ಬೆಂಗಳೂರು: ರಾಜಧಾನಿಯ ಉತ್ತರ ಭಾಗದ ಪಾತಕಲೋಕದಲ್ಲಿ ಹವಾ ಮೆಂಟೈನ್ ಮಾಡಬೇಕು ಎಂದು ನಿರಂತರ ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದ ಪುಡಿರೌಡಿ ಮುನಿರಾಜ ಅಲಿಯಾಸ್ ಮುನ್ನಾ (24) ಎಂಬಾತನಿಗೆ ನಂದಿನಿ ಲೇಔಟ್ ಠಾಣೆ ಪೊಲೀಸರು ಬಂದೂಕಿನ ಮೂಲಕ ಪಾಠ ಹೇಳಿ, ಗುರುವಾರ ಬಂಧಿಸಿದ್ದಾರೆ.
ಪುಡಿರೌಡಿ ಮುನ್ನಾ ತನ್ನ ಸಹಚರರ ಜತೆಗೂಡಿ ಮಾರ್ಚ್ 26ರಂದು ರಾತ್ರಿ ಹಳೆವೈಷಮ್ಯ ಹಿನ್ನೆಲೆಯಲ್ಲಿ ಸಂತೋಷ್ ಹಾಗೂ ಸುದೀಪ್ ಎಂಬುವವರ ಮೇಲೆ ಮಚ್ಚು ಸೇರಿದಂತೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದ.
ಪ್ರಕರಣ ಸಂಬಂಧ ತನಿಖೆ ಮುಂದುವರಿಸಿದ್ದು ಪ್ರಮುಖ ಆರೋಪಿ ಮುನ್ನಾ ಬಂಧನಕ್ಕೆ ಕಾರ್ಯಾಚರಣೆ ನಡೆಸಲಾಗುತ್ತಿದ್ದು. ಗುರುವಾರ ಬೆಳಿಗ್ಗೆ 6 ಗಂಟೆ ಸುಮಾರಿಗೆ ಮುನ್ನಾ ಬುದ್ಧನಗರದಲ್ಲಿರುವ ಬಗ್ಗೆ ಮಾಹಿತಿ ಆಧರಿಸಿ ಬಂಧಿಸಲು ವಿಶೇಷ ತಂಡ ತೆರಳಿತ್ತು.
ಈ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ ಮುನ್ನಾಚಾಕುವಿನಿಂದ ಪೊಲೀಸ್ ಪೇದೆ ಬಸವರಾಜ್‌ಗೆ ಹಲ್ಲೆ ನಡೆಸಲು ಮುಂದಾಗಿದ್ದಾನೆ. ಹೀಗಾಗಿ, ನಂದಿನಿ ಲೇಔಟ್ ಠಾಣೆ ಇನ್ಸ್‌ಪೆಕ್ಟರ್ ಲೋಹಿತ್, ತಮ್ಮ ಸರ್ವೀಸ್ ರಿವಾಲ್ವರ್‌ನಿಂದ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಶರಣಾಗುವಂತೆ ಮುನ್ನಾನಿಗೆ ಸೂಚನೆ ನೀಡಿದ್ದಾರೆ.
ಇಷ್ಟಕ್ಕೂ ಬಗ್ಗದ ಮುನ್ನಾ, ಪುನ: ಹಲ್ಲೆ ನಡೆಸಲು ಮುಂದಾಗಿದ್ದಾನೆ. ಈ ಸಂದರ್ಭದಲ್ಲಿ ಆತ್ಮರಕ್ಷಣೆ ಸಲುವಾಗಿ ಇನ್ಸ್‌ಪೆಕ್ಟರ್ ಲೋಹಿತ್,ಆರೋಪಿ ಮುನ್ನಾನ ಎಡಗಾಲಿಗೆ ಗುಂಡು ಹೊಡೆದಿದ್ದು ಕುಸಿದುಬಿದ್ದ ಆತನನ್ನು ಪೊಲೀಸರು ಬಂಧಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ಕಳೆದ ನಾಲ್ಕೈದು ವರ್ಷಗಳಿಂದ ಅಪರಾಧ ಚಟುವಟಿಕೆಗಳಲ್ಲಿ ಸಕ್ರಿಯನಾಗಿದ್ದ ಆರೋಪಿ ಮುನ್ನಾ ತನ್ನದೇ ಗ್ಯಾಂಗ್ ಕಟ್ಟಿಕೊಂಡಿದ್ದ. ಕೊಲೆಯತ್ನ,ಹಲ್ಲೆ ಸೇರಿದಂತೆ ಹಲವು ಕೃತ್ಯಗಳಲ್ಲಿ ಭಾಗಿಯಾಗಿದ್ದಾನೆ. ಮುನ್ನಾನ ವಿರುದ್ಧ ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕಾವೇರಿ ನೀರಿನ ಹಂಚಿಕೆ ವಿವಾದ ಗಲಾಟೆಯಲ್ಲಿ ದೊಂಬಿ ಎಬ್ಬಿಸಿದ ಪ್ರಕರಣ,
-ವಾಹನಗಳಿಗೆ ಬೆಂಕಿ ಹಚ್ಚುವುದು ಸೇರಿದಂತೆ 9 ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ. ಸದ್ಯ ಆರೋಪಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದ್ದು. ತನಿಖೆ ಮುಂದುವರಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.