ಹುಬ್ಬಳ್ಳಿ: ಬೆಳಕಿನ ಹಬ್ಬದ ದೀಪಾವಳಿ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಜನರು ಹಬ್ಬದ ವಸ್ತುಗಳ ಖರೀದಿಗೆ ಮುಂದಾಗಿದ್ದಾರೆ. ಕೋವಿಡ್-19 ಹಿನ್ನೆಲೆಯಲ್ಲಿ ಹಬ್ಬದ ಸಂಭ್ರಮ-ಸಡಗರ ಮರೆತಿದ್ದ ಜನರು ದೀಪಾವಳಿ ಆಚರಣೆಗೆ ಹೆಚ್ಚಿನ ಆಸಕ್ತಿ ತೋರಿದ್ದಾರೆ. ಒಂದೆಡೆ ಕರಿನೆರಳಿದ್ದರೂ ಅದಾವುದನ್ನು ಲೆಕ್ಕಿಸದೆ ಜನರು ಹಬ್ಬದ ಖರೀದಿಗೆ ಮುಗಿಬಿದ್ದಿರುವುದು ಕಂಡು ಬಂದಿತು.
ಕೋವಿಡ್ ಸೋಂಕಿನಿಂದಾಗಿ ಕಳೆದ ಏಳು ತಿಂಗಳಿನಿಂದ ಹಬ್ಬದ ಸಂಭ್ರಮ ಸಡಗರವೇ ಮರೆಯಾಗಿದೆ. ಆದರೆ ಇದೀಗ ಸೋಂಕಿನ ಭಯದಿಂದ ಕೊಂಚ ಹೊರಬಂದಂತಿರುವ ಜನರು ಹಬ್ಬದ ಖರೀದಿಗೆ ಹೆಚ್ಚಿನ ಆಸಕ್ತಿ ತೋರಿದ್ದಾರೆ. ರವಿವಾರ ನಗರದ ಪ್ರಮುಖ ಮಾರುಕಟ್ಟೆಗಳು ಜನಜಂಗುಳಿಯಿಂದ ತುಂಬಿದ್ದವು. ಕೆಲ ಮಾರುಕಟ್ಟೆಗಳಲ್ಲಂತೂ ಕಾಲಿಡಲು ಜಾಗವಿಲ್ಲದಂತಿತ್ತು. ದೀಪಾವಳಿಗೆ ಐದಾರು ದಿನಗಳು ಬಾಕಿ ಇರುವುದರಿಂದ ರವಿವಾರದ ರಜಾದಿನವನ್ನು ಖರೀದಿಗೆ ಮೀಸಲಿಟ್ಟಂತಿತ್ತು. ಬಟ್ಟೆ, ಅಲಂಕಾರಿಕ ವಸ್ತುಗಳು, ದೀಪಗಳ ಖರೀದಿ ಸೇರಿದಂತೆ ಹಬ್ಬದ ಆಚರಣೆಗೆ ಬೇಕಾದ ವಸ್ತುಗಳ ಖರೀದಿ ಜೋರಾಗಿತ್ತು.
ಬಟ್ಟೆ ಅಂಗಡಿ ಗಿಜಿಗಿಜಿ : ದಾಜೀಬಾನ ಪೇಟೆ, ದುರ್ಗದ ಬಯಲು, ಶಾಹ ಬಜಾರ ಸೇರಿದಂತೆ ನಗರದೆಲ್ಲೆಡೆ ಇರುವ ಬಟ್ಟೆ ಅಂಗಡಿಗಳು ಜನರಿಂದ ತುಂಬಿ ತುಳುಕುತ್ತಿವೆ. ಇನ್ನು ಗೋಕುಲ ರಸ್ತೆ, ಕೋಯಿನ್ ರಸ್ತೆಗಳಲ್ಲಿರುವ ಮಾಲ್‌ಗಳಲ್ಲಿ ಹಬ್ಬದ ಖರೀದಿ ಜೋರಾಗಿ ನಡೆಯುತ್ತಿದೆ. ಬೆಳಕಿನ ಹಬ್ಬವಾಗಿದ್ದರಿಂದ ಹೊಸ ಬಟ್ಟೆಗಳ ಖರೀದಿಗೆ ಹೆಚ್ಚು ಗಮನ ಹರಿಸಿರುವುದು ಕಂಡುಬಂತು. ಆಕಾಶಬುಟ್ಟಿ, ಪ್ಲಾಸ್ಟಿಕ್ ಮಾವಿನ ತೋರಣ, ಹಣತೆ, ಮತ್ತಿತರ ಅಲಂಕಾರಿಕ ವಸ್ತುಗಳಿಗೆ ಗೃಹಿಣಿಯರು ಹೆಚ್ಚಿನ ಆಸಕ್ತಿ ತೋರಿದ್ದರು. ತಾತ್ಕಾಲಿಕವಾಗಿ ಹಾಕಲಾಗಿದ್ದ ಅಂಗಡಿ ಮುಂಗಟ್ಟುಗಳ ಮುಂದೆ ಜನರು ಖರೀದಿಗೆ ಮುಗಿಬಿದ್ದಿದ್ದರು.
