ಕುಣಿಗಲ್: ಚೌಡೇಶ್ವರಿ ಹಾಗೂ ಹೆಬ್ಟಾರಮ್ಮ ದೇವರ ಮೆರವಣಿಗೆ ವೇಳೆ ಅಂಗಡಿ ಮನೆಯ ಸಜ್ಜ ಕಳಚಿ ಬಿದ್ದು 30ಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಘಟನೆ ತಾಲೂಕಿನ ಹುಲಿಯೂರುದುರ್ಗ ಹೋಬಳಿ ಉಜ್ಜನಿ ಗ್ರಾಮದಲ್ಲಿ ಬುಧವಾರ ಬೆಳಗಿನ ಜಾವ ಸಂಭವಿಸಿದೆ. ಘಟನೆಯಲ್ಲಿ ರಕ್ಷಿತಾ, ರಂಜಿತಾ, ದಾಸಪ್ಪ, ಶಿವಕುಮಾರ್, ಪದ್ಮಾ, ಲಕ್ಷ್ಮಮ್ಮ, ಪವನ್, ನಿಖೀಲ್, ಬೋರಯ್ಯ ಹಾಗೂ ನಾಗೇಶ್‌ಕುಮಾರ್ ಸೇರಿದಂತೆ ಸುಮಾರು 30ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಗಾಯಾಳುಗಳು ಕುಣಿಗಲ್ ಸರ್ಕಾರಿ ಆಸ್ಪತ್ರೆ, ಬೆಂಗಳೂರು ಹಾಗೂ ಮಂಡ್ಯ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ. ಗಾಯಾಳುಗಳು ಉಜ್ಜನಿ, ನಿಡಸಾಲೆ ಗ್ರಾಮದವರು ಎನ್ನಲಾಗಿದೆ.
ಜನರು ದಿಕ್ಕಾಪಾಲು: ಇದ್ದಕ್ಕಿದಂತೆ ಅಂಗಡಿ ಮನೆಯ ಸಜ್ಜ ಕಳಚಿ ಬಿದ್ದ ಭಾರೀ ಶಬ್ದ ದಿಂದ್ದಾಗಿ ಜನರು ದಿಕ್ಕಾಪಾಲಾಗಿ ಓಡಿದರು. ಗಾಯಗೊಂಡವರ ನೋವು, ಕಿರುಚಾಟ, ಕೂಗಾಟ ಮುಗಿಲು ಮುಟ್ಟಿತ್ತು. ಮಣ್ಣಿನಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಗಾಯಾಳುಗಳನ್ನು ಜನರು ಮೇಲೆತ್ತಿ ಆ್ಯಂಬುಲೆನ್ಸ್ ಹಾಗೂ ಖಾಸಗಿ ವಾಹನದಲ್ಲಿ ಆಸ್ಪತ್ರೆಗೆ ಸಾಗಿಸಿದರು.
ಘಟನೆ ಹಿನ್ನೆಲೆ: ಮಂಗಳವಾರ ಸಂಜೆ 5 ಗಂಟೆಗೆ ಅಗ್ನಿಕೊಂಡ ಪ್ರತಿಷ್ಠಾಪಿಸಿ ಬುಧವಾರ ಬೆಳಗಿನ ಜಾವ ಕೊಂಡ ಹಾಯಿಸಲು ಭಕ್ತರು ಸಕಲ ಸಿದ್ಧತೆ ಮಾಡಿಕೊಂಡಿದ್ದರು. ಆದರೆ, ನಿಡಸಾಲೆಯಿಂದ ಕರೆತಂದ ಚೌಡೇಶ್ವರಿ ದೇವಿ ಯನ್ನು ಸ್ಥಳೀಯ ಚೌಡೇಶ್ವರಿ ದೇವಿ ಭಕ್ತರು ಹಾಗೂ ಕರಗ ಹೊತ್ತಿದ ಹೆಬ್ಟಾರೆ ಗುಡ್ಡುರೆಂದು ಕರೆಸಿಕೊಳ್ಳುವ ಆರು ಮಂದಿ ದಲಿತರು ಉಜ್ಜನಿ ಚೌಡೇಶ್ವರಿ ದೇವಾಲಯಕ್ಕೆ ಕರೆ ತಂದು ಅಗ್ನಿಕೊಂಡ ಹಾಯುವುದು ಪದ್ಧತಿ. ಈ ನಿಟ್ಟಿನಲ್ಲಿ ಬುಧವಾರ ಬೆಳಗಿನ ಜಾವ 5-30 ರಲ್ಲಿ ಮೆರವಣಿಗೆ ಮೂಲಕ ನಿಡಸಾಲೆ ಚೌಡೇಶ್ವರಿ ಕರೆತರಲಾಗುತ್ತಿತ್ತು. ಇದನ್ನು ನೋಡಲು ಕಿಕ್ಕಿರಿದು ಜನ ಸೇರಿದ್ದರು.
ಗ್ರಾಮದ ಮುಖ್ಯ ದ್ವಾರದ ಸಮೀಪ ಇರುವ ಗೋವಿಂದಪ್ಪ ಅವರ ಹಳೇಯ ಬಿಲ್ಡಿಂಗ್ ಆಗಿದ್ದರಿಂದ ಜನರ ಭಾರ ಅತಿಯಾಗಿ ಸಜ್ಜ ಕಳಚಿ ಬಿದ್ದಿದೆ. ಸಜ್ಜ ಮೇಲೆ ನಿಂತಿದ್ದ ಹಾಗೂ ಸಜ್ಜ ಕೆಳಗೆ ನಿಂತಿದ್ದವರ ಮೇಲೆಯೂ ಬಿದ್ದ ಕಾರಣ ಸುಮಾರು 30ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಆದರೆ, ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಆದರೆ, ಘಟನೆ ನಡೆದ ಬಳಿಕ ಭಕ್ತರು ಉತ್ಸಾಹದಿಂದ ಅಗ್ನಿ ಕೊಂಡ ಹಾಯಿದರು.