ಬೆಂಗಳೂರು: ಇತ್ತೀಚೆಗಷ್ಟೇ ಅಬ್ದುಲ್ ಮತೀನ್ ಎಂಬಾತನನ್ನು ಬಾಗಲೂರಿನ ನಿರ್ಜನ ಪ್ರದೇಶದಲ್ಲಿ ಹತ್ಯೆಗೈದು ಪರಾರಿಯಾಗಿದ್ದ ಇಬ್ಬರು ಆರೋಪಿಗಳಿಗೆ ಪೂರ್ವ ವಿಭಾಗದ ಪೊಲೀಸರು ಗುಂಡೇಟಿನ ರುಚಿ ತೋರಿಸಿದ್ದಾರೆ.
ಭಾರತೀನಗರ ನಿವಾಸಿಗಳಾದ ಮೊಹಮ್ಮದ್ ರಿಜ್ವಾನ್(29) ಮತ್ತು ಪರ್ವೇಜ್ ಅಹಮದ್(28) ಗುಂಡೇಟು ತಿಂದವರು. ಇದೇ ವೇಳೆ ಪ್ರಕರಣದ ಇತರೆ ಆರೋಪಿಗಳಾದ ಮೊಹಮ್ಮದ್ ಸಫಾನ್, ಸೈಯದ್ ಅಲಿ, ಯಾಸೀನ್ ಖಾನ್, ಶಾಹೀದ್ ಎಂಬವರನ್ನು ಬಂಧಿಸಲಾಗಿದೆ.
ಆರೋಪಿಗಳು ಜ.16ರಂದು ಅಬ್ದುಲ್ ಮತೀನ್‌ನನ್ನು ಹತ್ಯೆ ಗೈದಿ ದಲ್ಲದೆ, ಅಬೂ ಸೂಫಿಯನ್ ಎಂಬಾತನನ್ನು ಕೊಲೆಗೆ ಯತ್ನಿಸಿದ್ದರು. ಹಲ್ಲೆ ವಿಡಿಯೋ ಸಾಮಾ ಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಸಂಬಂಧ ಪುಲಕೇಶಿನಗರ ಮತ್ತು ಶಿವಾಜಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಜತೆಗೆ ಆರೋಪಿಗಳ ಪತ್ತೆಗೆ ಪೊಲೀಸರು ವಿಶೇಷ ತಂಡ ರಚಿಸಿದ್ದರು.
ಆರೋಪಿಗಳ ಕಾಲಿಗೆ ಗುಂಡೇಟು: ಪ್ರಕರಣದ ಬೆನ್ನತ್ತಿದ್ದ ವಿಶೇಷ ತಂಡ ಘಟನಾ ಸ್ಥಳದ ಸಿಸಿ ಕ್ಯಾಮರಾ ದೃಶ್ಯಾವಳಿ ಆಧರಿಸಿ ಮೊಹಮ್ಮದ್ ತಂಜೀಲ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿತ್ತು. ಈತನ ಮಾಹಿತಿ ಆಧರಿಸಿ ರಿಜ್ವಾನ್ ಮತ್ತು ಫರ್ವೇಜ್ ಅಡಗಿರುವ ಸ್ಥಳ ಗೊತ್ತಾಗಿತ್ತು. ಬಳಿಕ ಅವರ ಚಲನವಲನಗಳ ಮೇಲೆ ನಿಗಾವಹಿಸಿದಾಗ ಸೋಮವಾರ ನಸುಕಿನ ಮೂರು ಗಂಟೆ ಸುಮಾರಿಗೆ ಇಬ್ಬರು ನಂಬರ್ ಪ್ಲೇಟ್ ಇಲ್ಲದ ದ್ವಿಚಕ್ರ ವಾಹನದಲ್ಲಿ ಕಲಪಲ್ಲಿ ಸ್ಮಶಾನದ ರಸ್ತೆಯಲ್ಲಿ ಸಂಚರಿಸುತ್ತಿದ್ದರು ಎಂಬುದು ತಿಳಿಯಿತು.
ಕೂಡಲೇ ಭಾರತೀನಗರ ಇನ್‌ಸ್ಪೆಕ್ಟರ್ ಜಿ.ಪಿ. ರಮೇಶ್ ತಮ್ಮ ತಂಡದೊಂದಿಗೆ ಆರೋಪಿಗಳ ಬಂಧನಕ್ಕೆ ಸ್ಥಳಕ್ಕೆ ತೆರಳಿದ್ದಾರೆ. ಈ ವೇಳೆ ಕಾನ್‌ಸ್ಟೆಬಲ್ ಮಜರ್ ಬೇಗ್ ಎಂಬವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ದ್ದರು. ಆಗ ಆತ್ಮರಕ್ಷಣೆಗಾಗಿ ರಮೇಶ್, ಆರೋಪಿಗಳ ಕಾಲುಗಳಿಗೆ ಗುಂಡು ಹಾರಿಸಿ ವಶಕ್ಕೆ ಪಡೆದುಕೊಂಡಿದ್ದಾರೆ. ಗಾಯಗೊಂಡವರನ್ನು ವಿಕ್ಟೋ ರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಪ್ರಕರಣದ ಹಿನ್ನೆಲೆ?: ಡಿಸೆಂಬರ್‌ನಲ್ಲಿ ಭಾರತೀನಗರ ನಿವಾಸಿ ಇರ್ಷಾದ್ ಎಂಬಾತನನ್ನು ಕೆಲವರು ಗಾಂಜಾ ಸೇವನೆ ವಿಚಾರಕ್ಕೆ ಹತ್ಯೆಗೈದಿದ್ದರು. ಆತನ ಪತ್ನಿ ಜತೆ ಮೊಹಮ್ಮದ್ ಮತೀನ್ ಅನೈತಿಕ ಸಂಬಂಧ ಹೊಂದಿದ್ದರು. ಜತೆಗೆ ಪತಿಯನ್ನು ಕಳೆದುಕೊಂಡಿದ್ದ ಸಹೋದರಿಯನ್ನು ಅಬೂ ಸೂಫಿಯ ಮತೀನ್ ಜತೆ ಮದುವೆ ಮಾಡಲು ಸಿದ್ದತೆ ನಡೆಸಿದ್ದ.
ಈ ವಿಚಾರ ತಿಳಿದ ಇರ್ಷಾದ್ ಸಹೋದರ ಮೊಹಮ್ಮದ್ ರಿಜ್ವಾನ್ ತನ್ನ ಸಹಚರರ ಜತೆ ಸೇರಿ ಜ.16ರಂದು ಮತೀನನ್ನು ಶಿವಾಜಿನಗರದಿಂದ ಅಪಹರಿಸಿ ಬಾಗಲೂರಿನ ನಿರ್ಜನ ಪ್ರದೇಶದಲ್ಲಿ ಕೊಲೆಗೈದಿದ್ದರು. ಬಳಿಕ ಪುಲಕೇಶಿನಗರದ ಎಂಎಂ ರಸ್ತೆಯ ಇಂಡಿಯನ್ ಚಾಯ್ ಪಾಯಿಂಟ್ ಮುಂಭಾಗ ಅಬೂ ಸೂಫಿಯ ಕೊಲೆಗೆ ಯತ್ನಿಸಿದ್ದರು ಎಂದು ಪೊಲೀಸರು ಹೇಳಿದರು.