ಕುಷ್ಟಗಿ: ಪುರಸಭೆಯಿಂದ ಟಿಪ್ಪು ಸುಲ್ತಾನ್ ವೃತ್ತದವರೆಗೂ ಫುಟ್‌ಪಾತ್ ಒತ್ತುವರಿ ಮಾಡಿರುವ ಅಂಗಡಿಗಳ ತೆರವು ಕಾರ್ಯಾಚರಣೆಗೆ ಅಂಗಡಿಕಾರರ ಪ್ರತಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ತೆರವು ಕಾರ್ಯಚರಣೆ ಸ್ಥಗಿತಗೊಳಿಸಿ, ಸ್ವಯಂ ಪ್ರೇರಿತ ತೆರವಿಗೆ ಜ.7ರವರೆಗೆ ಗಡುವು ವಿಸ್ತರಿಸಲಾಯಿತು.
ಶುಕ್ರವಾರ ಬೆಳ್ಳಂ ಬೆಳಗ್ಗೆ ಜೆಸಿಬಿ ಹಾಗೂ ಪೌರ ಕಾರ್ಮಿಕರು ಬಸವೇಶ್ವರ ವೃತ್ತದ ಕೋರ್ಟ್ ಕಾಂಪೌಂಡ್ ತೆರವು ಕಾರ್ಯಚರಣೆಗೆ ಮಂದಾದರು. ಇದರಿಂದ ರೊಚ್ಚಿಗೆದ್ದ ವ್ಯಾಪರಸ್ಥರು ಪುರಸಭೆ ಮುಖ್ಯಾ ಧಿಕಾರಿ ಅಶೋಕ ಪಾಟೀಲ, ಜೆ.ಇ. ಚಿದಾನಂದ ವಿರುದ್ಧ ಹರಿಹಾಯ್ದರು. ಇದನ್ನು ಲೆಕ್ಕಿಸದ ಪುರಸಭೆ ಸಿಬ್ಬಂದಿ ತೆರವು ಕಾರ್ಯಚರಣೆ ಮುಂದುವರಿಸಿದಾಗ ವಿರೋಧದ ಮಧ್ಯೆ ಕೆಲವರು ಸ್ವಯಂ ಪ್ರೇರಿತವಾಗಿ ಅಂಗಡಿಯಲ್ಲಿನ ಸರಕು, ಸರಂಜಾಮು ಸ್ಥಳಾಂತರಿಸಲು ಮುಂದಾಗಿರುವುದು ಕಂಡು ಬಂತು.
ವಾಗ್ವಾದ: ಪುರಸಭೆಯವರು ಈ ರಸ್ತೆ ಒಂದು ಬದಿ ಅಂಗಡಿಗಳ ತೆರವಿಗೆ ಗುರುವಾರ ಮೌಖೀಕವಾಗಿ ಸೂಚನೆ ನೀಡಲಾಗಿತ್ತು. ಆದರೆ ಏಕಾಏಕಿ ತೆರವು ಹೇಗೆ ಸಾಧ್ಯ ಪ್ರಶ್ನಿಸಿದರು. ಪುಟ್‌ಪಾತ್‌ನಲ್ಲಿ ಸಾವಿರಾರು ರೂ. ವೆಚ್ಚ ಮಾಡಿ ಅಂಗಡಿ ಮಾಡಿಕೊಂಡಿದ್ದು, ತೆರವಿಗೆ ಕಾಲಾವಕಾಶ ನೀಡದಿರುವುದಕ್ಕೆ ಪುರಸಭೆ ಸಿಬ್ಬಂದಿಯೊಂದಿಗೆ ವಾಗ್ವಾದಕ್ಕಿಳಿದರು. ಪುರಸಭೆಯ 50ಕ್ಕೂ ಹೆಚ್ಚು ಮಳಿಗೆಗಳಿದ್ದು ಅವುಗಳನ್ನು ಬಾಡಿಗೆ ನೀಡಿಲ್ಲ. ಬಡವರು ಬೀದಿಗೆ ಬರುವಂತೆ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಯಾಚರಣೆಗೆ ಅಡ್ಡಿ: ಈ ರಸ್ತೆಯಲ್ಲಿ ವಾಹನ ಸಂಚಾರ ಕಡಿಮೆ, ನಗರ ಸ್ವತ್ಛತೆ ಸೌಂದರ್ಯದ ನೆಪದಲ್ಲಿ ಬಡ ವ್ಯಾಪಾರಸ್ಥರನ್ನು ಒಕ್ಕಲೆಬ್ಬಿಸುತ್ತಿದ್ದಾರೆ ಎಂದು ಆಕ್ರೋಶವ್ಯಕ್ತಪಡಿಸಿದರು. ಈ ವೇಳೆ ಮಧ್ಯೆ ಪ್ರವೇಶಿಸಿದ ಜಿಪಂ ಮಾಜಿ ಸದಸ್ಯ ಪರಸಪ್ಪ ಕತ್ತಿ, ಅಂಗಡಿಕಾರರ ಪರವಾಗಿ ನಿಂತು ಪುರಸಭೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ತೆರವು ಕಾರ್ಯಚರಣೆಗೆ ಅಡ್ಡಿಪಡಿಸಿದರು.
ಪರಿಸ್ಥಿತಿ ವಿಕೋಪಕ್ಕೆ ತಿರುಗುವುದನ್ನು ಅರಿತ ಪೊಲೀಸರು ಠಾಣೆಯಲ್ಲಿ ಪುರಸಭೆ ಅಧಿ ಕಾರಿಗಳು ಹಾಗೂ ಅಂಗಡಿಕಾರರ ಸಭೆ ನಡೆಸಿದರು. ಈ ವೇಳೆ ಮಾತನಾಡಿದ ಸಿಪಿಐ ಜಿ. ಚಂದ್ರಶೇಖರ, ಪುಟ್‌ಪಾತ್ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿದ್ದು, ಪುಟ್‌ಪಾತ್ ನಿರ್ಮಿಸಬೇಕಿದೆ. ವ್ಯಾಪಾರಸ್ಥರು ಸಹಕರಿಸಿ ಜ. 7ರಂದು ಸಂಜೆ ವೇಳೆ ಸ್ವಯಂ ಪ್ರೇರಣೆಯಿಂದ ತೆರವುಗೊಳಿಸಬೇಕು. ಇಲ್ಲವಾದರೆ ಮಾರನೆ ದಿನ ಪುರಸಭೆಯೇ ತೆರವು ಕಾರ್ಯಾಚರಣೆ ಮುಂದುವರಿಸುತ್ತದೆ ಎಂದು ಹೇಳಿದರು. ಇದಕ್ಕೆ ವ್ಯಾಪಾರಸ್ಥರ ಸಮ್ಮತಿಯೂ ವ್ಯಕ್ತವಾಯಿತು.