸರಕಾರದ ಆದೇಶದಂತೆ ಪೊಲೀಸರು ಕಟಪಾಡಿಯಲ್ಲಿ ದಿನ ಅವಶ್ಯಕ ಸಾಮಾಗ್ರಿಗಳ ಅಂಗಡಿಗಳನ್ನು ಹೊರತುಪಡಿಸಿ ಇತರೆ ಅಂಗಡಿ- ಮುಂಗಟ್ಟುಗಳನ್ನು ಮುಚ್ಚುವಂತೆ ಸೂಚಿಸಿದ್ದಾರೆ.
ಇನ್ನು ಮೇ 4ರವರೆಗೆ ಅಗತ್ಯ ಸೇವೆ ಹೊರತುಪಡಿಸಿ ಎಲ್ಲಾ ಸೇವೆಗಳು ಬಂದ್ ಆಗಲಿವೆ ಎಂದು ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿಯಲ್ಲಿ ತಿಳಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪೊಲೀಸರು, ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸುತ್ತಿದ್ದಾರೆ. ಅಲ್ಲದೇ ನಿಯಮ ಉಲ್ಲಂಘನೆ ಮಾಡಿದರೆ ಕಠಿಣ ಕ್ರಮದ ಎಚ್ಚರಿಕೆ ನೀಡುತ್ತಿದ್ದಾರೆ.
ಖಾಸಗಿ ಸಂಸ್ಥೆಗಳಲ್ಲಿ ಕೂಡ ಅಗತ್ಯ ಸಿಬ್ಬಂದಿ ಹೊರತುಪಡಿಸಿ ಬೇರೆ ಸಿಬ್ಬಂದಿಗೆ ಅವಕಾಶವಿಲ್ಲ. ಔಷಧ ಅಂಗಡಿ, ದಿನಸಿ, ಹಣ್ಣು-ತರಕಾರಿ, ಸಲೂನ್ ಬ್ಯೂಟಿಪಾರ್ಲರ್, ವೈನ್ ಶಾಪ್ ಹೊರತುಪಡಿಸಿ ಉಳಿದೆಲ್ಲ ಅಂಗಡಿ, ಶಾಪಿಂಗ್ ಕಾಂಪ್ಲೆಕ್ಸ್, ಮಾಲ್ ಸೇರಿದಂತೆ ಎಲ್ಲಾ ಸೇವೆಗಳನ್ನು ಬಂದ್ ಮಾಡಲಾಗುತ್ತಿದೆ.