ಹಬ್ಬ ಬಂತು, ಕೋವಿಡ್ ಹೋಯಿತು! : ಆರೇಳು ತಿಂಗಳಿನಿಂದ ಜನರು ಕೋವಿಡ್ ಹಾವಳಿಯಿಂದ ಸಾಂಪ್ರದಾಯಿಕವಾಗಿ ಸರಳವಾಗಿ ಹಬ್ಬಗಳನ್ನು ಆಚರಿಸಿದ್ದರು. ಆದರೆ ಕೋವಿಡ್ ಹಾವಳಿ ಕಡಿಮೆ ಆಗುತ್ತಿರುವ ಹಿನ್ನೆಲೆಯಲ್ಲಿ ಜನರು ಭೀತಿಯಿಂದ ಹೊರಬಂದು ಖರೀದಿಯಲ್ಲಿ ತೊಡಗಿದ್ದರು. ಸಾಮಾಜಿಕ ಅಂತರವಿರಲಿಲ್ಲ. ಮಾಸ್ಕ್, ಸ್ಯಾನಿಟೈಸರ್ ಇರಲಿಲ್ಲ. ಕೆಲವೇ ಕೆಲವು ಅಂಗಡಿ ಮುಂಗಟ್ಟುಗಳಲ್ಲಿ ಸಾಮಾಜಿಕ ಅಂತರ ಹಾಗೂ ಮಾಸ್ಕ್ ಕಡ್ಡಾಯ ಕಂಡುಬಂತು.
ಸಂಚಾರ ದಟ್ಟಣೆ : ರಜೆಯ ದಿನವಾಗಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಮಾರುಟ್ಟೆಗೆ ಆಗಮಿಸಿದ್ದರಿಂದ ಸಂಚಾರ ದಟ್ಟಣೆ ಹೆಚ್ಚಾಗಿತ್ತು. ಸಂಜೆ ವೇಳೆ ನಡೆದುಕೊಂಡು ಸಹಜವಾಗಿ ಹೋಗುವುದು ಕೂಡ ಕಷ್ಟವಾಗಿತ್ತು. ದಾಜೀಬಾನ ಪೇಟೆ ಮುಖ್ಯ ರಸ್ತೆ, ಬ್ರಾಡ್‌ವೇ, ಕೊಪ್ಪಿಕರ ರಸ್ತೆ, ದುರ್ಗದ ಬಯಲು, ದಾಜೀಬಾನ ಪೇಟೆ, ಎಂ.ಜಿ. ಮಾರುಕಟ್ಟೆ, ಜನತಾ ಬಜಾರ ಮಾರುಕಟ್ಟೆ, ಕೊಯಿನ್ ರಸ್ತೆ, ಗೋಕುಲ ರಸ್ತೆ ಸೇರಿದಂತೆ ಬಹುತೇಕ ರಸ್ತೆಗಳು ವಾಹನಗಳಿಂದ ತುಂಬಿದ್ದವು.
ಹಬ್ಬಕ್ಕೆ ಸೀರೆ ಖರೀದಿ ಮಾಡಬೇಕೆಂದು ಮಾರುಕಟ್ಟೆಗೆ ಆಗಮಿಸಿದ್ದೆ. ಅಂಗಡಿಗಳನ್ನು ಸುತ್ತಾಡಿ ಸುಸ್ತಾಯ್ತು. ಅಂಗಡಿಗಳಲ್ಲಿ ಉಸಿರುಗಟ್ಟುವಷ್ಟು ಜನರು ತುಂಬಿದ್ದರು. ಸಾಮಾಜಿಕ ಅಂತರ ಕಾಯ್ದುಕೊಂಡು ಸೀರೆ ಖರೀದಿಸುವ ಮಾತೆಲ್ಲಿ?
–ಸಂಗೀತಾ ಪಟ್ಟಣದ, ಹಳೇಹುಬ್ಬಳ್ಳಿ ನಿವಾಸಿ
-ಬಸವರಾಜ ಹೂಗಾರ